ನಾಪೋಕ್ಲು, ಫೆ. ೨೪: ಕೊಡಗು ಜಿಲ್ಲೆಯು ದೇಶಕ್ಕೆ ಅಪಾರ ಸೈನ್ಯಾಧಿಕಾರಿಗಳನ್ನು ನೀಡಿದ ಜಿಲ್ಲೆಯಾಗಿದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಜಿ ಸೈನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಅವರನ್ನು ಕಡೆಗಣಿಸಲಾಗುತ್ತಿದೆ ಎಂದು ನಾಪೋಕ್ಲು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಾಡೆಯಂಡ ಶಂಭು ಆರೋಪಿಸಿದ್ದಾರೆ.

ಮಾಜಿ ಸೈನಿಕರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸೈನಿಕರು ದೇಶರಕ್ಷಣೆಗಾಗಿ ತಮ್ಮ ಪ್ರಾಣವನ್ನು ಒತ್ತೆಇಟ್ಟು ದುಡಿದು ನಿವೃತ್ತಿ ಹೊಂದಿದ ನಂತರ ಇವರಿಗೆ ಸರಕಾರ ತೊಂದರೆ ನೀಡುತ್ತಿದೆ. ನಿವೃತ್ತಿಯಾಗಿ ಬಂದ ಮೇಲೆ ಉಳಿದ ಸ್ವಲ್ಪ ಜಾಗದಲ್ಲಿ ಬಾಳಬೇಕಾದ ಅನಿವಾರ್ಯತೆಯಿದೆ. ಸರಕಾರ ಮಾಜಿ ಸೈನಿಕರಿಗೆ ಸರಕಾರಿ ಜಾಗವನ್ನು ಮಂಜೂರು ಮಾಡಲು ಶಿಫಾರಸ್ಸು ಮಾಡಿದ್ದರೂ, ಇದು ಇನ್ನು ಮಾಜಿ ಸೈನಿಕರ ಸುಪರ್ದಿಗೆ ಬಂದಿಲ್ಲ. ಕೊಡಗಿನಲ್ಲಿ ಸುಮಾರು ೧೩೦ ಜನರು ಸರಕಾರಿ ಜಾಗಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಅದರಲ್ಲಿ ಒಂದು ಅರ್ಜಿ ಮಾತ್ರ ವಿಲೇವಾರಿಯಾಗಿದೆ. ಉಳಿದವರಿಗೆ ಯಾಕೆ ಜಾಗ ನೀಡಲಿಲ್ಲ ಎಂದು ಪ್ರಶ್ನಿಸಿದರು. ಅದರಂತೆ ಸರಕಾರದಿಂದ ಸಿಗಬೇಕಾದ ಸಾಮಾಜಿಕ ಮತ್ತು ಆರ್ಥಿಕ ಬೆಂಬಲ ಸಹ ಇಂದು ಇಲ್ಲದಂತಾಗಿದೆ ಎಂದರು.

ಮಾಜಿ ಸೈನಿಕರಿಗೆ ಬೆಲೆಯೇ ಇಲ್ಲ ಎಂದು ವಿಷಾಧ ವ್ಯಕ್ತಪಡಿಸಿರುವ ಅವರು ಸರಕಾರ ಕೂಡಲೇ ಸೈನಿಕರು ನೀಡಿದ ಅರ್ಜಿಗೆ ಮನ್ನಣೆಯನ್ನು ನೀಡಿ ಅವರಿಗೆ ಜಾಗವನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಕೊಂಡಿರ ನಾಣಯ್ಯ, ಕಾರ್ಯದರ್ಶಿ ಕೇಟೋಳಿರ ಅಪ್ಪಚ್ಚ, ಅಬ್ದುಲ್ ಕರೀಂ, ಅಪ್ಪುಮಣಿಯಂಡ ನಾಣಯ್ಯ, ಪುಲ್ಲೇರ ವಿಠಲ ಕಾಳಪ್ಪ, ಪಾಡಿಯಮ್ಮಂಡ ಅಪ್ಪಣ್ಣಮ್ಮಯ್ಯ, ಪಾಡಿಯಮ್ಮಂಡ ಅಶೋಕ್ ಮತ್ತಿತರರು ಇದ್ದರು.