ಸೋಮವಾರಪೇಟೆ, ಫೆ. ೨೩: ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯರಿಗೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ವತಿಯಿಂದ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ತಾಲೂಕಿನ ಬೇಳೂರು, ಬ್ಯಾಡಗೊಟ್ಟ, ಐಗೂರು ಹಾಗೂ ಆಲೂರು ಸಿದ್ದಾಪುರ ಗ್ರಾ.ಪಂ.ನ ನೂತನ ಸದಸ್ಯರುಗಳು ಐದು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು. ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ಪುಷ್ಪ ರಾಜೇಶ್, ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರುಗಳು ಉಪಸ್ಥಿತರಿದ್ದರು. ಐದು ದಿನಗಳ ಕಾಲ ನಡೆದ ಕಾರ್ಯಾಗಾರ ದಲ್ಲಿ ಸರ್ಕಾರದ ಯೋಜನೆಗಳು ಹಾಗೂ ಸಮಿತಿಗಳ ರಚನೆ, ಸಭೆ ನಡೆಸುವ ವಿಧಾನಗಳು, ಆಧುನಿಕ ತಂತ್ರಜ್ಞಾನದ ಮೂಲಕ ಜಾರಿ ಯಾಗುವ ಸರ್ಕಾರದ ಯೋಜನೆಗಳ ಮಾಹಿತಿ, ಅಧಿಕಾರ ವಿಕೇಂದ್ರೀಕರಣ, ಮಾದರಿ ಗ್ರಾಮ ಪಂಚಾಯಿತಿ, ಸಂಪನ್ಮೂಲ ಕ್ರೋಢೀಕರಣ, ನಾಯಕತ್ವ ವೃದ್ಧಿ, ಗ್ರಾಮ ಪಂಚಾಯಿತಿಯ ಇತರ ಕಾರ್ಯಗಳ ಬಗ್ಗೆ ಮಾಹಿತಿ-ತರಬೇತಿ ನೀಡ ಲಾಯಿತು. ತಾ.ಪಂ.ಯ ರವಿ ಹಾಗೂ ದಿನೇಶ್ ಅವರು ಸದಸ್ಯರುಗಳ ಸಂಶಯಗಳಿಗೆ ಉತ್ತರಿಸಿ ತರಬೇತಿ ನಿರ್ವಹಿಸಿದರು. ಸಂಜೆ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಆನ್‌ಲೈನ್ ನಲ್ಲಿಯೇ ಪ್ರಶ್ನೋತ್ತರ ಕಲಾಪದ ವ್ಯವಸ್ಥೆ ಮಾಡಲಾಗಿತ್ತು.

ತರಬೇತಿಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ, ಪ್ರಮಾಣಪತ್ರ ವಿತರಿಸಿ ಮಾತನಾಡಿದ ಕಾರ್ಯನಿರ್ವ ಹಣಾಧಿಕಾರಿ ಜಯಣ್ಣ, ಮೊದಲ ಹಂತದ ತರಬೇತಿ ಯಶಸ್ವಿಯಾಗಿದ್ದು, ಮುಂದಿನ ವಾರದಿಂದ ಐವತ್ತು ಸದಸ್ಯರುಗಳಂತೆ ಹಂತ ಹಂತವಾಗಿ ತಾಲೂಕಿನ ಎಲ್ಲಾ ಪಂಚಾಯಿತಿ ಸದಸ್ಯರುಗಳಿಗೆ ತರಬೇತಿ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಎಲ್ಲಾ ಸದಸ್ಯರುಗಳು ತಮಗೆ ನಿಗದಿಪಡಿಸಿದ ದಿನಾಂಕಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ತಾಲೂಕು ಪಂಚಾಯಿತಿ ಅಧಿಕಾರಿಗಳಾದ ಅಶ್ವತ್ ಕುಮಾರ್, ರವೀಶ್, ಸ್ವಚ್ಛ ಭಾರತ್ ಮಿಷನ್‌ನ ಪೆಮ್ಮಯ್ಯ ಸೇರಿದಂತೆ ಇತರರು ಕಾರ್ಯಾಗಾರವನ್ನು ನಿರ್ವಹಿಸಿದರು.