ಮಡಿಕೇರಿ, ಫೆ. ೨೩: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ. ಜಿಲ್ಲೆಗೆ ಹೊಂದಿಕೊAಡಿರುವ ನೆರೆಯ ರಾಜ್ಯದಲ್ಲಿ ಕೋವಿಡ್-೧೯ ಸೋಂಕಿತ ಪ್ರಕರಣಗಳು ಹೆಚ್ಚುತ್ತಿದ್ದು, ಕೊಡಗು ಜಿಲ್ಲೆಯ ಗಡಿಭಾಗದ ಜಿಲ್ಲೆಗೆ ಸೇರಿದ ಪ್ರದೇಶಗಳಲ್ಲಿ ಸೋಂಕಿತ ಪ್ರಕರಣಗಳು ಏರಿಕೆಯಾಗುತ್ತಿದೆ.

ಕೇರಳ-ಕೊಡಗು ನಡುವೆ ಸಂಚರಿಸುವ ಎಲ್ಲಾ ಖಾಸಗಿ ಬಸ್ಸು, ಟ್ಯಾಕ್ಸಿ ಇತ್ಯಾದಿಗಳ ಮೂಲಕ ಸಂಚರಿಸುವ ಪ್ರಯಾಣಿಕರು ಕಡ್ಡಾಯವಾಗಿ ಕನಿಷ್ಟ ೭೨ ಗಂಟೆಗಳ ಒಳಗೆ ಪಡೆದಿರುವ ಕೋವಿಡ್-೧೯ (ಆರ್‌ಟಿಪಿಸಿಆರ್) ನೆಗೆಟಿವ್ ವರದಿ ಹೊಂದಿರಬೇಕು ಎಂಬ ಸಂದೇಶವನ್ನು ಖಾಸಗಿ ಬಸ್ಸು, ಟ್ಯಾಕ್ಸಿಗಳ ಚಾಲಕ, ನಿರ್ವಾಹಕರ ಮೂಲಕ ಪ್ರಯಾಣಿಕರಿಗೆ ಹಾಗೂ ಈ ರೀತಿಯಾಗಿ ಸಂಚರಿಸುವ ವಾಹನಗಳ ಚಾಲಕ, ನಿರ್ವಾಹಕರು ಕಾಲ ಕಾಲಕ್ಕೆ ಸರಿಯಾಗಿ ಕೋವಿಡ್-೧೯(ಆರ್‌ಟಿಪಿಸಿಆರ್) ಪರೀಕ್ಷೆ ಮಾಡಿಸಿಕೊಳ್ಳತಕ್ಕದ್ದು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಯ ಮುಖಾಂತರ ಖಾಸಗಿ ಬಸ್ಸು, ಟ್ಯಾಕ್ಸಿ, ಕೆಎಸ್‌ಆರ್‌ಟಿಸಿ ಮತ್ತಿತರ ವಾಹನ ಮೂಲಕ ಸಂಚರಿಸುವ ಪ್ರಯಾಣಿಕರು ಮತ್ತು ವಾಹನ ಚಾಲಕ, ನಿರ್ವಾಹಕರು ಕಡ್ಡಾಯವಾಗಿ ಕನಿಷ್ಟ ೭೨ ಗಂಟೆಗಳ ಒಳಗೆ ಪಡೆದಿರುವ ಕೋವಿಡ್-೧೯ (ಆರ್‌ಟಿಪಿಸಿಆರ್) ನೆಗೆಟಿವ್ ವರದಿ ಹೊಂದಿರಬೇಕು ಮತ್ತು ಕಾಲ ಕಾಲಕ್ಕೆ ಸರಿಯಾಗಿ ಕೋವಿಡ್-೧೯ (ಆರ್‌ಟಿಪಿಸಿಆರ್) ಪರೀಕ್ಷೆ ಮಾಡಿಸಿಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.