ಮಡಿಕೇರಿ, ಫೆ.೨೫: ರಾಜ್ಯ ಪತ್ರಾಗಾರ ಇಲಾಖೆ ವತಿಯಿಂದ ‘ಚೀಫ್ ಕಮಿಷನರ್ ಆಫ್ ಕೂರ್ಗ್’ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ನಿರ್ದೇಶಕರಾದ ರಾಜಮ್ಮ ಚೌಡರೆಡ್ಡಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಮೈಸೂರು ವಿಭಾಗೀಯ ಪತ್ರಾಗಾರ ಕಚೇರಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಇತಿಹಾಸ ವಿಭಾಗ ಇವರ ಸಹಯೋಗದಲ್ಲಿ ಗುರುವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿರುವ ಐತಿಹಾಸಿಕ ದಾಖಲೆಗಳ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೊಡಗು ಜಿಲ್ಲೆಯ ಐತಿಹಾಸಿಕ ದಾಖಲೆಗಳ ಡಿಜಿಟಲೀಕರಣಕ್ಕಾಗಿ ಸರ್ಕಾರ ೨೦೧೮ ರಲ್ಲಿ ೧ ಕೋಟಿ ರೂ. ಬಿಡುಗಡೆ ಮಾಡಿದ್ದು, ಜಿಲ್ಲಾಡಳಿತ ಸಹಕಾರದಲ್ಲಿ ಪ್ರಗತಿಯಲ್ಲಿದೆ ಎಂದು ಪತ್ರಾಗಾರ ಇಲಾಖೆಯ ನಿರ್ದೇಶಕರು ಹೇಳಿದರು. ಸಾಮ್ರಾಟ್ ಅಶೋಕನ ಕಾಲದಿಂದ ಈಗಿನವರೆಗೆ ಸಾಮಾಜಿಕ, ಆರ್ಥಿಕ ಬೆಳವಣಿಗೆ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ತಿಳಿದುಕೊಳ್ಳುವಂತಾಗಬೇಕು.

ಹರಪ್ಪ, ಮೊಹೆಂಜೋದಾರ, ಸಿಂಧೂ ಬಯಲಿನ ನಾಗರಿಕತೆಯಿಂದ ಆರಂಭವಾಗಿ ಶಿಲ್ಪಗಳು, ಕೆತ್ತನೆ, ಗೋಡೆ ಬರಹ, ನಾಣ್ಯಗಳು, ಆಯುಧಗಳು ಹೀಗೆ ಹಲವು ಕುರುಹುಗಳನ್ನು ಕಾಣುತ್ತೇವೆ. ಇತಿಹಾಸ ನಿರ್ಮಾಣ ಹಾಗೂ ಸಂಶೋಧನೆಗೆ ಪ್ರಾಚೀನ ದಾಖಲೆಗಳು ಅಗತ್ಯ ಎಂದು ರಾಜಮ್ಮ ಚೌಡರೆಡ್ಡಿ ತಿಳಿಸಿದರು. ಮಾನವನ ಬದುಕಿನಲ್ಲಿ ಸಾಹಿತ್ಯ ಮತ್ತು ಇತಿಹಾಸ ಅಡಿಪಾಯವಾಗಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇವುಗಳನ್ನು ಸಂಶೋಧನೆ ಮಾಡಬೇಕು. ಜ್ಞಾನದ ಹಸಿವು ಹೆಚ್ಚು ಇರಬೇಕು. ಪುಸ್ತಕಗಳನ್ನು ಅಧ್ಯಯನ ಮಾಡಬೇಕು ಎಂದರು.

ಪತ್ರಾಗಾರ ಇಲಾಖೆಯ ಮೈಸೂರು ವಿಭಾಗದ ಹಿರಿಯ ಸಹಾಯಕ ನಿರ್ದೇಶಕರಾದ ಎಚ್.ಎಲ್.ಮಂಜುನಾಥ ಅವರು ಮಾತನಾಡಿ ಪತ್ರಾಗಾರ ಇಲಾಖೆಯಿಂದ ೧೫೦ ವರ್ಷಗಳ ಚಾರಿತ್ರಿಕ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಕೊಡಗು ಚೀಫ್ ಕಮೀಷನರ್ ಅವರು ೧೯೦೭ ರಲ್ಲಿ ಪ್ಲೇಗ್ ರೋಗ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮದ ಬಗ್ಗೆ, ರಜೆಯ ಮಂಜೂರಾತಿಯ ಬಗ್ಗೆ, ಮುನಿಸಿಪಲ್ ಇಲಾಖೆಯ ಬೈಲಾ ನಿಬಂಧನೆಗಳ ಬಗ್ಗೆ, ಲ್ಯಾಂಡ್ ಇಂಪ್ರೂವ್‌ಮೆAಟ್ ಆಕ್ಟ್ ಬಗ್ಗೆ ಮತ್ತು ಕೊಡಗಿನಲ್ಲಿ ಚಿಲ್ಲರೆ ಪದಾರ್ಥಗಳ ಮಾರಾಟದ ಬಗ್ಗೆ ಹೊರಡಿಸಿರುವ ಆದೇಶಗಳು ಮತ್ತಿತರ ಐತಿಹಾಸಿಕ ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ.

ಮೈಸೂರು ಮಹಾರಾಜರ ಆಡಳಿತ, ಕೊಡಗು ಅರಸರ ಆಡಳಿತ ಹೀಗೆ ಹಲವು ಚಾರಿತ್ರಿಕ ದಾಖಲೆಗಳು ಹಾಗೂ ಛಾಯಾ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಪ್ರಾಂಶುಪಾಲ ಪ್ರೊ.ಡಿ.ಜೆ.ಜವರಪ್ಪ ಮಾತನಾಡಿ ಪ್ರಾಚೀನ ಇತಿಹಾಸವನ್ನು ಮರೆಯಬಾರದು. ಹಿಂದಿನದೇ ಅಡಿಪಾಯವಾಗಿದೆ. ಹಿಂದೆ ಕಾಸಿನ(ಹಣ) ಮೌಲ್ಯ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದರು.

ಸಹಾಯಕ ಪ್ರಾಧ್ಯಾಪಕ ಎನ್.ಪಿ.ಸತೀಶ್ ಅವರು ಮಾತನಾಡಿ, ಕೊಡಗಿನ ಇತಿಹಾಸದ ಬಗ್ಗೆ ಅಧ್ಯಯನ ಮಾಡಬೇಕು. ಏಷ್ಯ ಖಂಡದಲ್ಲಿಯೇ ಮೈಸೂರು ಮಹಾರಾಜರ ಕೊಡುಗೆ ಅಪಾರ ಎಂದು ಅವರು ವರ್ಣಿಸಿದರು. ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಚಾಲಕರಾದ ಡಾ.ಕನ್ನಿಕಾ ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಚಿತ್ರಾ ವೈ. ಇತರರು ಇದ್ದರು.