ಗೋಣಿಕೊಪ್ಪಲು, ಫೆ. ೨೪: ಹುಲಿ ದಾಳಿ ತಡೆಗೆ ಅರಣ್ಯ ಮಂತ್ರಿ ದಕ್ಷಿಣ ಕೊಡಗಿಗೆ ಆಗಮಿಸಿ ಹುಲಿ ಕಾರ್ಯಾಚರಣೆ ಬಗ್ಗೆ ಸಮಗ್ರ ಚರ್ಚೆ ನಡೆಸಿ,ನರಭಕ್ಷಕ ಹುಲಿಯನ್ನು ಗುಂಡಿಕ್ಕುವ ತೀರ್ಮಾನಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ರೈತರ ಮುಂದೆ ಸಭೆಯಲ್ಲಿ ಸ್ಪಷ್ಟ ನಿರ್ದೇಶನ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಒತ್ತಾಯಿಸಿದ್ದಾರೆ.ಪೊನ್ನಂಪೇಟೆಯ ಪ್ರವಾಸಿ ಮಂದಿರದಲ್ಲಿ ಆಯೋಜನೆಗೊಂಡಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮನುಸೋಮಯ್ಯ ಕೊಡಗಿನ ಶ್ರೀಮಂಗಲ, ಟಿ.ಶೆಟ್ಟಿಗೇರಿ ಹಾಗೂ ಇತರೆಡೆಯಲ್ಲಿ ನರಭಕ್ಷಕ ಹುಲಿಯು ತಿರುಗಾಟ ನಡೆಯುತ್ತಲೇ ಇದ್ದು, ವಿವಿಧ ಭಾಗದಲ್ಲಿ ಹುಲಿಯ ಸಂಚಾರದ ಬಗ್ಗೆ ಹೆಜ್ಜೆ ಗುರುತುಗಳು ಕಂಡುಬAದಿದೆ. ಪ್ರಾಣ ಭಯದೊಂದಿಗೆ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ದ.ಕೊಡಗಿನ ವಿವಿಧ ಭಾಗದಲ್ಲಿ ಆರಕ್ಕಿಂತ ಹೆಚ್ಚು ಹುಲಿಯ ಸಂಚಾರವಿದ್ದು ಇವುಗಳನ್ನು ನಿಯಂತ್ರಣಕ್ಕೆ ತರಲು ತಕ್ಷಣ ಅರಣ್ಯ ಸಚಿವರ ಸಮ್ಮುಖದಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಕರೆದು ಹುಲಿಯ ನಿಯಂತ್ರಣಕ್ಕೆ ಅಂತ್ಯ ಹಾಡಬೇಕು. ಅರಣ್ಯ ಸಚಿವರು ವಾರದೊಳಗೆ ಸಭೆ ಕರೆಯಲುವಿಫಲರಾದರೆ ಕೊಡಗಿನ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕೊಡಗು ಬಂದ್‌ಗೆ ಕರೆ ನೀಡಲಾಗುವುದೆಂದು ಮನುಸೋಮಯ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ.ಟಿ.ಶೆಟ್ಟಿಗೇರಿಯಲ್ಲಿ ಅಮಾಯಕ ಮಹಿಳೆ ಮೇಲೆ ಹುಲಿ ದಾಳಿ ನಡೆಸಿದ್ದನ್ನು ಖಂಡಿಸಿ ರೈತ ಸಂಘ ಹಾಗೂ ಗ್ರಾಮಸ್ಥರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಅರಣ್ಯ

(ಮೊದಲ ಪುಟದಿಂದ) ಇಲಾಖೆಯ ಉನ್ನತ ಅಧಿಕಾರಿಗಳು ಕೂಡಲೇ ರೈತರೊಂದಿಗೆ ತುರ್ತು ಸಭೆ ನಡೆಸಿ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಬಗ್ಗೆ ಸಭೆ ನಡೆಸುವ ತೀರ್ಮಾನ ಕೈಗೊಂಡಿದ್ದರು ಈ ಬಗ್ಗೆ ಇಲ್ಲಿಯ ತನಕ ಯಾವುದೇ ಕ್ರಮ ಕೈಗೊಂಡಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ರೈತರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ದ.ಕೊಡಗಿನ ವಿವಿಧ ಭಾಗದಲ್ಲಿ ಹುಲಿಯ ಸಂಚಾರದ ಹಿನ್ನಲೆಯಲ್ಲಿ ಈ ಭಾಗದ ಶಾಲಾ ಕಾಲೇಜುಗಳಿಗೆ ರಜೆ ನೀಡಿರುವುದರಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯಲು ಅರಣ್ಯ ಇಲಾಖೆಯ ಅಧಿಕಾರಿಗಳು ವಾಹನದ ವ್ಯವಸ್ಥೆಯನ್ನು ಕಲ್ಪಿಸಬೇಕು. ಮನುಷ್ಯನ ಮೇಲೆ ಎರಗುವ ಪರಿಸ್ಥಿತಿ ಸಂಭವಿಸಿದಲ್ಲಿ ರೈತರ ಬಳಿ ಇರುವ ಬಂದೂಕನ್ನು ಹುಲಿಯ ಮೇಲೆ ಪ್ರಯೋಗಿಸಲು ವಿಶೇಷ ಅಧಿಕಾರ ನೀಡಬೇಕು ಎಂದು ಮನುಸೋಮಯ್ಯ ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ವೀರಾಜಪೇಟೆ ತಾಲೂಕು ಅಧ್ಯಕ್ಷ ಬಾಚಮಾಡ ಭವಿಕುಮಾರ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲAಡ ಸೂರಜ್ ಉಪಸ್ಥಿತರಿದ್ದರು.

-ಹೆ.ಚ್.ಕೆ. ಜಗದೀಶ್