ಬೆAಗಳೂರು, ಫೆ. ೨೫ : ಕಾಂಪ (ಅಂಒPA) ಯೋಜನೆಯಡಿ ಕರ್ನಾಟಕದಲ್ಲಿ ಆನೆ ಅತಿಕ್ರಮಣ ಮಾಡುವ ರೈಲ್ವೇ ಮಾರ್ಗದ ಉದ್ದಕ್ಕೂ ಬ್ಯಾರಿಕೇಡ್ ನಿರ್ಮಾಣ ಮಾಡುವ ಯೋಜನೆಯ ಅನುಷ್ಠಾನಕ್ಕೆ ಕೇಂದ್ರದ ಅನುಮತಿ ಅಗತ್ಯವಿದ್ದು, ಶೀಘ್ರದಲ್ಲೇ ಅರಣ್ಯ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದ ಶಾಸಕರ ನಿಯೋಗವನ್ನು ಕೇಂದ್ರಕ್ಕೆ ಕೊಂಡೊಯ್ಯಲಾಗುವುದು ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅರಣ್ಯ ಪ್ರದೇಶವಿರುವ ವಿಧಾನಸಭಾ ಕ್ಷೇತ್ರದ ಶಾಸಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕರ್ನಾಟಕದ ೬೨೪ ಕಿ.ಮೀ. ರೈಲು ಮಾರ್ಗಕ್ಕೆ ಆನೆಪಥ ನಿರ್ಮಾಣ ಯೋಜನೆಯಡಿ ಬ್ಯಾರಿಕೇಡ್ ಹಾಕುವ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಇದುವರೆಗೆ ೧೬೫ ಕಿ.ಮೀ. ಬೇಲಿ ಹಾಕುವ ಕೆಲಸ ಮುಗಿದಿದೆ. ಇನ್ನೂ ೪೫೦ ಕಿ.ಮೀ. ರೈಲ್ವೇ ಮಾರ್ಗಕ್ಕೆ ಬ್ಯಾರಿಕೇಡ್ ನಿರ್ಮಿಸುವ ಕೆಲಸ ಬಾಕಿ ಇದ್ದು, ಇದಕ್ಕೆ ೫೫೦ಕೋಟಿ ರೂಪಾಯಿ ಅಗತ್ಯವಿದೆ. ಈ ಯೋಜನೆಗೆ ಕೇಂದ್ರದ ಅನುಮತಿ ಅಗತ್ಯವಿದ್ದು, ಶೀಘ್ರದಲ್ಲೇ ಅರಣ್ಯ ಪ್ರದೇಶಗಳಿರುವ ವಿಧಾನಸಭಾ ಕ್ಷೇತ್ರದ ಶಾಸಕರ ನಿಯೋಗದೊಂದಿಗೆ ದೆಹಲಿಗೆ ಹೋಗಿ ಸಂಬAಧಿಸಿದ ಇಲಾಖಾ ಸಚಿವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಜನಪರ ಇಲಾಖೆ ಮಾಡಲು ಕ್ರಮ

ಅರಣ್ಯ ಇಲಾಖೆ ಅಧಿಕಾರಿಗಳಿಂದ ನಾನಾ ಕಾರಣಗಳಿಗಾಗಿ ಜನರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಮುಖ್ಯವಾಗಿ ಅರಣ್ಯವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸುವ ಮತ್ತು ಅವರಿಗೆ ಹಕ್ಕುಪತ್ರ ಕೊಡುವ ಕೆಲಸಗಳು ನೆನೆಗುದಿಗೆ ಬಿದ್ದಿವೆ. ಇಂತಹ ಸಂಗತಿಗಳ ಬಗ್ಗೆ ಇಲಾಖೆ ಶೀಘ್ರ ಕ್ರಮಕೈಗೊಂಡು ಅವರಿಗೆ ನೆರವಾಗುವಂತೆ ನಾನು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅರಣ್ಯ ಇಲಾಖೆ ಜನಪರ ಇಲಾಖೆಯಾಗಿ, ಜನಸ್ನೇಹಿಯಾಗಿ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಶಾಸಕರು ಪ್ರಾಣಿಗಳ ಹಾವಳಿಯಿಂದ ಸಾವಿಗೀಡಾದವರಿಗೆ ನೀಡಬೇಕಾದ ಪರಿಹಾರ ಶೀಘ್ರ ದೊರೆಯುವಂತಾಗಬೇಕು. ಬೆಳೆಹಾನಿ ಪರಿಹಾರ ಮೊತ್ತ ಹೆಚ್ಚಿಸಬೇಕು, ಪಶು ಮರಣಕ್ಕೆ ಮತ್ತು ಇತರ ಸಣ್ಣ ಪ್ರಾಣಿಗಳ ಮರಣಕ್ಕೆ ಕೊಡಲಾಗುತ್ತಿರುವ ಪರಿಹಾರ ತುಂಬ ಕಡಿಮೆ ಇದೆ. ಅದು ಈಗಿನ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ನಿಗದಿಯಾಗಬೇಕು ಎಂದು ಮನವಿ ಮಾಡಿದರು. ಹಾಡಿ ಮತ್ತು ಅರಣ್ಯ ದೊಳಗಿನ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂಬ ಬೇಡಿಕೆಗಳ ಬಗ್ಗೆ ಗಮನ ಸೆಳೆದರು. ಈ ಎಲ್ಲದರ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಸಚಿವ ಅರವಿಂದ ಲಿಂಬಾವಳಿ ಈ ಎಲ್ಲದರ ಬಗ್ಗೆ ನಾನು ಇಲಾಖೆಯ ಉನ್ನತಾಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುತ್ತೇನೆ. ಇಲಾಖೆಯ ಕೆಳಹಂತದ ಅಧಿಕಾರಿಗಳಿಂದ ಆಗುತ್ತಿರುವ ತೊಂದರೆಗಳ ನಿವಾರಣೆಗೆ ಜಿಲ್ಲಾವಾರು ಅರಣ್ಯ ಅಧಿಕಾರಿಗಳಿಗೆ ಅಹವಾಲು ವಿಲೇವಾರಿ ಮಾಡುವ ಬಗ್ಗೆ ಕಾರ್ಯಾಗಾರ ನಡೆಸಿ ಸೂಚನೆ ನೀಡಲಾಗುತ್ತದೆ ಎಂದು ಹೇಳಿದರು. ಸಭೆಯಲ್ಲಿ ಜಿಲ್ಲೆಯ ಶಾಸಕರುಗಳಾದ ಕೆ. ಜಿ. ಬೋಪಯ್ಯ, ಅಪ್ಪಚ್ಚು ರಂಜನ್ ಇತರ ಜಿಲ್ಲೆಯ ಶಾಸಕರು, ಅಧಿಕಾರಿಗಳು ಹಾಜರಿದ್ದರು.

- ರವಿಕುಮಾರ್