ಸಿದ್ದಾಪುರ, ಫೆ. ೨೪: ಅಧ್ಯಕ್ಷರ ಆಡಳಿತ ಮಂಡಳಿ ಸದಸ್ಯರ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎದುರಿನಲ್ಲಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಕಸ ಹಾಗೂ ತ್ಯಾಜ್ಯಗಳನ್ನು ಸುರಿಯುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರಿಗೆ ಒಪ್ಪಿಸಿದ ಪ್ರಸಂಗ ನಡೆದಿದೆ.

ಸಿದ್ದಾಪುರದ ಪ್ರಶಾಂತ್ ಹಾಗೂ ಚಂದ್ರ ಎಂಬವರು ಸಿದ್ದಾಪುರದ ವೀರಾಜಪೇಟೆ ರಸ್ತೆಯಲ್ಲಿರುವ ಅಂಬೇಡ್ಕರ್ ನಗರದ ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಎದುರಿನಲ್ಲಿ ಕಸ ಹಾಗೂ ತ್ಯಾಜ್ಯಗಳನ್ನು ಎಸೆಯುತ್ತಿದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಇವರುಗಳು ಬಂದAತಹ ದ್ವಿಚಕ್ರವಾಹನವನ್ನು ತಡೆಹಿಡಿದ ಪಂಚಾಯತಿಯವರು ಇಬ್ಬರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತ್ಯಾಜ್ಯ ಸುರಿದ ಹಿನ್ನೆಲೆಯಲ್ಲಿ ಅವರುಗಳಿಗೆ ರೂ. ೫೦೦೦ ದಂಡ ವಿಧಿಸಲಾಗಿದೆ.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ತುಳಸಿ ಹಾಗೂ ಪಂಚಾಯತಿ ಸದಸ್ಯರು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಹಾಜರಿದ್ದರು. ರಸ್ತೆಬದಿಗಳಲ್ಲಿ ಹಾಗೂ ಪಟ್ಟಣಗಳ ಮಧ್ಯದಲ್ಲಿ ಕಸ ಹಾಗೂ ತ್ಯಾಜ್ಯಗಳನ್ನು ಸುರಿಯುವ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದೆಂದು ಆಡಳಿತ ಮಂಡಳಿ ಹಾಗೂ ಪಿಡಿಒ ತಿಳಿಸಿದ್ದಾರೆ.