ವೀರಾಜಪೇಟೆ, ಫೆ. ೨೫: ಗ್ರಾಮೀಣ ಭಾಗದ ಜನತೆಯ ಆರಾಧ್ಯ ದೇವಿಯಾದ ಕೊಡಂಗಲ್ಲೂರು ಅಮ್ಮ ಎಂದು ಪ್ರಖ್ಯಾತಳಾದ ಶ್ರೀ ಕುರುಂಭ ಭಗವತಿ ದೇವಿಯ ವಾರ್ಷಿಕ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ತಾ. ೧೮ ರಂದು ಗಣಪತಿ ಹೋಮದೊಂದಿಗೆ ಆರಂಭವಾಗಿ, ಧ್ವಜಸ್ತಂಭ ಪೂಜೆ ಸಂಜೆ, ಆಯುಧ ಪೂಜೆಗಳು ನೆರವೇರಿತು. ತಾ. ೧೯ ರಂದು ಉಷಾಪೂಜೆ, ಪೂರ್ವಾಹ್ನ ಶ್ರೀ ದೇವಿಗೆ ಮಹಾಪೂಜೆ ಜರುಗಿತು. ವಾರ್ಷಿಕ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಶ್ರೀ ದೇವಿಯ ದರ್ಶನವು ನಡೆಯಿತು.
ದೇವಿ ಸ್ತ್ತುತಿಯಾದ ಭರಣಿ ಪಾಟ್ ಅನ್ನು ದೇವಾಲಯದ ಪ್ರಧಾನ ಅರ್ಚಕ ಶಿವದಾಸ್ ವೆಳಿಚ್ಚಾಪಾಡ್ ಅವರೊಂದಿಗೆ ಭಕ್ತರು ಸೇರಿ ಹಾಡಿದರು.
ತಾಲಪೊಲಿ ಕಾರ್ಯಕ್ರಮ, ದೇವಿದರ್ಶನ, ದೀಪಾರಾಧನೆಗಳು ನಡೆದವು. ದೇವಾಲಯದ ಆಡಳಿತ ಮಂಡಳಿ ವತಿಯಿಂದ ಉತ್ಸವಕ್ಕೆ ಆಗಮಿಸಿದ ಭಕ್ತರಿಗೆ ಎರಡು ದಿನಗಳು ಹಗಲು ಮತ್ತು ರಾತ್ರಿ ವೇಳೆಯಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.