ಕಣಿವೆ, ಫೆ. ೨೩: ಹಾರಂಗಿ ಜಲಾಶಯ ನಿರ್ಮಾಣಕ್ಕಾಗಿ ಅಪಾರ ಬೆಲೆ ಬಾಳುವ ಫಲವತ್ತಾದ ಕೃಷಿ ಭೂಮಿ ಹಾಗೂ ಮನೆ- ಮಠ ಹಾಗೂ ಅಪಾರ ಆಸ್ತಿ - ಪಾಸ್ತಿಗಳನ್ನು ಕಳೆದುಕೊಂಡು ಅತ್ತೂರು ಹಾಗೂ ಯಡವನಾಡು ಗ್ರಾಮಗಳ ಅರಣ್ಯದಂಚಿನಲ್ಲಿ ಪುನರ್ವಸತಿ ಕಂಡುಕೊAಡ ನೂರಾರು ಕೃಷಿಕರು ಕಳೆದ ಮೂರ್ನಾಲ್ಕು ದಶಕಗಳಿಂದಲೂ ಕಾಡಾನೆಗಳ ಹಾವಳಿಯಿಂದ ಅಕ್ಷರಶಃ ನಲುಗಿ ಹೋಗಿದ್ದಾರೆ.

ಏಕೆಂದರೆ ಕಾಡಂಚಿನಲ್ಲಿ ಸರ್ಕಾರ ಈ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿದರೂ ಕೂಡ ಮಿತಿ ಮೀರಿದ ಕಾಡಾನೆಗಳ ಹಾವಳಿಯಿಂದ ಈ ಮಂದಿ ಆರ್ಥಿಕವಾಗಿ ಕೃಷವಾಗಿದ್ದಾರೆ. ಏಕೆಂದರೆ ಇಲ್ಲಿನ ಅಷ್ಟೂ ನಿರಾಶ್ರಿತ ಕೃಷಿಕರು ತಾವು ಯಾವ ಬೆಳೆ ಬೆಳೆಯ ಹೊರಟರೂ ಕೂಡ ಬೆಳೆದ ಫಸಲೆಲ್ಲಾ ಕಾಡಾನೆಗಳ ಪಾಲಾಗುತ್ತಿದೆ. ದೀಪದ ಕೆಳಗೆ ಕತ್ತಲು ಎಂಬAತೆ ಫಲವತ್ತಾಗಿದ್ದ ಭೂಮಿಯನ್ನು ಜಲಾಶಯ ನಿರ್ಮಾಣಕ್ಕೆ ತ್ಯಾಗ ಮಾಡಿ ವಿಧಿ ಇಲ್ಲದೇ ಒಲ್ಲದ ಮನಸ್ಸಿನಿಂದ ಈ ಅರಣ್ಯದಂಚಿನ ಅತ್ತೂರು ಗ್ರಾಮಕ್ಕೆ ಬಂದ ಈ ಕೃಷಿಕರ ಪಾಡು ಕೇಳುವವರೇ ಇಲ್ಲ. ಏಕೆಂದರೆ ಈ ಮಂದಿ ತ್ಯಾಗ ಮಾಡಿದ ಭೂಮಿಯಲ್ಲಿ ಜಲಾಶಯ ನಿರ್ಮಾಣಗೊಂಡು ಆ ಜಲಾಶಯದ ನೀರಿನ ಸೌಲಭ್ಯವನ್ನು ನೆರೆಯ ಜಿಲ್ಲೆಯ ಸಹಸ್ರಾರು ಮಂದಿ ಸಂತಸದಿAದ ಪ್ರಯೋಜನ ಪಡೆಯುತ್ತಿದ್ದರೆ, ಇಲ್ಲಿ ಈ ತ್ಯಾಗಮಯಿಗಳು ಸಂಕಟಗಳ ಮೇಲೆ ಸಂಕಟ ಪಡುತ್ತಿದ್ದಾರೆ.

ನಿರಂತರ ಕಾಡಾನೆ ಕಾಟ : ಈ ತ್ಯಾಗಮಯಿ ಕೃಷಿಕರು ಕಾಡಿನೊಳಗಿಂದ ತಮ್ಮ ತೋಟಗಳಿಗೆ ಧಾವಿಸುವ ಕಾಡಾನೆಗಳನ್ನು ಬೆದರಿಸಲು ತೋಟ ಹಾಗೂ ಮನೆಗಳ ಸುತ್ತಲಿನ ಬೇಲಿಗಳಿಗೆ ಬಿಯರ್ ಬಾಟಲಿಗಳನ್ನು ತಂತಿಯ ಮುಖೇನ ಬೇಲಿಯ ಉದ್ದಕ್ಕೂ ಕಟ್ಟುವ ಮೂಲಕ ಕಾಡಾನೆಗಳನ್ನು ಕಾವಲು ಕಾಯುತ್ತಿದ್ದಾರೆ.

ಅಂದರೆ ಮುಸ್ಸಂಜೆಯಾದೊಡನೆ ಅರಣ್ಯದೊಳಗಿಂದ ಧಾವಿಸಿ ಬಂದು ತೋಟಗಳ ಒಳಗೆ ಧಾವಿಸಿ ತೋಟದೊಳಗಿನ ಹಲಸಿನ ಹಣ್ಣು, ಬಾಳೆ, ಮುಸುಕಿನ ಜೋಳ, ತೆಂಗು ಮೊದಲಾದ ಫಸಲನ್ನು ತಿನ್ನಲು ಬರುವ ಕಾಡಾನೆಗಳ ಬರುವಿಕೆಯನ್ನು ಅರಿಯಲು ಈ ರೀತಿ ಬಿಯರ್ ಬಾಟಲಿಗಳನ್ನು ಕಟ್ಟಿದ್ದೇವೆ. ಕಾಡಾನೆಗಳು ತೋಟದ ಬೇಲಿಗಳನ್ನು ಮುರಿದು ಒಳನುಗ್ಗುವ ಪ್ರಯತ್ನ ಮಾಡುವಾಗ ನಾವು ತಂತಿಯ ಸಹಾಯದಿಂದ ಬೇಲಿಯುದ್ದಕ್ಕೂ ಕಟ್ಟಿರುವ ಬಿಯರ್ ಬಾಟಲಿಗಳು ಒಂದಕ್ಕೊAದು ತಾಗಿಕೊಂಡು ಸದ್ದಾಗುತ್ತವೆ. ಹಾಗಾಗಿ ನಾವು ರಾತ್ರಿ ಸಮಯ ನಿದ್ರೆಯಲ್ಲಿದ್ದಾಗಲೂ ಕೂಡ ಆನೆಗಳು ಕಾಡಿನೊಳಗಿಂದ ಹೊರ ಬಂದ ವಿಚಾರ ಬಿಯರ್ ಬಾಟಲಿಗಳ ಮೂಲಕ ತಿಳಿದೊಡನೆ ನಾವು ಪಟಾಕಿ ಸಿಡಿಸುತ್ತೇವೆ. ಟಾರ್ಚ್ ಹಾಕಿ ಕಿರುಚುತ್ತೇವೆ. ಬಳಿಕ ಅಕ್ಕಪಕ್ಕದವರಿಗೂ ಕಾಡಾನೆಗಳು ಬಂದ ವಿಚಾರ ತಿಳಿಯುತ್ತದೆ. ಬಳಿಕ ಕೆಲವೊಮ್ಮೆ ನಾವೆಲ್ಲರೂ ಒಗ್ಗೂಡಿ ಕಾಡಾನೆಗಳು ಬೆಳೆ ತಿನ್ನದಂತೆ ಒಂದಷ್ಟು ಪ್ರಯತ್ನ ಮಾಡುತ್ತೇವೆ ಎನ್ನುತ್ತಾರೆ ಅರಣ್ಯದಂಚಿನ ಕೃಷಿಕರಾದ ಅತ್ತೂರು ಗ್ರಾಮದ ರಾಜಪ್ಪ, ಚೆಂಗಪ್ಪ, ಗುಡ್ಡೆಮನೆ ರವಿ, ಸಚಿನ್ ಮೊದಲಾದವರು.

ಹಾಗಾಗಿ ಅರಣ್ಯದಂಚಿನ ಈ ಊರಿನ ಕೃಷಿಕರ ಮನೆಯಂಗಳದಲ್ಲಿ ಬಿಯರ್ ಕಟ್ಟಿ ಬೇಲಿ ನಿರ್ಮಿಸಲೆಂದೇ ಮದ್ಯದ ಅಂಗಡಿಗಳಿAದ ಖಾಲಿ ಬಿಯರ್ ಬಾಟಲಿಗಳನ್ನು ಈ ಕೃಷಿಕರು ಹಣ ಕೊಟ್ಟು ಖರೀದಿಸಿ ತರುತ್ತಾರೆ.

ಅರಣ್ಯದಂಚಿನಲ್ಲಿ ಅರಣ್ಯ ಇಲಾಖೆ ಕಾಡಾನೆಗಳು ದಾಟದಂತೆ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಕಾಲುವೆಯನ್ನು ನಿರ್ಮಾಣ ಮಾಡಿದ್ದಾರೆ. ಆ ಕಾಲುವೆಗೆ ಆನೆ ಕಂದಕ ಎಂಬ ನಾಮಕರಣ ಮಾಡಿದ್ದಾರೆ. ಆದರೆ ಈ ಆನೆ ಕಂದಕ ಹೇಗಿದೆ ಎಂದರೆ ಕೃಷಿಕರ ಜಾನುವಾರುಗಳು ಕಾಡಿನೊಳಗೆ ಸಲೀಸಾಗಿ ಹೋಗಿ ಹುಲ್ಲು ಮೇಯ್ದು ಮನೆಗೆ ಬರುವಂತಿದೆ. ಹೀಗಿರುವಾಗ ಕಾಡಾನೆಗಳಿಗೆ ಈ ಕಾಲುವೆಯ ಕಂದಕ ಯಾವ ಲೆಕ್ಕಕ್ಕೂ ಇಲ್ಲ.

ಈ ಕಂದಕ ಅಂತಾ ಕಾಟಾಚಾರಕ್ಕೆ ಕಾಲುವೆ ತೆರೆದು ಸರ್ಕಾರದ ಹಣ ಪೋಲು ಮಾಡಿರುವ ಅರಣ್ಯ ಇಲಾಖೆ, ಇದೇ ಹಣವನ್ನು ಕಾಡಂಚಿನ ಕೃಷಿಕರಿಗೆ ಒಂದು ವೇಳೆ ಕ್ರಮವಾಗಿ ಹಂಚಿಕೆ ಮಾಡಿದ್ದಿದ್ದರೆ....! ಕೃಷಿಕರು ಸರ್ಕಾರದ ಆ ಹಣದಿಂದ ಶಾಶ್ವತವಾದ ಸೋಲಾರ್ ಬೇಲಿಯನ್ನೇ ನಿರ್ಮಾಣ ಮಾಡಿಕೊಂಡು ನಿರ್ಭಯ ಹಾಗೂ ನಿರಾತಂಕದಿAದ ಎಂದಿನAತೆ ಸತ್ಯ ಶುದ್ಧವಾದ ಪರಿಶ್ರಮದ ಕೃಷಿ ಕಾಯಕ ಮಾಡುತ್ತಿದ್ದರೇನೋ...!?

ಕಷ್ಟ- ನಷ್ಟದಲ್ಲೇ ಜೀವನ

ಕಾಡಂಚಿನಲ್ಲಿ ಕಳೆದ ನಲವತ್ತು ವರ್ಷಗಳಿಂದ ಬದುಕನ್ನು ಕಟ್ಟುತ್ತಲೇ ಇರುವ ಈ ನತದೃಷ್ಟ ಮಂದಿಗೆ ಕಾಡಾನೆಗಳ ಹಾವಳಿ ಎಂಬ ಪೆಡಂಭೂತ ಈ ಶ್ರಮಿಕರನ್ನು ಆರ್ಥಿಕವಾಗಿ ಹಿಂದೆಯೇ ಸರಿಸಿದೆ. ಅಂದರೆ ಮನೆಯ ಮಗ್ಗುಲಿನಲ್ಲಿಯೆ ಜಲಾಶಯವಿದ್ದರೂ ಕೂಡ ಮಳೆಯ ನೀರನ್ನೇ ನಂಬಿ ಕೃಷಿ ಮಾಡಬೇಕಾದ ಈ ಕೃಷಿಕರು ಪ್ರತೀ ವರ್ಷದ ಮುಂಗಾರಿನಲ್ಲಿ ಪ್ರಮುಖ ಬೆಳೆಯಾದ ಮುಸುಕಿನ ಜೋಳದ ಬೆಳೆಯನ್ನು ಬೆಳೆಯುತ್ತಾರೆ. ಆದರೆ ಕೈಗೆ ಬಂದ ಈ ಬೆಳೆ ಇನ್ನೇನು ಬಾಯಿಗೆ ಬರಬೇಕು ಎನ್ನುವಷ್ಟರಲ್ಲಿ ಕಾಡಾನೆಗಳ ಹಿಂಡು ತಂಡೋಪತAಡವಾಗಿ ಲಗ್ಗೆಯಿಟ್ಟು ಫಸಲನ್ನೆಲ್ಲಾ ತಿಂದು ತುಳಿದು ನಾಶ ಮಾಡಿ ತೆರಳುತ್ತವೆ. ಹಾಗಾಗಿ ಈ ಕೃಷಿಕರ ಬಾಳು ಮತ್ತಷ್ಟು ಕೃಷವಾಗುತ್ತಲೇ ಇದೆ.

ಮೂರಂಕಿಯ ಪರಿಹಾರ

ಕಾಡಾನೆಗಳು ಬೆಳೆ ತಿಂದು ಹತ್ತಾರು ಸಾವಿರ ರೂಪಾಯಿಗಳ ನಷ್ಟ ಉಂಟು ಮಾಡಿದರೂ ಕೂಡ ಸರ್ಕಾರದ ಬಿಳಿಯಾನೆಗಳೆಂಬ ಅರಣ್ಯ ಇಲಾಖೆಯ ಅಧಿಕಾರಿಗಳು ಬೆಳೆ ಪರಿಹಾರವಾಗಿ ಕೇವಲ ಮೂರಂಕಿಯ ಅಂದರೆ ಸಾವಿರ ರೂಪಾಯಿಗಳ ಪರಿಹಾರ ಚೆಕ್ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಇನ್ನು ಲಕ್ಷಾಂತರ ರೂಪಾಯಿ ಬೆಲೆಯ ತೋಟಗಾರಿಕಾ ಬೆಳೆಗಳ ಪರಿಹಾರಕ್ಕೂ ಎರಡರಿಂದ ಮೂರು ಸಾವಿರ ರೂಪಾಯಿ ಪರಿಹಾರ ನೀಡುವ ಪದ್ಧತಿ ಮಾತ್ರ ನಿಜಕ್ಕೂ ಬೇಸರದ ಸಂಗತಿ.

ಶಾಶ್ವತವಾದ ಆನೆತಡೆಯಾಗಬೇಕು

ಕಾಡಂಚಿನ ಈ ಜನ ಕಳೆದ ನಲವತ್ತು ವರ್ಷಗಳಿಂದ ಅನುಭವಿಸಿದ್ದು ಸಾಕು. ಅಂದರೆ ಒಂದು ತಲೆಮಾರಿನ ಇಲ್ಲಿನ ಜನ ಇಲಾಖೆಗಳು ಒಡ್ಡಿದ ಸಂಕಷ್ಟ ಹಾಗೂ ಕಾಡಾನೆಗಳು ಉಂಟುಮಾಡುತ್ತಿರುವ ಸಂಕಟಗಳನ್ನು ಅನುಭವಿಸಿದ್ದು ಸಾಕು. ಈ ತಲೆಮಾರಿನ ಆ ಕೃಷಿಕರ ಮಕ್ಕಳ ಕಾಲಕ್ಕಾದರೂ ಕಾಡಾನೆಗಳ ಹಾವಳಿ ಎಂಬ ಪೆಡಂಭೂತವನ್ನು ಶಾಶ್ವತವಾಗಿ ತಡೆದು, ಇಲ್ಲಿನ ಕೃಷಿಕರು ನೆಮ್ಮದಿಯಿಂದ ಯಾವುದೇ ಬೆಳೆ ಬೆಳೆದು ತೆಗೆಯುವಂತಹ ಸ್ವಾತಂತ್ರ‍್ಯವನ್ನು ಸರ್ಕಾರ ಅಥವಾ ಜಿಲ್ಲಾಡಳಿತ ನೀಡಬೇಕಿದೆ.

ಅಂದರೆ ಈ ಅಮಾಯಕ ಜನ ತಾವು ಸಾಲ ಸೋಲ ಮಾಡಿ ಹಣ ತಂದು ಬೆಳೆದ ಫಸಲು ಕಾಡಾನೆಗಳ ಪಾಲಾಗದಂತೆ ಇಲಾಖೆಯೇ ಹೊಣೆ ಹೊರಬೇಕು. ಇಲ್ಲವೇ ಕಾಡಾನೆಗಳು ಬೆಳೆ ನಷ್ಟ ಮಾಡಿದರೆ ವೈಜ್ಞಾನಿಕವಾದ ಸೂಕ್ತ ಬೆಳೆ ಪರಿಹಾರವನ್ನು ಇಲಾಖೆಯೇ ಭರಿಸುವಂತಾಗಬೇಕು. ಹಾಗಿದ್ದಲ್ಲಿ ಮಾತ್ರ ಅರಣ್ಯದಂಚಿನ ಈ ತ್ಯಾಗಮಯಿ ಕೃಷಿಕರ ಮೊಗದಲ್ಲಿ ಒಂದಷ್ಟು ನಗು ಕಂಡಿತು.

- ಕೆ.ಎಸ್. ಮೂರ್ತಿ