ಗಿರಿಜನ ವಿವಿಧೋದ್ದೇಶ ಸಂಘದಲ್ಲಿ ಹಣ ದುರುಪಯೋಗಪ್ರಕರಣ
ವರದಿ-ಚಂದ್ರಮೋಹನ್
ಕುಶಾಲನಗರ, ಫೆ. ೨೧: ಸೋಮವಾರಪೇಟೆ ತಾಲೂಕು ಗಿರಿಜನ ದೊಡ್ಡಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಸುಮಾರು ರೂ. ೨೩ ಲಕ್ಷ ಅವ್ಯವಹಾರ ನಡೆದಿರುವುದು ಆಡಿಟ್ ವರದಿಯಲ್ಲಿ ದೃಢಪಟ್ಟಿದೆ. ೨೦೧೫-೨೦ರ ಆಡಳಿತ ಮಂಡಳಿ ಅವಧಿಯಲ್ಲಿ ಈ ಅವ್ಯವಹಾರ ನಡೆದಿರುವ ಬಗ್ಗೆ ಆಡಿಟ್ ವರದಿ ಸಲ್ಲಿಕೆಯಾಗಿದ್ದು ಹಿಂದಿನ ಸಾಲಿನ ಅಧ್ಯಕ್ಷರು ಈ ಹಣವನ್ನು ಕೂಡಲೇ ಪಾವತಿಸುವಂತೆ ಪ್ರಸಕ್ತ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ. ಸಂಘಕ್ಕೆ ಸಂಬAಧಿಸಿದAತೆ ಮಹಾಮಂಡಲದಿAದ ರೂ. ೨೦ ಲಕ್ಷಗಳು ವಿವಿಧೋದ್ದೇಶ ಕಟ್ಟಡ ನಿರ್ಮಾಣಕ್ಕೆ ಅನುದಾನ ದೊರೆತಿದ್ದು ಅದನ್ನು ನೇರವಾಗಿ ಅಧ್ಯಕ್ಷರೇ ಬ್ಯಾಂಕ್ನಿAದ ನಗದೀಕರಿಸಿರುವುದು ತನಿಖೆ ಸಂದರ್ಭ ದೃಢಪಟ್ಟಿದೆ ಎಂದು ಬಸವನಹಳ್ಳಿ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ ಪ್ರಸಕ್ತ ಸದಸ್ಯರಾಗಿರುವ ಹಿಂದಿನ ಸಾಲಿನ ಅಧ್ಯಕ್ಷ ರಾಜಾರಾವ್ ತಾನು ಈ ಹಣವನ್ನು ಸಂಘಕ್ಕೆ ಹಿಂದಿರುಗಿಸುವುದಾಗಿ ಒಪ್ಪಿಗೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಈ ಸಂಬAಧ ಈಗಾಗಲೇ ಕುಶಾಲನಗರ ಜಿಲ್ಲಾ ಸಹಕಾರ ಬ್ಯಾಂಕ್ನಲ್ಲಿ ರೂ. ೨೫ ಸಾವಿರ ನಗದು ಪಾವತಿಸಿದ್ದು, ಉಳಿದಂತೆ ತಿಂಗಳೊಳಗಾಗಿ ಉಳಿದ ಹಣ ಪಾವತಿ ಮಾಡುವುದಾಗಿ ರಾಜಾರಾವ್ ತಿಳಿಸಿರುವ ಬಗ್ಗೆ ಆರ್.ಕೆ. ಚಂದ್ರ ಮಾಹಿತಿ ನೀಡಿದ್ದಾರೆ.
ಅರಣ್ಯ ಉತ್ಪನ್ನ, ಮರದ ಪಾಚಿ, ಇಟ್ಟಿಗೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಆದಾಯ ಗಳಿಸುವ ಸಂಘದ ಹಣದಲ್ಲಿಯೂ ಅಲ್ಪಸ್ವಲ್ಪ ಏರು ಪೇರಾಗಿದೆ. ಈ ಬಗ್ಗೆ ಆಡಿಟ್ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಂಘದ ಮೂಲಕ ಸದಸ್ಯರು ಹಾಗೂ ಸ್ಥಳೀಯ ಬಡ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಬೃಹತ್ ಯೋಜನೆಯೊಂದನ್ನು ಹಿಂದಿನ ಆಡಳಿತ ಮಂಡಳಿ ರೂಪಿಸಿದ್ದು ಈ ಯೋಜನೆ ಕೂಡ ನೆನೆಗುದಿಗೆ ಬಿದ್ದಿದೆ. ಅಂದಾಜು ರೂ. ೫ ಕೋಟಿ ವೆಚ್ಚದಲ್ಲಿ ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಆವರಣದಲ್ಲಿ ಗಾರ್ಮೆಂಟ್ ಕಾರ್ಖಾನೆ ಸ್ಥಾಪನೆ ಮಾಡುವ ಬಗ್ಗೆ ಪ್ರಾರಂಭಿಕ ಯೋಜನೆಯ ಪ್ರಸ್ತಾವನೆ ರೂಪಿಸಲಾಗಿ ಇದಕ್ಕೆ ಕಾಯಕಲ್ಪ ಕಲ್ಪಿಸುವಲ್ಲಿ ಆಡಳಿತ ಮಂಡಳಿ ವಿಫಲಗೊಂಡಿರುವುದು ತಿಳಿದುಬಂದಿದೆ.
ಜವಳಿ ಇಲಾಖೆ ಮೂಲಕ ರೂ. ೨.೫ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ, ಉಳಿದ ರೂ. ೨.೫ ಕೋಟಿ ವೆಚ್ಚದಲ್ಲಿ ಯಂತ್ರೋಪಕರಣಗಳ ಖರೀದಿ ಮಾಡಿ ಗಾರ್ಮೆಂಟ್ ಇಂಡಸ್ಟಿç ನಿರ್ಮಾಣ ಮಾಡುವ ಮೂಲಕ ಸುಮಾರು ೩೦೦ ಮಹಿಳೆಯರಿಗೆ ಉದ್ಯೋಗ ನೀಡುವ ಅವಕಾಶ ಹೊಂದಲಾಗಿತ್ತು. ಈ ಬಗ್ಗೆ ಬ್ಯಾಂಕ್ ಮೂಲಕ ಸಾಲ ಪಡೆಯಲು ಪತ್ರ ವ್ಯವಹಾರ ಕೂಡ ನಡೆದಿತ್ತು. ರೂ. ೫ ಕೋಟಿ ಅನುದಾನದ ಮೂಲಕ ನಿರ್ಮಿಸುವ ಈ ಯೋಜನೆಗೆ ಸರಕಾರದ ಮೂಲಕ ಶೇ. ೯೫ ರಷ್ಟು ಸಬ್ಸಿಡಿ ಕೂಡ ದೊರಕುವ ಅವಕಾಶವಿದ್ದು, ಕೇವಲ ಗಾರ್ಮೆಂಟ್ ಕಾರ್ಖಾನೆ ನಿರ್ವಹಣೆ ಕಾರ್ಯ ಮಾತ್ರ ಸಂಘದ ಜವಾಬ್ದಾರಿಯಾಗಿತ್ತು.
ಪ್ರಾರಂಭಿಕ ಹಂತದಲ್ಲಿ ಈ ಬೃಹತ್ ಮೊತ್ತದ ಹಣ ಅನುದಾನ ಕಲ್ಪಿಸಲು ವಿವಿಧ ಹಂತಗಳಲ್ಲಿ ಲಂಚಾವತಾರ ಅಡ್ಡಿಯಾಗಿದ್ದು ಯೋಜನೆ ಕಾರ್ಯಗತಗೊಳ್ಳಲು ತೊಡಕುಂಟಾಯಿತು ಎಂದು ತಿಳಿದುಬಂದಿದೆ. ಜಿಲ್ಲೆಯ ಬೃಹತ್ ಯೋಜನೆಯೊಂದು ಕಾರ್ಯರೂಪಕ್ಕೆ ಬಾರದೆ ನೆನೆಗುದಿಗೆ ಬಿದ್ದಿರುವುದು ನಿಜಕ್ಕೂ ಸಂಘದ ಸದಸ್ಯ ಮತ್ತು ಸುತ್ತಮುತ್ತಲ ನಿರುದ್ಯೋಗಿಗಳಿಗೆ ದೌರ್ಭಾಗ್ಯ ಎಂದು ಸಂಘದ ಮಾಜಿ ನಿರ್ದೇಶಕರಾದ ಬಿ.ಕೆ. ಮೋಹನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.