ಸೋಮವಾರಪೇಟೆ, ಫೆ. ೨೪: ತಾಲೂಕು ಅಕ್ರಮ ಸಕ್ರಮ ಸಮಿತಿಯ ಮೂಲಕ ೪೬ ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ.

ಅಕ್ರಮ ಸಕ್ರಮ ಸಮಿತಿಯ ಸಭೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದು ತಾಲೂಕಿನ ವಿವಿಧೆಡೆಗಳಿಂದ ರೈತರು ಸಲ್ಲಿಸಿದ್ದ ಅರ್ಜಿಗಳ ಪೈಕಿ ೪೬ ಮಂದಿಯ ಅರ್ಜಿಗಳಿಗೆ ಮಂಜೂರಾತಿ ನೀಡಲಾಯಿತು. ನೂತನ ಸಮಿತಿಯ ಪ್ರಥಮ ಸಭೆಯಲ್ಲಿ ಒಟ್ಟು ೬೪ ಅರ್ಜಿಗಳು ಮಂಡನೆಯಾಗಿದ್ದವು.

ದಾಖಲಾತಿ ಇಲ್ಲದೆ ಸಾಗುವಳಿ ಮಾಡಿಕೊಂಡಿರುವ ನೂರಾರು ರೈತರು ದಾಖಲಾತಿ ಮಾಡಿಕೊಳ್ಳಲು ಅಕ್ರಮ ಸಕ್ರಮ ಸಮಿತಿಗೆ ಅರ್ಜಿ ಸಲ್ಲಿಸಿದ್ದಾರೆ. ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಂಡಿದ್ದೇವೆ ಎಂದು ಶಾಸಕ ರಂಜನ್ ಹೇಳಿದರು.

ಅಕ್ರಮ - ಸಕ್ರಮ ಸೇರಿದಂತೆ ಇನ್ನಿತರ ನಮೂನೆಯ ನೂರಾರು ಅರ್ಜಿಗಳು ಸರ್ವೆ ಇಲಾಖೆಯಲ್ಲಿವೆ. ಆದರೆ ಸರ್ವೆಯರ್ ಇಲ್ಲದೆ ಸರ್ವೆ ಕಾರ್ಯಗಳು ನಡೆಯುತ್ತಿಲ್ಲವೆಂದು ಶಾಸಕರ ಗಮನ ಸೆಳೆದಾಗ, ಈ ಬಗ್ಗೆ ಇಲಾಖೆಯ ಮೇಲಿನ ಅಧಿಕಾರಿಗಳೊಂದಿಗೆ ಚರ್ಚಿಸು ವದಾಗಿ ತಿಳಿಸಿದ ಶಾಸಕರು, ಪರವಾನಗಿ ಪಡೆದ ಸರ್ವೆಯರ್ ಮೂಲಕ ಸರ್ವೆ ನಡೆಸುವ ಬಗ್ಗೆ ಮುಂದಿನ ಕೆ.ಡಿ.ಪಿ. ಸಭೆಯಲ್ಲಿ ಚರ್ಚಿಸಿ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಸಭೆಯಲ್ಲಿ ಸಮಿತಿ ಕಾರ್ಯದರ್ಶಿ ಹಾಗೂ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಸಮಿತಿಯ ಸದಸ್ಯರುಗಳಾದ ಎಂ.ಎನ್. ಕೊಮಾರಪ್ಪ, ಸುಮಾ ಸುದೀಪ್, ಡಿ.ಆರ್. ಕೆಂಚೇಶ್ವರ್ ಉಪಸ್ಥಿತರಿದ್ದರು.