ಶ್ರೀಮಂಗಲ, ಫೆ. ೨೨: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕುರ್ಚಿ ಗ್ರಾಮದಲ್ಲಿ ಕಾಫಿ ತೋಟದ ಮಧ್ಯೆ ಇರುವ ಒಂಟಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ಬೆಳೆಗಾರ ನೋರ್ವನ ಮನೆಗೆ ನುಗ್ಗಿದ ಮುಸುಕುದಾರಿ ವ್ಯಕ್ತಿಯೊಬ್ಬರು ಚಾಕು ತೋರಿಸಿ ೨ ಚಿನ್ನದ ಸರ ಮತ್ತು ನಗದು ದರೋಡೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಕುರ್ಚಿ ಗ್ರಾಮದ ಬೊಳ್ಳೆರ ತಿಮ್ಮಯ್ಯ ಅವರು ಒಬ್ಬರೇ ಇದ್ದ ಸಂದರ್ಭ ಮನೆಗೆ ತಾ.೧೭ರಂದು ಮಧ್ಯಾಹ್ನ ೩ ಗಂಟೆಗೆ ಮುಸುಕುದಾರಿ ದುಷ್ಕರ್ಮಿ ಅರ್ಧ ತೆರೆದಿದ್ದ ಅಡಿಗೆ ಮನೆಯ ಬಾಗಿಲ ಮೂಲಕ ಒಳ ನುಗ್ಗಿ ಹಾಲ್‌ನಲ್ಲಿ ಕೂತಿದ್ದ ತಿಮ್ಮಯ್ಯ ಅವರಿಗೆ ಚಾಕು ತೋರಿಸಿ ಮೊಬೈಲ್‌ನ್ನು ಕಸಿದುಕೊಂಡು, ಮನೆಯಿಡಿ ತಿಮ್ಮಯ್ಯ ಅವರನ್ನು ಮುಂದಿಟ್ಟುಕೊAಡು ಹಿಂಬದಿಯಿAದ ಚಾಕು ತೋರಿಸುತ್ತ ಮನೆಯ ವಿವಿಧ ಕೋಣೆಗಳಿಗೆ ನುಗ್ಗಿದ್ದಾನೆ. ತಿಮ್ಮಯ್ಯ ಅವರ ಕೈಯಿಂದಲೇ ಬೀರುಗಳ ಬಾಗಿಲುಗಳನ್ನು ತೆರೆಸಿ ಅಲ್ಲಿ ಇರಿಸಿದ್ದ ಪರ್ಸ್ನಲ್ಲಿದ್ದ ಅಂದಾಜು ೧೫ ಸಾವಿರ ರೂ. ತನ್ನ ಜೇಬಿಗಿರಿಸಿಕೊಂಡಿದ್ದಾನೆ. ನಂತರ ತಿಮ್ಮಯ್ಯ ಅವರ ಪತ್ನಿಯ ಬೀರನ್ನು ತೆರೆಸಿ ಅದರಲ್ಲಿದ್ದ ಅಂದಾಜು ತಲಾ ೮ ಗ್ರಾಂನ ೨ ಚಿನ್ನದ ಸರವನ್ನು ಜೇಬಿಗಿರಿಸಿಕೊಂಡಿದ್ದಾನೆ.

ತದ ನಂತರ ಇನ್ನೊಂದು ಬೀರನ್ನು ಪರಿಶೀಲಿಸಿದ ಸಂದರ್ಭ ಅದರಲ್ಲಿ ಕೊಡವ ಸಾಂಪ್ರದಾಯಿಕ ಆಭರಣವಾದ ಪೀಚೆಕತ್ತಿಯನ್ನು ನೋಡಿ ಇದೇನೆಂದು ಕೇಳಿ ಅದನ್ನು ಮೇಜಿನಲ್ಲಿಯೇ ಇಟ್ಟಿದ್ದಾನೆ. ತದ ನಂತರ ಡೈನಿಂಗ್ ಹಾಲಿನ ಮೇಜಿನಲ್ಲಿ ಕೋವಿ ಮತ್ತು ತೋಟ ಇದ್ದುದನ್ನು ಕಂಡು ಅತ್ತ ತಿಮ್ಮಯ್ಯ ಸುಳಿಯದಂತೆ ಚಾಕಿನಿಂದ ಸನ್ನೆ ಮಾಡಿ ಮನೆಯ ಹೊರಗೆ ಬಂದು ಕಾಫಿ ಗೋದಾಮನ್ನು ತೋರಿಸು ವಂತೆ ಕರೆದುಕೊಂಡು ಹೋಗಿ ಪರಿಶೀಲಿಸಿದ್ದಾನೆ. ನಂತರ ಕಾರನ್ನು ತೆರೆಸಿ ಅಲ್ಲಿನ

(ಮೊದಲ ಪುಟದಿಂದ) ದಾಖಲಾತಿಗಳನ್ನು ಪರಿಶೀಲಿಸಿದ್ದಾನೆ. ಈ ಸಂದರ್ಭ ತಿಮ್ಮಯ್ಯ ಅವರು ಈಗಿನ ಕಾಲದಲ್ಲಿ ಹಣ ಮತ್ತು ಚಿನ್ನವನ್ನು ಮನೆಯಲ್ಲಿ ಯಾರು ಇಟ್ಟುಕೊಳ್ಳುವುದಿಲ್ಲ. ಅವುಗಳನ್ನು ಬ್ಯಾಂಕಿನಲ್ಲಿ ಇರಿಸುತ್ತಾರೆ ಎಂದು ದುಷ್ಕರ್ಮಿಗೆ ಹೇಳಿದ್ದು, ಮುಸುಕುದಾರಿ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಕೆಲವೊಂದು ಶಬ್ಧಗಳನ್ನು ಮಾತ್ರ ಹೇಳಿದ್ದು ಉಳಿದಂತೆ ಚಾಕು ತೋರಿಸಿ ಕೈ ಸನ್ನೆ ಮೂಲಕವೇ ಬೀರು ಬಾಗಿಲು ತೆಗೆಸಿ ಇತರೆಲ್ಲ ಕೋಣೆಗಳಿಗೆ ತೆರಳಲು ಸೂಚಿಸಿದ ಎಂದು ತಿಮ್ಮಯ್ಯ ಅವರು ಮಾಹಿತಿ ನೀಡಿದ್ದಾರೆ.

ತದ ನಂತರ ನಾನು ಹೊರಗೆ ಹೋಗಿ ಹತ್ತು ನಿಮಿಷದವರೆಗೆ ಮನೆಯಿಂದ ಹೊರಬಾರದಂತೆ ಎಚ್ಚರಿಸಿ ಹೊರ ಬಂದರೆ ಮತ್ತೆ ಬಂದು ಚಾಕಿನಿಂದ ತಿವಿದು ಕೊಲ್ಲುವುದಾಗಿ ಬೆದರಿಕೆ ಒಡ್ಡಿ ತೆರಳಿದ್ದಾನೆ. ತಿಮ್ಮಯ್ಯ ಅವರ ಪತ್ನಿ ಮೂರು ವರ್ಷದ ಹಿಂದೆ ನಿಧನರಾಗಿದ್ದು, ಇಬ್ಬರು ಪುತ್ರಿಯರು ಮದುವೆಯಾಗಿದ್ದು ಮನೆಯಲ್ಲಿ ತಿಮ್ಮಯ್ಯ ಓರ್ವರೆ ವಾಸಿಸುತ್ತಿದ್ದಾರೆ. ಮನೆಯ ಸಮೀಪವೇ ಹೋಂ ಸ್ಟೇ ನಡೆಸುತ್ತಿದ್ದ ಇವರು ಕೆಲ ವರ್ಷಗಳಿಂದ ಅವುಗಳ ವ್ಯವಹಾರವನ್ನು ನಿಲ್ಲಿಸಿದ್ದಾರೆ. ಈ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವೀರಾಜಪೇಟೆ ಡಿವೈಎಸ್‌ಪಿ ಜಯಕುಮಾರ್, ಕುಟ್ಟ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಶ್ರೀಮಂಗಲ ಉಪನಿರೀಕ್ಷಕ ರವಿಶಂಕರ್ ಅವರು ಸ್ಥಳ ಪರಿಶೀಲನೆ ಮಾಡಿದ್ದು ಬೆರಳಚ್ಚು ತಜ್ಞರು ಆಗಮಿಸಿ ಅಗತ್ಯ ಕ್ರಮಕೈಗೊಂಡಿದ್ದಾರೆ.