ಗೋಣಿಕೊಪ್ಪಲು,ಫೆ.೨೨: ಕೊಡಗಿನ ಶ್ರೀಮಂಗಲ, ಟಿ.ಶೆಟ್ಟಿಗೇರಿ ಹಾಗೂ ಇತರೆಡೆಯಲ್ಲಿ ನರಭಕ್ಷಕ ಹುಲಿಯು ಸಂಚರಿಸುತ್ತಿದ್ದು, ಕೇವಲ ೧೨ ಗಂಟೆಯ ಅವಧಿಯಲ್ಲಿ ೨ ಜೀವಗಳನ್ನು ಕಳೆದುಕೊಂಡಿದ್ದೇವೆ. ಕೊಡಗು ಜಿಲ್ಲೆಯ ರೈತರು ಆನೆ ಮಾನವ ಸಂಘರ್ಷದೊAದಿಗೆ ಇದೀಗ ಹುಲಿಯ ಹಾವಳಿಯನ್ನು ಸಹಿಸಲಾರದ ಪರಿಸ್ಥಿತಿಗೆ ತಂದೊಡ್ಡಿದೆ. ಕೂಡಲೇ ನರಭಕ್ಷಕ ಹುಲಿಯನ್ನು ಗುಂಡಿಕ್ಕಿ ಕೊಲ್ಲುವ ಮೂಲಕ ಮಾನವನ ಪ್ರಾಣ ರಕ್ಷಣೆಗೆ ಮುಂದಾಗಬೇಕೆAದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ದಕ್ಷಿಣ ಕೊಡಗಿನ ವಿವಿಧ ಭಾಗದಲ್ಲಿ ಹುಲಿ ಹಾವಳಿಯಿಂದ ಮಾನವನ ಜೀವಕ್ಕೆ ಹಾನಿ ಆದ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿದ ಬಡಗಲಪುರ ನಾಗೇಂದ್ರ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ವಿವಿಧ ಕಡೆಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಪೊನ್ನಂಪೇಟೆಯ ಪ್ರವಾಸ ಮಂದಿರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಇವರು, ನರಭಕ್ಷಕ ಹುಲಿಯು ಈ ಭಾಗದಲ್ಲಿ ಅಧಿಕವಿದ್ದು ಎಲ್ಲಾ ಹೋಬಳಿಗಳಲ್ಲಿ ಇದರ ಓಡಾಟವಿದೆ.

ಜಾನುವಾರುಗಳ ಮೇಲೆ ಹುಲಿಯು ದಾಳಿ ನಡೆಸಿದ್ದು ಜಾನುವಾರುಗಳು ಮರಣ ಹೊಂದಿವೆ. ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದರೂ ಹುಲಿಯ ಅಟ್ಟಹಾಸ ಮುಂದುವರೆಯುತ್ತಿದೆ. ಆದ್ದರಿಂದ ಹುಲಿಯನ್ನು ಗುಂಡಿಕ್ಕಿ ಕೊಲ್ಲುವ ಮಾರ್ಗಬಿಟ್ಟು ಬೇರೆ ಯಾವುದೇ ಮಾರ್ಗವಿಲ್ಲ. ಹುಲಿ ದಾಳಿಯಿಂದ ಮೃತಪಟ್ಟ ಕುಟುಂಬಕ್ಕೆ ರೂ. ೫೦ ಲಕ್ಷ ಪರಿಹಾರ, ಕುಟುಂಬದ ವ್ಯಕ್ತಿಗೆ ಸರ್ಕಾರಿ ನೌಕರಿ ಹುದ್ದೆ ನೀಡಬೇಕು. ಇದಕ್ಕೆ ಒತ್ತಾಯಿಸಿ ಸದ್ಯದಲ್ಲಿಯೇ ರೈತ ಸಂಘ ಪ್ರತಿಭಟನೆ ಹಮ್ಮಿಕೊಳ್ಳಲಿದೆ. ಶಾಸಕರು ಹಾಗೂ ಉಸ್ತುವಾರಿ ಸಚಿವರು ಕೂಡಲೇ ತುರ್ತು ಸಭೆ ನಡೆಸುವ ಮೂಲಕ ಹುಲಿ ಹಾವಳಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತೀರ್ಮಾನಿಸಬೇಕು, ಕೊಡಗಿನ ರೈತರು ಕಷ್ಟದಲ್ಲಿರುವುದರಿಂದ ವಿಶೇಷವಾಗಿ ಕೊಡಗಿಗೆ ಸೀಮಿತಗೊಂಡು ರೂ. ೩೦೦ ಕೋಟಿ ವಿಶೇಷ ಪ್ಯಾಕೇಜ್ ಅನ್ನು ಘೋಷಿಸಬೇಕು. ಎಂದು ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮಾತನಾಡಿ, ಹುಲಿ ಹಾವಳಿಯ ವಿಚಾರದಲ್ಲಿ ಸಂಸದರಾದ ಪ್ರತಾಪ್ ಸಿಂಹರವರು ಮಧ್ಯೆ ಪ್ರವೇಶಿಸಿ ಹುಲಿ ಹಾವಳಿ ನಿಯಂತ್ರಣಕ್ಕೆ ವಿಶೇಷ ಸಭೆ ನಡೆಸಿ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿ ಹುಲಿ ಹಾವಳಿ ನಿಯಂತ್ರಿಸಬೇಕು. ಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ,ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್,ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್‌ಮಾದಪ್ಪ, ಉಪಸ್ಥಿತರಿದ್ದರು. -ಹೆಚ್.ಕೆ.ಜಗದೀಶ್