ಚೆಟ್ಟಳ್ಳಿ, ಫೆ. 21: ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬಕ್ಕ ಹೊಸ್ಕೇರಿಯಿಂದ ಮರಗೋಡಿಗೆ ತೆರಳುವ ಸಂಪರ್ಕ ರಸ್ತೆ ಡಾಂಬರೀ ಕರಣ ಕಿತ್ತುಹೋಗಿ ರಸ್ತೆ ಹಾಳಾಗಿದ್ದು, ಇದನ್ನು ಸರಿಪಡಿಸುವಂತೆ ಒತ್ತಾಯಿಸಿ ಸ್ಥಳೀಯ ಗ್ರಾಮಸ್ಥರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರು ರಸ್ತೆ ದುರಸ್ತಿಗೆ ಆಗ್ರಹಿಸಿ ಸಭೆ ಸೇರಿ ಜಿಲ್ಲಾಧಿಕಾರಿ ಯವರಿಗೆ ಸಲ್ಲಿಸಲು ಮನವಿಪತ್ರ ಬರೆದು ಸಹಿ ಮಾಡಿದರು.

ಬಿದ್ದಂಡ ಮಾದಯ್ಯ ಅವರು ಮಾತನಾಡಿ 2009 ರಿಂದಲೇ ಬಕ್ಕ ಹೊಸ್ಕೇರಿ ಸಂಪರ್ಕ ರಸ್ತೆ ಡಾಂಬರೀಕರಣ ಕಿತ್ತುಹೋಗಿ ಗುಂಡಿಗಳಾಗಿದ್ದು, ಜಿಲ್ಲಾಧಿಕಾರಿಗಳಿಗೆ, ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯಿತಿ, ಶಾಸಕರಿಗೆ, ಸಂಬಂಧಿ ಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾರೊಬ್ಬರೂ ಇತ್ತ ಗಮನ ಹರಿಸಲಿಲ್ಲ.

ರಸ್ತೆ ದುರಸ್ತಿಗೆ ಸಲ್ಲಿಸಿದ್ದ ಹಲವು ಅರ್ಜಿಯ ಬಗ್ಗೆ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದಾಗಲೂ ಈವರೆಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ ಎಂದು ದೂರಿದರು. ಸಂಪರ್ಕ ರಸ್ತೆಯನ್ನು ಸರಿಪಡಿಸಬೇಕೆಂದು ಸಂಬಂಧಪಟ್ಟವರ ಗಮನ ಸೆಳೆಯಲು ಇಂದು ಊರಿನವರು ಪ್ರತಿಭಟಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ. ಒಂದು ವಾರದೊಳಗೆ ಅಧಿಕಾರಿಗಳು ಖುದ್ದು ಪರಿಶೀಲಿಸಿ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳದಿದ್ದರೆ ರಸ್ತೆ ತಡೆ ನಡೆಸಿ ಪ್ರತಿಭಟಿಸುತ್ತೇವೆ ಎಂದರು.

ಬಟ್ಟೀರ ರಘು ಬೋಪಯ್ಯ ಮಾತನಾಡಿ, ಹಲವು ವರ್ಷಗಳಿಂದ ಸಂಪರ್ಕ ರಸ್ತೆಗಳು ಹಾಳಾಗಿದ್ದರೂ ಈವರೆಗೆ ದುರಸ್ತಿ ಕಾರ್ಯ ನಡೆದಿಲ್ಲ. ಶಾಸಕರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಮಾಡಿದ್ದೇವೆ. ಮಾರ್ಚ್ ಒಳಗಾಗಿ ರಸ್ತೆ ಕಾಮಗಾರಿ ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದರು.

ಹಲವು ವರ್ಷಗಳಿಂದ ರಸ್ತೆ ಹಾಳಾಗಿದ್ದು, ಅಪಾಯದಂಚಿಗೆ ತಲುಪಿದೆ. ರಸ್ತೆಯಲ್ಲಿ ನೀರು ಹರಿ ಯುವ ಮೋರಿಗಳನ್ನು ಅವೈಜ್ಞಾನಿಕ ವಾಗಿ ನಿರ್ಮಿಸಲಾಗಿದೆ ಎಂದು ಹೆಚ್.ಎಸ್. ತಿಮ್ಮಪ್ಪಯ್ಯ ಹೇಳಿದರು.

ಹಲವು ಬಾರಿ ಸಂಪರ್ಕ ರಸ್ತೆ ದುರಸ್ತಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಾರಿ ಮತ್ತೊಮ್ಮೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ. ಪ್ರಯೋಜನ ವಾಗದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆಯೇ ಪ್ರತಿಭಟಿಸ ಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಚೆಟ್ಟಳ್ಳಿ ಉಪ ಠಾಣಾ ಎಎಸ್ ಶ್ರೀನಿವಾಸ್ ಹಾಗೂ ಪಿಸಿ ಮಹೇಶ್ ಅವರು ಆಗಮಿಸಿ ಮನವಿ ಪತ್ರವನ್ನು ಇಲಾಖೆಯ ಮೂಲಕ ಮೇಲಿನ ಅಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು.

-ಕರುಣ್ ಕಾಳಯ್ಯ