ಮಡಿಕೇರಿ, ಫೆ. ೨೧: ಸ್ವಾಮಿ ವಿವೇಕಾನಂದರ ಬದುಕು ಮತ್ತು ಆದರ್ಶ ಹಾಗೂ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಪರಿಶ್ರಮ ವಿದ್ಯಾರ್ಥಿಗಳ ಬದುಕಿಗೆ ಮಾದರಿಯಾಗಬೇಕೆಂದು ಮಾನಸ ಗಂಗೋತ್ರಿ ಶಾಸ್ತಿçÃಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಡಾ. ಕುಪ್ನಳ್ಳಿ ಎಂ. ಭೈರಪ್ಪ ಹೇಳಿದರು.
ವೀರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ, ಭರವಸಾ ಕೋಶ ಮತ್ತು ವಿದ್ಯಾರ್ಥಿ ಭ್ರಾತೃತ್ವ ವೇದಿಕೆಯಿಂದ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಮೆಮೋರಿಯಲ್ ಹಾಲ್ ಉದ್ಘಾಟನೆ, ಭ್ರಾತೃತ್ವ ವೇದಿಕೆಯ ಉದ್ಘಾಟನೆ ಹಾಗೂ ಕ್ರಿಯಾಯೋಜನೆ ರೂಪರೇಷೆಗಳ ಪಟ್ಟಿ ಬಿಡುಗಡೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು. ಸಮಸ್ಯೆಗಳು ಎಲ್ಲರಿಗೂ ಇರುತ್ತದೆ. ಅದನ್ನ ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯವಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ, ಕಾಲೇಜಿನಲ್ಲಿ ಹೊಸ ಯೋಜನೆಯನ್ನು ರೂಪಿಸಿರುವುದು ಸಂತೋಷದ ವಿಷಯವಾಗಿದೆ. ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಲಾ ಕಾರ್ಯಕ್ರಮಗಳು ಬಹಳ ವಿರಳವಾಗಿತ್ತು.
ಆದರೆ ಇಂದಿನ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಯೋಜನೆಗಳಿವೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮವನ್ನು ವೀರಾಜಪೇಟೆ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ಶಿವಣ್ಣ ಉದ್ಘಾಟಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥ ನಾಗರಾಜ್ಮೂರ್ತಿ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು. ವಿದ್ಯಾರ್ಥಿ ಭ್ರಾತೃತ್ವ ವೇದಿಕೆಯ ೨೦೨೦-೨೧ನೇ ಸಾಲಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
೨೦೨೦-೨೧ನೇ ಸಾಲಿನ ವಿದ್ಯಾರ್ಥಿ ಭ್ರಾತೃತ್ವ ವೇದಿಕೆಯ ವಿದ್ಯಾರ್ಥಿ ಸಂಯೋಜಕರಾಗಿ ತೃತೀಯ ಬಿ.ಎ. ವಿದ್ಯಾರ್ಥಿಗಳಾದ ಪ್ರಶಾಂತ್ ಹೆಚ್.ಎಸ್, ಸಂಗೀತ ಕೆ.ಜಿ. ಹಾಗೂ ದ್ವಿತೀಯ ಬಿ.ಎ. ವಿದ್ಯಾರ್ಥಿಗಳಾದ ಶಶಾಂಕ್ ಕೆ.ಎಸ್. ಮತ್ತು ಶ್ವೇತ ಬಿ.ಕೆ. ಆಯ್ಕೆಯಾಗಿದ್ದಾರೆ ಎಂದು ನಾಗರಾಜ್ಮೂರ್ತಿ ತಿಳಿಸಿದರು.