ಕುಶಾಲನಗರ, ಫೆ. ೨೪: ವಾಣಿಜ್ಯ ಬೆಳೆಯಾದ ಶುಂಠಿ ಇದೀಗ ಮೊದಲ ಬಾರಿಗೆ ವಿದೇಶಕ್ಕೆ ರಫ್ತಾಗುವು ದರೊಂದಿಗೆ ಉತ್ತಮ ಬೆಲೆಯೊಂದಿಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಯಾಗಲು ಗ್ರಾಮೀಣ ಪ್ರದೇಶಗಳಲ್ಲಿ ಅವಕಾಶ ಒದಗಿಬಂದಿದೆ.

ಉತ್ತಮ ಗುಣಮಟ್ಟದ ರಿಯೊಡಿ ಜೆನೆರಿಯ ಎಂಬ ತಳಿಯ ಶುಂಠಿಯನ್ನು ಇದೀಗ ಮಲೇಷ್ಯಾ, ಬಾಂಗ್ಲಾ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಈ ಮೂಲಕ ಕೊಡಗು ಮತ್ತು ನೆರೆಯ ಮೈಸೂರು ವ್ಯಾಪ್ತಿಯಲ್ಲಿ ಬೆಳೆಯುತ್ತಿರುವ ಉತ್ತಮ ಗುಣಮಟ್ಟದ ಶುಂಠಿಗೆ ಅಧಿಕ ಬೆಲೆ ದೊರಕುವ ಸಾಧ್ಯತೆ ಹೇರಳವಾಗಿದೆ. ಸ್ಥಳೀಯ ಕಾರ್ಮಿಕರಿಗೆ ಕೆಲಸ ಕೂಡ ದೊರೆಯುವ ಅವಕಾಶ ಸೃಷ್ಟಿಯಾಗಲಿದೆ.

ಕುಶಾಲನಗರ ಸುತ್ತಮುತ್ತ ಹೆಬ್ಬಾಲೆ, ಸಿದ್ಧಲಿಂಗಪುರ, ತೊರೆನೂರು, ಕಣಿವೆ ಸೇರಿದಂತೆ ಕಾವೇರಿ ತಟದ ಹೊಲಗಳಲ್ಲಿ ಎಕರೆಗಟ್ಟಲೆ ಶುಂಠಿ ಬೆಳೆ ಇತ್ತೀಚಿನ ಬೆಳವಣಿಗೆಯಾಗಿದೆ. ಕೊಡಗು ಮತ್ತು ಮೈಸೂರು ಗಡಿಭಾಗದ ೧೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆ ಬೆಳೆಯುತ್ತಿದ್ದು ಶುಂಠಿಯ ಗುಣಮಟ್ಟ ಬಹುತೇಕ ಕುಸಿತ ಕೂಡ ಉಂಟಾಗುತ್ತಿದೆ.

ಉತ್ತಮ ಗುಣಮಟ್ಟದ ಶುಂಠಿಯನ್ನು ಇದುವರೆಗೆ ಅಹಮದಾಬಾದ್, ಚೆನ್ನೆöÊ ಸೇರಿದಂತೆ ದೇಶದ ಗಡಿಭಾಗದಲ್ಲಿ ಖರೀದಿ ಮಾಡುವ ಸಂಸ್ಥೆಗಳು ಇಲ್ಲಿನ ಶುಂಠಿಗೆ ಬೇಡಿಕೆ ಇಡುತ್ತಿದ್ದವು. ಇದೀಗ ಮಲೇಷ್ಯಾ, ಬಾಂಗ್ಲಾದೇಶದ ಕೆಲವು ಸಂಸ್ಥೆಗಳು ಸ್ಥಳೀಯ ಶುಂಠಿಗೆ ಬೇಡಿಕೆ ಇಟ್ಟಿರುವುದು ಸಂತಸದ ವಿಷಯ ಎನ್ನುತ್ತಾರೆ ಹೆಬ್ಬಾಲೆ ಬಳಿ ಗ್ರಾಮದ ಶುಂಠಿ ಬೆಳೆಗಾರ ಶುಂಟಿ ಬೇಬಿ. ಉತ್ತಮ ಗುಣಮಟ್ಟದ ಶುಂಠಿ ದೊರಕಿದಲ್ಲಿ ಹೊರದೇಶಗಳಿಗೆ ರಫ್ತು ಮಾಡಲು ಸಾಧ್ಯ ಎನ್ನುತ್ತಾರೆ.

ಒಂದೇ ರೀತಿಯ ಬೆಳೆಗೆ ರೈತರು ಮಾರುಹೋದಾಗ ಗುಣಮಟ್ಟ ಕುಸಿತವಾಗುತ್ತಿರುವುದು ಬೆಂಬಲ ಬೆಲೆ ದೊರಕದಿರಲು ಇನ್ನೊಂದು ಕಾರಣ ಎಂದು ಬೇಬಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಅಪ್ಪಂಗಳ ಸಂಬಾರ ಸಂಶೋಧನಾಲಯದ ವಿಜ್ಞಾನಿ ಡಾ. ಅಂಕೇಗೌಡ ಅವರ ಪ್ರಕಾರ ಕೊಡಗಿನಲ್ಲಿ ರಿಯೊಡಿ ಜೆನೆರಿಯಾ ಶುಂಠಿ ತಳಿ ಉತ್ತಮವಾಗಿ ಬೆಳೆಯುತ್ತಿದೆ.

ಸಮೀಪದ ಬೆಟ್ಟದಪುರ ಹೋಬಳಿಯ ಗ್ರಾಮಗಳಲ್ಲಿ ತಂಬಾಕು ಬೆಳೆಗೆ ಪರ್ಯಾಯವಾಗಿ ಬೆಳೆ ಕಂಡುಹಿಡಿದಿರುವ ರೈತಾಪಿ ವರ್ಗ ಇತ್ತೀಚಿನ ವರ್ಷಗಳಲ್ಲಿ ತಮ್ಮ ಬೆಳೆಗೆ ಬೆಂಬಲ ಬೆಲೆಯ ಕೊರತೆ ಎದುರಿಸುತ್ತಿದ್ದರು. ಇದರೊಂದಿಗೆ ಕಳೆದ ಹಲವು ದಶಕಗಳಿಂದ ಈ ವ್ಯಾಪ್ತಿಯ ಮೂಲ ಬೆಳೆಯಾದ ತಂಬಾಕು, ಜೋಳ ಹಲವು ಕಾರಣಗಳಿಂದ ಬೆಂಬಲ ಬೆಲೆ ದೊರೆಯದೆ ರೈತಾಪಿ ವರ್ಗ ಸಂಕಷ್ಟಕ್ಕೆ ಈಡಾಗಿತ್ತು.

ಈ ಎಲ್ಲಾ ಹಿನ್ನೆಲೆ ರೈತರೇ ಶುಂಠಿಯ ವೈವಿಧ್ಯತೆ ಪರಿಚಯ ಮಾಡುವುದರೊಂದಿಗೆ ಶುಂಠಿ ಈ ಭಾಗದಲ್ಲಿ ವಾಣಿಜ್ಯ ಬೆಳೆಯಾಗಿ ವ್ಯಾಪಿಸಿಕೊಂಡಿರುವುದು ರೈತಾಪಿ ವರ್ಗದಲ್ಲಿ ಸಂತಸದ ಸಂಗತಿ ಎನಿಸಿದೆ. ಬೆಟ್ಟದಪುರದ ವ್ಯಾಪ್ತಿಯ ಕಿತ್ತೂರು, ಜೋಗನಹಳ್ಳಿ, ದೊಡ್ಡಗೌಡನಕೊಪ್ಪಲು ಗ್ರಾಮಗಳಲ್ಲಿ ಬೆಳೆದ ಶುಂಠಿಯನ್ನು ಶುಚಿ ಮಾಡಿ ವಿದೇಶಕ್ಕೆ ಕಳುಹಿಸುವ ಕೆಲಸ ನಡೆದಿದೆ. ಒಂದು ಬಾಕ್ಸ್ನಲ್ಲಿ ೮ ಕೆ.ಜಿ.ಯಂತೆ ಪ್ಯಾಕ್ ಮಾಡಿ ೨೪ ಟನ್ ಶುಂಠಿಯನ್ನು ಹವಾನಿಯಂತ್ರಿತ ಕಂಟೇನರ್‌ನಲ್ಲಿ ರಫ್ತು ಮಾಡಲು ಈ ಗ್ರಾಮಗಳಲ್ಲಿ ಕಾರ್ಯಯೋಜನೆಗಳು ಸಿದ್ಧವಾಗಿದ್ದು ಇದರಿಂದ ದಿನನಿತ್ಯ ನೂರಾರು ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರಕಿದೆ.

ಮುಂದಿನ ದಿನಗಳಲ್ಲಿ ತಿಂಗಳಿಗೆ ೨೦೦ ಟನ್ ಶುಂಠಿಯ ಬೇಡಿಕೆಯಿದ್ದು ಇದರಿಂದ ರೈತರ ಆದಾಯ ದ್ವಿಗುಣಗೊಳ್ಳುವುದರ ಜೊತೆಗೆ ಗ್ರಾಮೀಣ ಭಾಗದ ಕಾರ್ಮಿಕರಿಗೆ ಕೆಲಸ ಕೂಡ ದೊರೆಯಲಿದೆ ಎಂದು ಶುಂಠಿ ವಾಷಿಂಗ್ ಆಂಡ್ ಟ್ರೇಡಿಂಗ್ ಸಂಸ್ಥೆಯ ಕುಲದೀಪ್ ಮಾಹಿತಿ ನೀಡಿದ್ದಾರೆ.

ಕೊಡಗು ಜಿಲ್ಲೆಯ ಕಾವೇರಿ ನದಿ ತಟದ ಎರಡೂ ಭಾಗಗಳಲ್ಲಿ ಶುಂಠಿ ಬೆಳೆ ಹೇರಳವಾಗಿ ಬೆಳೆಯಲಾಗುತ್ತಿದೆ ಎಂದು ತಿಳಿಸಿರುವ ಕುಶಾಲನಗರ ಶುಂಠಿ ಉದ್ಯಮಿ ಪ್ರತಾಪ್, ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಬೀಳುವ ಕಾರಣ ಶುಂಠಿಯ ಗುಣಮಟ್ಟ ಸ್ವಲ್ಪ ಕ್ಷೀಣಗೊಳ್ಳಲು ಕಾರಣವಾಗಿದೆ. ಮಳೆ ಕಡಿಮೆ ಇದ್ದ ಪ್ರದೇಶದಲ್ಲಿ ಉತ್ತಮ ಶುಂಠಿ ಪಡೆಯಲು ಸಾಧ್ಯ ಎಂದು ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ. ಹೊಲದಲ್ಲಿ ಪ್ರಥಮ ಬಾರಿಗೆ ಬೆಳೆದ ಶುಂಠಿ ಉತ್ತಮ ಗುಣಮಟ್ಟ ದಲ್ಲಿರುತ್ತದೆ ಎಂದು ಅವರು ತಿಳಿಸಿದ್ದು ನಂತರದ ಬೆಳೆಗಳು ತನ್ನ ಗುಣಮಟ್ಟವನ್ನು ಕಳೆದುಕೊಳ್ಳುತ್ತವೆ ಎಂದು ಹೇಳುತ್ತಾರೆ.

ಒಣ ಪ್ರದೇಶದಲ್ಲಿ ಬೆಳೆಯುವ ಶುಂಠಿಗೆ ಹೆಚ್ಚಿನ ಬೇಡಿಕೆಯಿದ್ದು ಶುಂಠಿಯ ವೈವಿಧ್ಯತೆಯನ್ನು ವಿದೇಶಗಳಿಗೆ ಪರಿಚಯಿಸುವುದು ತಮ್ಮ ಪ್ರಯತ್ನವಾಗಿದೆ ಎಂದು ಬೆಳೆಗಾರ ಅಸ್ಲಾಂ ಫೈಜಲ್ ಎಂಬವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ರೈತರು ಶುಂಠಿ ಬೆಳೆಯಲು ಹೆಚ್ಚು ರಾಸಾಯನಿಕ ಗೊಬ್ಬರ ಬಳಸದೆ ಸಾವಯವ ಗೊಬ್ಬರ ಬಳಸಿ ಭೂಮಿಯ ಫಲವತ್ತತೆಗೂ ಹೆಚ್ಚಿನ ಒತ್ತು ನೀಡಬೇಕು ಎನ್ನುವುದು ಈ ಭಾಗದ ರೈತರ ಆಶಯವಾಗಿದೆ.

ಸ್ಥಳೀಯವಾಗಿ ಬೆಳೆಯುವ ಶುಂಠಿ ಚೀನಾ ದೇಶದಲ್ಲಿ ಬೆಳೆಯುವ ಶುಂಠಿಗೆ ಪೈಪೋಟಿ ನೀಡಲಿದ್ದು ಈ ಭಾಗದ ರೈತರ ಅಭಿವೃದ್ಧಿಗೆ ವಿದೇಶಕ್ಕೆ ಸಾಗಿಸುವ ಶುಂಠಿ ಕಾರಣವಾಗಲಿದೆ ಎನ್ನುವುದು ರೈತರ ಅಭಿಪ್ರಾಯವಾಗಿದೆ.

- ಎಂ.ಎನ್. ಚಂದ್ರಮೋಹನ್