ಕುಶಾಲನಗರ, ಫೆ. ೨೪: ಕುಶಾಲನಗರದ ಸಿದ್ದಯ್ಯ ಪುರಾಣಿಕ್ ಬಡಾವಣೆಯ ಜನವಸತಿ ಪ್ರದೇಶದಲ್ಲಿ ಮೊಬೈಲ್ ಟವರ್ ಅಳವಡಿಕೆ ಕಾರ್ಯದ ಬಗ್ಗೆ ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಆರೋಪ ವ್ಯಕ್ತಪಡಿಸಿದ ಬಡಾವಣೆ ನಿವಾಸಿಗಳು ಪಟ್ಟಣ ಪಂಚಾಯಿತಿ, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೂ ಖಾಸಗಿ ಸಂಸ್ಥೆಯೊAದು ನಿಯಮಬಾಹಿರವಾಗಿ ಮೊಬೈಲ್ ಟವರ್ ಅಳವಡಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ ರೂಪ ವಿನೋದ್, ಸ್ಥಳೀಯ ನಿವಾಸಿಗಳ ವಿರೋಧವಿದ್ದರೂ ಅದನ್ನು ಲೆಕ್ಕಿಸದೆ ಟವರ್ ನಿರ್ಮಾಣವಾಗುತ್ತಿದೆ. ಇದರಲ್ಲಿ ಸ್ಥಳೀಯ ಪ.ಪಂ. ಸದಸ್ಯೆಯೊಬ್ಬರ ಕೈವಾಡವಿದ್ದು ಅವರಿಗೆ ಸೇರಿದ ಜಾಗದಲ್ಲಿ ಟವರ್ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.

ಪ್ರಸ್ತುತ ಪ್ರದೇಶದಲ್ಲಿ ಮೊಬೈಲ್ ಸಿಗ್ನಲ್‌ಗೆ ಯಾವುದೇ ಸಮಸ್ಯೆಯಿಲ್ಲದಿದ್ದರೂ ಅನಗತ್ಯವಾಗಿ ಖಾಸಗಿ ಸಂಸ್ಥೆಯೊAದರ ಟವರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ನ್ಯಾಯಾಲಯದ ಮೊರೆ ಹೋಗುವುದಾಗಿ ಬಡಾವಣೆ ನಿವಾಸಿಗಳಾದ ಬಾಲ್‌ರಾಜ್, ಎಂ.ಟಿ. ಗಣಪತಿ, ವಿನೋದ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಪ.ಪಂ. ಅಧ್ಯಕ್ಷ ಬಿ. ಜೈವರ್ಧನ್, ನಿಯಮ ಪ್ರಕಾರ ಟವರ್ ನಿರ್ಮಾಣ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಬಡಾವಣೆ ನಿವಾಸಿಗಳಾದ ಕುಸುಮ, ರಾಧ ಕೃಷ್ಣಮೂರ್ತಿ ಶೆಟ್ಟಿ ಇದ್ದರು.