ಗೋಣಿಕೊಪ್ಪ ವರದಿ, ಫೆ. ೨೪ : ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಾಲಂಗಾಲ ಗ್ರಾಮದಲ್ಲಿ ಕಾಡಾನೆ ಹಾವಳಿ ನಿಯಂತ್ರಿಸುವAತೆ ಒತ್ತಾಯಿಸಿ ವೀರಾಜಪೇಟೆ ಅರಣ್ಯ ವಲಯ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ವಲಯ ಅಧಿಕಾರಿ ದೇವಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಗಣಪತಿ ಮುಂದಾಳತ್ವದಲ್ಲಿ ವಿರಾಜಪೇಟೆ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಿ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಲಾಯಿತು.

ಪಾಲಂಗಾಲ ಗ್ರಾಮದಲ್ಲಿ ಅರಣ್ಯ ಅಧಿಕಾರಿ ಸಿಬ್ಬಂದಿಯನ್ನು ಶಾಶ್ವತವಾಗಿ ಶಿಬಿರ ಹೂಡುವಂತೆ ಕ್ರಮಕೈಗೊಳ್ಳುವುದಾಗಿ ವಲಯ ಅಧಿಕಾರಿ ಈ ಸಂದರ್ಭ ಭರವಸೆ ನೀಡಿದರು. ಆನೆ ಕಂದಕ ನಿರ್ಮಾಣದಿಂದ ಪರಿಹಾರ ನೀಡಬಹುದು. ಆದರೆ, ತಕ್ಷಣ ಪರಿಹಾರಕ್ಕೆ ಸಿಬ್ಬಂದಿಯನ್ನು ವಿಶೇಷ ಶಿಬಿರ ನೀಡಿ ಆನೆಗಳನ್ನು ಕಾಡಿಗೆ ಅಟ್ಟುವುದಾಗಿ ಅವರು ತಿಳಿಸಿದರು.

ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಗಣಪತಿ ಮಾತನಾಡಿ, ಕಳೆದ ೪ ವರ್ಷಗಳಿಂದಲೂ ಪಾಲಂಗಾಲ ಗ್ರಾಮದಲ್ಲಿ ಕಾಡಾನೆಗಳ ಹಿಂಡು ತೋಟದ ಫಸಲನ್ನು ಲೂಟಿ ಮಾಡುತ್ತಿದ್ದು ಈ ಬಗ್ಗೆ ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ರೈತ ಸಂಘದ ಸದಸ್ಯರು ಆರೋಪಿಸಿದರು.

೫ ದಿನಗಳ ಹಿಂದೆಯಷ್ಟೆ ಪಾಲಂಗಾಲ ಗ್ರಾಮದ ಕೃಷಿಕ ಕರಿನೆರವಂಡ ಬಿಪಿನ್ ಅವರ ಕಣಕ್ಕೆ ಆನೆಗಳು ದಾಳಿ ಮಾಡಿ, ಒಣಗಲು ಹಾಕಿದ್ದ ಸುಮಾರು ೨೦ ಚೀಲಕ್ಕೂ ಅಧಿಕ ಕಾಫಿ ಬೀಜವನ್ನು ನಾಶ ಮಾಡಿದೆ. ಇದರಿಂದ ೬೦ ಸಾವಿರಕ್ಕೂ ಅಧಿಕ ನಷ್ಟವಾಗಿದೆ. ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಪ್ರ. ಕಾರ್ಯದರ್ಶಿ ಕಳ್ಳಿಚಂಡ ಧನು, ಸಂಚಾಲಕ ಬಾದುಮಂಡ ಮಹೇಶ್, ತಾಲೂಕು ಅಧ್ಯಕ್ಷೆ ಕರಿನೆರವಂಡ ದೀಪ ಮುತ್ತಮ್ಮ, ಗ್ರಾಮಾಧ್ಯಕ್ಷ ಕರಿನೆರವಂಡ ಜಿತನ್, ರೈತ ಮುಖಂಡ ಕರಿನೆರವಂಡ ಭೀಮಯ್ಯ ಇತರರಿದ್ದರು.

ಕಾಡಾನೆ ಕಾರ್ಯಾಚರಣೆ

ವೀರಾಜಪೇಟೆ ವಿಭಾಗದ, ವೀರಾಜಪೇಟೆ ಅರಣ್ಯ ವಲಯ ವ್ಯಾಪ್ತಿಗೆ ಬರುವ ಗ್ರಾಮಗಳಾದ ಪಾಲಂಗಾಲ, ತೋರ, ಕೆದಮುಳ್ಳೂರು, ಕೊಟ್ಟೋಳಿ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾರಿಗೆ ಓಡಿಸುವ ಕಾರ್ಯಾಚರಣೆಯನ್ನು ತಾ. ೨೬ ಮತ್ತು ೨೭ ರಂದು ಹಮ್ಮಿಕೊಳ್ಳಲಾಗಿದೆ. ತೋಟದ ಕಾರ್ಮಿಕರು ಆ ದಿವಸ ತಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸುವಂತೆ ಹಾಗೂ ಗ್ರಾಮಸ್ಥರು, ಶಾಲಾ ಮಕ್ಕಳು ಎಚ್ಚರಿಕೆಯಿಂದ ಇದ್ದು, ಕಾಡಾನೆ ಕಾರ್ಯಾಚರಣೆಗೆ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ವಲಯ ಅರಣ್ಯಾಧಿಕಾರಿ ಕೆ.ಎಂ. ದೇವಯ್ಯ ಪ್ರಕಟಣೆಯಲ್ಲಿ ಕೋರಿದ್ದಾರೆ.