ಮಡಿಕೇರಿ, ಫೆ. ೨೦: ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಯ ಕುಟ್ಟ, ಮಾಕುಟ್ಟ, ಕರಿಕೆ ಮತ್ತು ಸಂಪಾಜೆ ಮುಖ್ಯ ರಸ್ತೆಯ ಮೂಲಕ ಮಾತ್ರ ಆಗಮಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ರೀತಿಯಾಗಿ ಆಗಮಿಸುವವರೆಲ್ಲರೂ ಕನಿಷ್ಟ ೭೨ ಗಂಟೆಗಳ ಒಳಗೆ ಪಡೆದಿರುವ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಈ ಬಗ್ಗೆ ಕಟ್ಟುನಿಟ್ಟಾಗಿ ಪರಿಶೀಲಿಸುವ ಸಲುವಾಗಿ ಪರಿಶೀಲನಾ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕೋವಿಡ್-೧೯ ವೈರಸ್ ನಿಯಂತ್ರಣ ಕುರಿತಂತೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಆರೋಗ್ಯ, ಕಂದಾಯ, ಆರಕ್ಷಕ, ಪ್ರಾದೇಶಿಕ ಸಾರಿಗೆ, ಶಿಕ್ಷಣ ಇಲಾಖೆ, ಅಬಕಾರಿ ಮತ್ತು ಇನ್ನಿತರೆ ಇಲಾಖೆಗಳ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಸರ್ಕಾರದ ಇತ್ತೀಚಿನ ಸುತ್ತೋಲೆಯಂತೆ ಹಾಗೂ ಹಾಲಿ ಜಿಲ್ಲೆಯಲ್ಲಿನ ಕೋವಿಡ್-೧೯ ಪರಿಸ್ಥಿತಿಯನ್ನು ಅವಲೋಕಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯ ಕ್ರಮಕೈಗೊಳ್ಳಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ತಿಳಿಸಿದ್ದಾರೆ.
ಚೆಕ್ಪೋಸ್ಟ್ನಲ್ಲಿ ರ್ಯಾಂಡಮ್ ಟೆಸ್ಟ್
ಜಿಲ್ಲೆಯ ವಸತಿ ನಿಲಯಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳು ಆಗಾಗ್ಗೆ ನೆರೆಯ ಕೇರಳ ರಾಜ್ಯಕ್ಕೆ ಸಂಚರಿಸುವುದನ್ನು ಕಡಿಮೆಗೊಳಿಸಲು ಸೂಚಿಸಲಾಗಿದೆ. ಈ ರೀತಿಯಾಗಿ ಸಂಚರಿಸಿರುವ ವಿದ್ಯಾರ್ಥಿಗಳ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯನ್ನು ನಡೆಸಲಾಗುವುದು. ಆರೋಗ್ಯ ಇಲಾಖೆ ವತಿಯಿಂದ ರಚಿಸಲಾಗಿರುವ ತಂಡ ಮೊಬೈಲ್ ಯೂನಿಟ್ ಮೂಲಕ ಮೇಲಿನ ೪ ಚೆಕ್ಪೋಸ್ಟ್ಗಳಲ್ಲಿ, ಜಿಲ್ಲೆಯ ಪ್ರವಾಸಿ, ಪ್ರೇಕ್ಷಣೀಯ ಸ್ಥಳಗಳು ಹಾಗೂ ಅಧಿಕ ಜನ ಸಂದಣಿ ಇರುವ ಪ್ರದೇಶ, ಸಂತೆ ಮುಂತಾದ ಸ್ಥಳಗಳಲ್ಲಿ ರ್ಯಾಂಡಮ್ ಟೆಸ್ಟ್ ನಡೆಸಲಿರುತ್ತಾರೆ.
ಕೇರಳ ರಾಜ್ಯದ ಗಡಿಭಾಗದಲ್ಲಿರುವ ಕೊಡಗು ಜಿಲ್ಲೆಗೆ ಸೇರಿದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಕೂಡಲೇ ಕಡ್ಡಾಯವಾಗಿ ಸಮೀಪದ ಆರೋಗ್ಯ ಕೇಂದ್ರದಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸುವುದು. ಅಲ್ಲದೆ, ಕೋವಿಡ್-೧೯ ಮಾರ್ಗಸೂಚಿಯಂತೆ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಮತ್ತಿತರ ಬಗ್ಗೆ ಇನ್ನೂ ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದ್ದಾರೆ.
ಆತಿಥ್ಯ ಕೇಂದ್ರದಲ್ಲೂ ಎಚ್ಚರಿಕೆ
ಜಿಲ್ಲೆಯ ಎಲ್ಲಾ ಹೊಟೇಲ್, ರೆಸಾರ್ಟ್, ಹೋಂ ಸ್ಟೇ, ಲಾಡ್ಜ್ಗಳಿಗೆ ವಸತಿ ಸೌಕರ್ಯಕ್ಕಾಗಿ ಆಗಮಿಸುವವರು ಕನಿಷ್ಟ ೭೨ ಗಂಟೆಗಳ ಒಳಗಾಗಿ ಪಡೆದಿರುವ ನೆಗೆಟಿವ್ ರಿಪೋರ್ಟ್ನ್ನು ಹೊಂದಿರುವ ಬಗ್ಗೆ ಸಂಬAಧಪಟ್ಟ ಮಳಿಗೆಗಳ ಮಾಲೀಕರು ಅಥವಾ ವ್ಯವಸ್ಥಾಪಕರು ಖಚಿತಪಡಿಸಿಕೊಳ್ಳುವುದು. ಈ ಬಗ್ಗೆ ನಿಯೋಜಿಸಲ್ಪಟ್ಟ ತಂಡದ ಅಧಿಕಾರಿಗಳು ಯಾವುದೇ ವೇಳೆಯಲ್ಲಿ ಅನಿರೀಕ್ಷಿತ ಭೇಟಿ ನೀಡಲಿದ್ದು, ಯಾವುದೇ ಲೋಪ ಅಥವಾ ಆದೇಶದ ಉಲ್ಲಂಘನೆ ಕಂಡುಬAದಲ್ಲಿ ವಿವಿಧ ಕಾಯ್ದೆಯಡಿ ನಿಯಮಾನುಸಾರ ಕಾನೂನು ಕ್ರಮ ಜರುಗಿಸಲಾಗುವುದು.
ಕೇರಳ ರಾಜ್ಯದ ಗಡಿಭಾಗಗಳಲ್ಲಿನ ಜಿಲ್ಲೆಗೆ ಸೇರಿದ ಪ್ರದೇಶಗಳಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್, ಸ್ಟಾರ್ ಹೋಟೆಲ್ ಮುಂತಾದವುಗಳಿಗೆ ಆತಿಥ್ಯಕ್ಕಾಗಿ ಕೇರಳ ರಾಜ್ಯದಿಂದ ಸಾರ್ವಜನಿಕರು ಆಗಮಿಸುತ್ತಿದ್ದಲ್ಲಿ, ಅಂತಹ ಮಳಿಗೆಗಳ ಮಾಲೀಕರು ಅಥವಾ ವ್ಯವಸ್ಥಾಪಕರು ಗಮನಹರಿಸಿ ಆಗಮಿಸುವವರು ಕಡ್ಡಾಯವಾಗಿ ಕನಿಷ್ಟ ೭೨ ಗಂಟೆಗಳ ಒಳಗಾಗಿ ಪಡೆದಿರುವ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ನ್ನು ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು. ಈ ಬಗ್ಗೆ ಕಾರ್ಯಾಚರಣೆ ತಂಡ ಅನಿರೀಕ್ಷಿತ ಭೇಟಿ ನೀಡಲಿದ್ದು, ಆದೇಶದ ಉಲ್ಲಂಘನೆಯಾದಲ್ಲಿ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕ ಹಿತಾಸಕ್ತಿಯಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ. ಉಲ್ಲಂಘನೆಯು ಭಾರತೀಯದಂಡ ಸಂಹಿತೆ ಕಲಂ ೧೮೮ ಹಾಗೂ ವಿವಿಧ ಕಾಯ್ದೆಗಳಡಿ ದಂಡನೀಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಚಾರುಲತ ಸೋಮಲ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ನಡಿಗೆ ಹಳ್ಳಿಯ ಕಡೆಗೆ ಗ್ರಾಮವಾಸ್ತವ್ಯ ಕಾರ್ಯಕ್ರಮ ಹಿನ್ನೆಲೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಶ್ರೀಮಂಗಲ ಹೋಬಳಿ ವ್ಯಾಪ್ತಿಯ ವಿವಿಧ ಹಾಡಿ, ವಿದ್ಯಾರ್ಥಿ ನಿಲಯ, ಅಂಗನವಾಡಿ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಕೊಡಗು-ಕೇರಳ ಗಡಿಭಾಗದ ಕುಟ್ಟ-ತೋಳ್ಪಟ್ಟಿ ಚೆಕ್ಪೋಸ್ಟ್ಗಳಿಗೆ ಭೇಟಿ ನೀಡಿ ಕೊರೊನಾ ನಿಯಂತ್ರಣ ಸಂಬAಧ ನಿಯಮನುಸಾರ ಸರ್ಕಾರದ ನಿರ್ದೇಶನಗಳನ್ನು ಪಾಲಿಸುವಂತೆ ಚೆಕ್ಪೋಸ್ಟ್ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಿದ್ಯಾರ್ಥಿಗಳಿಗೆ ಕೊರೊನಾ ತಪಾಸಣೆ
ಕೂಡಿಗೆ: ಕೇರಳ ರಾಜ್ಯದಿಂದ ಬಂದ ೩೩ ವಿದ್ಯಾರ್ಥಿಗಳನ್ನು ಶಿರಂಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕೊರೊನಾ ತಪಾಸಣೆ ಮಾಡಲಾಯಿತು.
ತೊರೆನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕ ಅಳುವಾರ ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಪದವಿ ಕೇಂದ್ರಕ್ಕೆ ಬಂದ ೩೩ ವಿದ್ಯಾರ್ಥಿಗಳನ್ನು ಆರೋಗ್ಯ ಇಲಾಖೆಯ ವತಿಯಿಂದ ತಪಾಸಣೆ ಮಾಡಲಾಗಿದೆ ಎಂದು ಶಿರಂಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಮಹಾಲಕ್ಷ್ಮಿ ತಿಳಿಸಿದರು.
ಗೋಣಿಕೊಪ್ಪಲು: ಕೊಡಗಿನ ಗಡಿ ಭಾಗವಾದ ಕುಟ್ಟ ಹಾಗೂ ಮಾಕುಟ್ಟ ಪೆರುಂಬಾಡಿಯ ಚೆಕ್ಪೋಸ್ಟ್ಗಳಲ್ಲಿ ಕಳೆದೆರಡು ದಿನಗಳಿಂದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕೋವಿಡ್ -೧೯ ಪರೀಕ್ಷೆ ನಡೆಸುತ್ತಿದ್ದಾರೆ.
ಕೇರಳದಿಂದ ಕೊಡಗಿಗೆ ಆಗಮಿಸುವ ಪ್ರವಾಸಿಗರ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ವರದಿಯನ್ನು ಗಡಿಯಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಕುಟ್ಟ ಬಳಿ ಇರುವ ತಪಾಸಣಾ ಕೇಂದ್ರದಲ್ಲಿ ಶನಿವಾರ ೨೫೨(ಮಧ್ಯಾಹ್ನದ ವೇಳೆಗೆ) ಪರೀಕ್ಷೆಗಳನ್ನು ನಡೆಸಲಾಗಿದೆ. ಮಾಕುಟ್ಟ ಬಳಿಯ ಪೆರುಂಬಾಡಿ ಗೇಟ್ ಬಳಿ ೧೪೨ ಮಂದಿಗೆ ಪರೀಕ್ಷೆ ಮಾಡಲಾಗಿದ್ದು ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. ತಾಲೂಕು ವೈದ್ಯಾಧಿಕಾರಿಗಳಾದ ಡಾ.ಯತಿರಾಜ್ ಗಡಿಭಾಗಕ್ಕೆ ತೆರಳಿ ಸಿಬ್ಬಂದಿಗಳು ನಿರ್ವಹಿಸುತ್ತಿರುವ ಕೆಲಸದ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಕುಟ್ಟ ಗಡಿಭಾಗದಲ್ಲಿ ವೃತ್ತ ನಿರೀಕ್ಷಕರಾದ ಪರಶಿವಮೂರ್ತಿ ಹಾಗೂ ಸಿಬ್ಬಂದಿಗಳು ವಾಹನಗಳನ್ನು ತಪಾಸಣೆಗೆ ಒಳಪಡಿಸಿ ನಂತರ ಕೇಂದ್ರದಲ್ಲಿ ಕೋವಿಡ್ -೧೯ ಪರೀಕ್ಷೆಯನ್ನು ನಡೆಸುತ್ತಿರುವ ಆರೋಗ್ಯ ಸಿಬ್ಬಂದಿಯ ಬಳಿ ಕಳುಹಿಸುತ್ತಿದ್ದಾರೆ. ಆರೋಗ್ಯ ಸಿಬ್ಬಂದಿಗಳು, ಇಲಾಖೆಯ ಮುಂಜಾಗ್ರತಾÀ ಕ್ರಮಗಳನ್ನು ವಹಿಸುವ ಮೂಲಕ ತಪಾಸಣೆ ಕಾರ್ಯವನ್ನು ಶರವೇಗದಲ್ಲಿ ಮುಂದುವರೆಸುತ್ತಿದ್ದಾರೆ. ಕೊಡಗಿಗೆ ಕೊರೊನಾ ಪ್ರಕರಣಗಳು ನುಸುಳದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.
ಕೇರಳ ರಾಜ್ಯದಿಂದ ಕೊಡಗಿಗೆ ಆಗಮಿಸುವ ವರ್ತಕರು ಹಾಗೂ ಪ್ರವಾಸಿಗರು ಕಡ್ಡಾಯವಾಗಿ ಕೋವಿಡ್ -೧೯ ಪರೀಕ್ಷೆಯ ೭೨ ಗಂಟೆಯ ಒಳಗೆ ತಪಾಸಣೆ ಮಾಡಿದ ನೆಗೆಟಿವ್ ವರದಿಯನ್ನು ತರಬೇಕು. ಗಡಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಇವುಗಳನ್ನು ತೋರಿಸುವುದು ಕಡ್ಡಾಯವಾಗಿರುತ್ತದೆ ಎಂದು ವೈದ್ಯಾಧಿಕಾರಿ ಡಾ.ಯತಿರಾಜ್ ಮಾಹಿತಿ ನೀಡಿದ್ದಾರೆ.
ಕೇರಳದಿಂದ ಬರುವ ಕಾರು, ಬಸ್, ಟೆಂಪೋ, ಲಾರಿ, ಟಿಪ್ಪರ್ ಹಾಗೂ ಬೈಕ್ನಲ್ಲಿ ಬರುವ ಜನರಿಗೆ ಮೊದಲಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಜ್ವರ ಕಂಡು ಬಂದಲ್ಲಿ ಕುಟ್ಟಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಲು ಎಲ್ಲಾ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲಾಗಿದೆ. ಶನಿವಾರ ರಾತ್ರಿಯಿಂದ ಕೇರಳ ರಾಜ್ಯದಿಂದ ಕೊಡಗಿನ ಮೂಲಕ ರಾತ್ರಿ ಸಂಚರಿಸುವ ಬಸ್ಗಳನ್ನು ಸಹ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ತಾಲ್ಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಅವರೊಂದಿಗೆ ಕುಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಸತೀಶ್, ಕುಟ್ಟ ವೃತ್ತನಿರೀಕ್ಷಕ ಪರಶಿವಮೂರ್ತಿ, ಎಸ್.ಐ ಚಂದ್ರಪ್ಪ, ಎ.ಎಸ್.ಐ. ಚಂದ್ರು, ಪೊಲೀಸ್ ಸಿಬ್ಬಂದಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ತಪಾಸಣೆಯಲ್ಲಿ ಹಾಜರಿದ್ದರು.
ಕರಿಕೆ : ಕೇರಳಕ್ಕೆ ಹೊಂದಿಕೊAಡಿರುವ ಗಡಿ ಕರಿಕೆಯಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಕೋವಿಡ್ ನೆಗೆÀಟಿವ್ ವರದಿ ಇದ್ದಲ್ಲಿ ಮಾತ್ರವೇ ಪ್ರವೇಶ ಕಲ್ಪಿಸಲಾಗುತ್ತಿದೆ.
ಬೆಳಿಗ್ಗೆ ಒಂಬತ್ತರಿAದ ಸಂಜೆ ೫ ಗಂಟೆಯ ತನಕ ೨೦೮ ವಾಹನ ತಪಾಸಣೆ ನಡೆಸಲಾಗಿದ್ದು, ೨೭ ವಾಹನವನ್ನು ಕೋವಿಡ್ ವರದಿ ಇಲ್ಲದ ಹಿನ್ನೆಲೆ ಕಳುಹಿಸಲಾಯಿತು.
ಸ್ಥಳದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರು ಹಾಗೂ ಆಶಾ ಕಾರ್ಯಕರ್ತರ ತಂಡ ಕರ್ತವ್ಯ ನಿರ್ವಹಿಸುತ್ತಿದ್ದು, ಆರಕ್ಷಕ ಸಿಬಂದಿಗಳಿಲ್ಲದೆ ಒಂದಷ್ಟು ಪ್ರಯಾಣಿಕರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳೊAದಿಗೆ ವಾಗ್ವಾದ ನಡೆಸಿದ ಘಟನೆ ಕೂಡ ನಡೆದಿದೆ. ನಂತರ ಸ್ಥಳೀಯ ವೈದ್ಯರು ಮಡಿಕೇರಿ ಡಿ.ವೈ.ಎಸ್ಪಿಯವರಿಗೆ ಕರೆ ಮಾಡಿ ಸಹಕಾರ ಕೋರಿದ ಮೇರೆಗೆ ಕೂಡಲೇ ಸ್ಪಂದಿಸಿದ ಮಡಿಕೇರಿ ಡಿ.ವೈ.ಎಸ್ಪಿ ದಿನೇಶ್ ಕುಮಾರ್ ಚೆಕ್ಪೋಸ್ಟ್ನಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಸೂಚನೆ ನೀಡಿದರು. ಸಾಕಷ್ಟು ಕೇರಳದ ವಾಹನಗಳು ಗಡಿವರೆಗೆ ಬಂದು ನಂತರ ವಾಪಾಸು ತೆರಳುತ್ತಿರುವ ಚಿತ್ರಣ ಕಂಡುಬAತು.
ಸAಪಾಜೆಯಲ್ಲಿ ಕೂಡ ಆರೋಗ್ಯ ಕಾರ್ಯಕರ್ತರು ಕೇರಳದಿಂದ ಬರುವವರನ್ನು ಥರ್ಮಲ್ ಸ್ಕಾö್ಯನಿಂಗ್ ಮೂಲಕ ತಪಾಸಣೆ ನಡೆಸಿದರು. ನೆಗೆಟಿವ್ ವರದಿಯನ್ನು ಪರಿಶೀಲಿಸಿದರು.
ಊಟ ಇಲ್ಲದೆ ಪರದಾಟ :
ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಬಿಸಿಲಿನಲ್ಲಿ ಕುಡಿಯಲು ನೀರು ಹಾಗೂ ಊಟವಿಲ್ಲದೆ ಪರದಾಡುತ್ತಿದ್ದು, ಈ ಬಗ್ಗೆ ‘ಶಕ್ತಿ'ಯೊಂದಿಗೆ ತಮ್ಮ ಅಳಲು ತೋಡಿಕೊಂಡಾಗ ಸ್ಥಳೀಯ ಉದ್ಯಮಿಯೊಬ್ಬರು ತಾವೇ ಸ್ಥಳೀಯ ಹೊಟೇಲ್ನಿಂದ ಊಟ ತರಿಸಿ ನೀಡಿದರು.
-ವರದಿ : ಹೆಚ್.ಕೆ ಜಗದೀಶ್, ಎನ್.ಎನ್ ದಿನೇಶ್, ಹೊದ್ದೆಟ್ಟಿ ಸುಧೀರ್, ನಾಗರಾಜ್ ಶೆಟ್ಟಿ, ಶಬರೀಶ್