ಸಿದ್ದಾಪುರ, ಫೆ. ೨೧: ಕಳೆದೆರೆಡು ದಿನಗಳ ಹಿಂದೆ ಮನೆಗಳ ಮೇಲೆ ದಾಳಿ ನಡೆಸಿ ಹಾನಿಗೊಳಿಸಿ ಅಕ್ಕಿ, ತರಕಾರಿಗಳನ್ನು ತಿಂದ ಕಾಡಾನೆಗಳ ಪೈಕಿ ಒಂಟಿ ಸಲಗವೊಂದು ಮತ್ತೆ ಮನೆಗಳ ಮೇಲೆ ದಾಳಿ ನಡೆಸಿ ಅನ್ನ, ಸಾರು ತಿಂದು ಶೌಚಾಲಯ ಬಾಗಿಲಿಗೆ ಹಾನಿಗೊಳಿಸಿದ ಘಟನೆ ಬಸವನಹಳ್ಳಿ ಹಾಡಿಯಲ್ಲಿ ನಡೆದಿದೆ. ಚೆನ್ನಯ್ಯನ ಕೋಟೆ ಗ್ರಾಮದ ಬಸವನಳ್ಳಿ ಹಾಡಿಯಲ್ಲಿ ಕಳೆದ ಎರಡು ದಿನ ಕಾಡಾನೆಗಳು ಮನೆಯ ಮೇಲೆ ದಾಳಿ ನಡೆಸಿ ಮೂರು ಮನೆಗಳಿಗೆ ಹಾನಿಗೊಳಿಸಿತ್ತು.

ಘಟನೆ ಮಾಸುವ ಮುನ್ನವೇ ಇದೀಗ ಮತ್ತೆ ಭಾನುವಾರದಂದು ಬೆಳಗ್ಗಿನ ಜಾವ ಹಾಡಿಯ ನಿವಾಸಿ ಮಹೇಶ್ ಎಂಬವರ ಮನೆಯ ಮೇಲೆ ಒಂಟಿ ಸಲಗವೊಂದು ದಾಳಿ ನಡೆಸಿ ಮನೆಯ ಹಿಂಬದಿಯ ಶೌಚಾಲಯದ ಬಾಗಿಲನ್ನು ತುಳಿದು ಹಾನಿಗೊಳಿಸಿ, ಕಿಟಕಿಯ ಮೂಲಕ ಸೊಂಡಿಲನ್ನು ಹಾಕಿ ಕೋಣೆಯಲ್ಲಿದ್ದ ಅನ್ನ, ಸಾರನ್ನು ತಿಂದಿದೆ ಎಂದು ಹಾಡಿ ನಿವಾಸಿ ಮಹೇಶ್ ತಿಳಿಸಿದ್ದಾರೆ.

ಇದಲ್ಲದೇ ಸಮೀಪದ ಎರಡು ಮನೆಗಳ ಮೇಲೆ ದಾಳಿ ನಡೆಸಿದೆ ಎಂದು ಹಾಡಿ ನಿವಾಸಿಗಳು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಕಾಡಾನೆಗಳು ಹಾಡಿಗಳಲ್ಲಿ ದಾಂಧಲೆ ನಡೆಸುತ್ತಿದ್ದರೂ ಕೂಡ ಅರಣ್ಯ ಇಲಾಖಾಧಿಕಾರಿಗಳು ಇತ್ತ ಗಮನ ಹರಿಸದೆ ನಿರ್ಲಕ್ಷö್ಯ ವಹಿಸುತ್ತಿದ್ದಾರೆ ಎಂದು ಹಾಡಿಯ ನಿವಾಸಿಗಳು ಅರಣ್ಯ ಇಲಾಖಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.