ಗೋಣಿಕೊಪ್ಪಲು, ಫೆ. ೨೩: ನಾಗರಹೊಳೆ ಅರಣ್ಯ ವಲಯದಲ್ಲಿರುವ ಬುಡಕಟ್ಟು ಜನಾಂಗದ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ನಾಗರಿಕರು ನಾಗರಹೊಳೆ ವಲಯದ ನಾಣಚ್ಚಿ ಚೆಕ್‌ಪೋಸ್ಟ್ ತಡೆದು ಪ್ರತಿಭಟಿಸುವ ಮೂಲಕ ಬುಡಕಟ್ಟು ಜನಾಂಗಕ್ಕೆ ವಲಯ ಅರಣ್ಯ ಅಧಿಕಾರಿಗಳು ನೀಡುತ್ತಿರುವ ಕಿರುಕುಳದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಗರಹೊಳೆ ಹಾಡಿಯ ಜನರು ಸೋಮವಾರ ಸಂಜೆ ಸಮೀಪದ ಕಾಫಿ ಮಾಲೀಕರ ತೋಟದಲ್ಲಿ ಕಾಫಿ ಕುಯ್ಲು ಮುಗಿಸಿ ಸಂಜೆ ೭ ಗಂಟೆಗೆ ತಮ್ಮ ತಮ್ಮ ಮನೆಗೆ ತೆರಳಲು ಗೇಟ್ ಬಳಿ ಆಗಮಿಸಿದಾಗ ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳು ಹಾಗೂ ವನಪಾಲಕರು ಗೇಟ್ ಬಳಿ ಬುಡಕಟ್ಟು ಜನರನ್ನು ತಡೆದು ಮನೆಗೆ ತೆರಳದಂತೆ ನಿರ್ಬಂಧಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಆದಿವಾಸಿಗಳು ರಾತ್ರಿ ೧೦ ಗಂಟೆಯವರೆಗೆ ಸ್ಥಳದಲ್ಲಿ ಬೆಂಕಿ ಹಾಕಿಕೊಂಡು ಕುಳಿತಿದ್ದಾರೆ.
ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಕುಟ್ಟ ವೃತ್ತ ನಿರೀಕ್ಷಕ ಪರಶಿವಮೂರ್ತಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸಮಸ್ಯೆಯನ್ನು ನಾಳೆ ಬಗೆ ಹರಿಸುವಂತೆ ಮನವೊಲಿಸಿ ರಾತ್ರಿಯ ವೇಳೆ ಗೇಟ್ ತೆರೆದು ಮನೆಗೆ ತೆರಳಲು ಅವಕಾಶ ಮಾಡಿದ್ದರು. ಮಂಗಳವಾರ ಬೆಳಿಗ್ಗೆ ಗೋಣಿಗದ್ದೆ, ನಾಣಚ್ಚಿ, ಕೊಲ್ಲಿಹಾಡಿ, ಕರಡಿಕಲ್ಲು, ಅತ್ತೂರುಕೊಲ್ಲಿ, ಹಾಡಿಯ ಜನರು ಹಾಗೂ ಜನಪ್ರತಿನಿಧಿಗಳು ಚೆಕ್‌ಪೋಸ್ಟ್ಅನ್ನು ತಡೆದು ಅಧಿಕಾರಿಗಳ ದುಂಡಾವರ್ತನೆಯನ್ನು ಖಂಡಿಸಿ ಪ್ರತಿಭಟಿಸಿದರು.
ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಎಸಿಎಫ್ ಗೋಪಾಲ್ ಅವರು ಇನ್ನು ಮುಂದೆ ಇಂತಹ ಸಮಸ್ಯೆ ಎದುರಾಗಲು ಅವಕಾಶ ನೀಡುವುದಿಲ್ಲ ಎಂದು ಗಿರಿಜನರನ್ನು ಮನವೊಲಿಸಿ ದರು. ನಂತರ ಪ್ರತಿಭಟನೆ ಕೈಬಿಟ್ಟರು. ಹಾಡಿಯ ಮುಖಂಡ ತಿಮ್ಮ ಹಾಗೂ ಇತರ ಮುಖಂಡರು ಪಾಲ್ಗೊಂಡಿ ದ್ದರು. -ಹೆಚ್.ಕೆ. ಜಗದೀಶ್