ಸಿದ್ದಾಪುರ, ಫೆ. ೨೦: ಎರಡು ಕಾಡಾನೆಗಳು ಎರಡು ಮನೆಗಳ ಮೇಲೆ ದಾಳಿ ನಡೆಸಿ ಹಾನಿಗೊಳಿಸಿದಲ್ಲದೇ ಮನೆಯೊಳಗಿದ್ದ ಅಕ್ಕಿ, ತರಕಾರಿ ಇನ್ನಿತರ ವಸ್ತುಗಳನ್ನು ತಿಂದು ಹಾಕಿದ ಘಟನೆ ಚೆನ್ನಯ್ಯನಕೋಟೆ ಗ್ರಾಮದ ಬಸವನಹಳ್ಳಿ ಹಾಡಿಯಲ್ಲಿ ನಡೆದಿದೆ. ಬಸವನಹಳ್ಳಿ ಹಾಡಿಯಲ್ಲಿ ಕಳೆದ ಎರಡು ದಿನಗಳಿಂದ ಎರಡು ಕಾಡಾನೆಗಳು ಸೇರಿ ಹಾಡಿಯ ನಿವಾಸಿಗಳಾದ ಅಪ್ಪಯ್ಯ ಹಾಗೂ ಕೆಂಚ ಎಂಬವರ ಮನೆಗಳ ಮೇಲೆ ದಾಳಿ ನಡೆಸಿದೆ. ಅಲ್ಲದೇ ಕೆಂಚ ಎಂಬವರ ಮನೆಯ ಬಾಗಿಲನ್ನು ಮುರಿದು ಸೊಂಡಿಲಿನಿAದ ಕೋಣೆಯಲ್ಲಿದ್ದ ಅಕ್ಕಿ ಪದಾರ್ಥಗಳನ್ನು ಎಳೆದು ಹಾಕಿ ತಿಂದಿದೆ ಎಂದು ಹಾಡಿಯ ನಿವಾಸಿಗಳು ತಿಳಿಸಿದ್ದಾರೆ.
ಕಾಡಾನೆ ದಾಳಿಯಿಂದ ಎರಡು ಮನೆಗಳಿಗೆ ಹಾನಿಯಾಗಿದ್ದು, ಕೆಂಚ ಎಂಬವರ ಮನೆಗೆ ದಾಳಿ ನಡೆಸಿದ ದಿನದಂದು ಅವರ ಕುಟುಂಬದವರು ತಿಥಿ ಕರ್ಮಾಂತರಕ್ಕೆAದು ದುಬಾರೆಗೆ ಹೋಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅದೃಷ್ಟವಶಾತ್ ಕುಟುಂಬದವರು ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ. ಯಾರೂ ಇಲ್ಲದ ಸಂದರ್ಭದಲ್ಲಿ ಬೆಳಗ್ಗಿನ ಜಾವ ೪ ಗಂಟೆಗೆ ೨ ಮನೆಗಳ ಮೇಲೆ ಕಾಡಾನೆಗಳು ದಾಳಿ ನಡೆಸಿ ಹಾನಿಗೊಳಿಸಿದೆ ಎಂದು ಹಾಡಿಯ ನಿವಾಸಿ ಮಹೇಶ್ ತಿಳಿಸಿದ್ದಾರೆ.
ಕಳೆದ ೨ ತಿಂಗಳ ಹಿಂದೆ ಬಸವನಹಳ್ಳಿ ಹಾಡಿಯಲ್ಲಿ ಕಾಡಾನೆಗಳು ೮ ಮನೆಗಳ ಮೇಲೆ ದಾಳಿ ನಡೆಸಿ ಹಾನಿಗೊಳಿಸಿತ್ತು.
ಕಳೆದ ೨ ತಿಂಗಳ ಹಿಂದೆ ಬಸವನಹಳ್ಳಿ ಹಾಡಿಯಲ್ಲಿ ಕಾಡಾನೆಗಳ ದಾಳಿಗೆ ಸಿಲುಕಿ ಹಾನಿಗೊಳಗಾದ ಮನೆಗಳನ್ನು ದುರಸ್ತಿಪಡಿಸಿಕೊಡುವಂತೆ ಶಾಸಕ ಬೋಪಯ್ಯನವರು ಐ.ಟಿ.ಡಿ.ಪಿ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಕೂಡ ಜಿಲ್ಲಾ ಐ.ಟಿ.ಡಿ.ಪಿ ಇಲಾಖಾಧಿಕಾರಿ ಶಿವಕುಮಾರ್ ರವರು ಹಾಡಿಗೆ ಈವರೆಗೂ ಭೇಟಿ ನೀಡದೇ ನಿರ್ಲಕ್ಷö್ಯ ವಹಿಸುತ್ತಿದ್ದಾರೆಂದು ಬಸವನಹಳ್ಳಿ ಹಾಡಿಯ ನಿವಾಸಿಗಳು ಅಧಿಕಾರಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಶಾಸಕರು ಹಾನಿಗೊಳಗಾದ ಮನೆಗಳ ಸುತ್ತಲೂ ಸೋಲಾರ್ ಬೇಲಿಯನ್ನು ಅಳವಡಿಸಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದರೂ ಕೂಡ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಹಾಡಿಯ ನಿವಾಸಿಗಳು ಐ.ಟಿ.ಡಿ.ಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-ವರದಿ : ವಾಸು ಎ.ಎನ್