ಹೆಸರೇ ಹೇಳುವಂತೆ ವಾಯುವಿನಿಂದ ಉತ್ಪತ್ತಿಯಾದವಳೆಂದು ಅರ್ಥ. ತುಲಾ ಸಂಕ್ರಮಣ ಕಾಲವು ಸೂರ್ಯನು ಭೂಮಧ್ಯೆ ರೇಖೆಯನ್ನು ದಾಟುವ ಸಮಯದಲ್ಲಿ ನಡೆಯುತ್ತದೆ. ರಾಶಿ ಮಂಡಲದಲ್ಲಿ ಏಳನೇ ರಾಶಿಯಾದ, ಜ್ಯೋತಿಷ್ಯ ಶಾಸ್ತçದಲ್ಲಿ ವಾಯುತತ್ವ ರಾಶಿ-ಶುಕ್ರಾಧಿಪತ್ಯ ಉಳ್ಳ ತುಲಾ ರಾಶಿಯಲ್ಲಿ ಕುಜ ನಕ್ಷತ್ರವಾದ ಚಿತ್ತಾ ನಕ್ಷತ್ರ ಮೂರನೇ ಪಾದಕ್ಕೆ ಸೂರ್ಯನು ಕಾಲಿಟ್ಟಾಗ ತುಲಾ ಸಂಕ್ರಮಣವು ದೃಗ್ಗಣಿತ ರೀತ್ಯಾ ನಡೆಯುತ್ತದೆ. ವೈಜ್ಞಾನಿಕವಾಗಿಯೂ, ಭೂಮಿಯು ಚಲಿಸುವ ಮಾರ್ಗದಲ್ಲಿ ತುಲಾ ರಾಶಿಯಿಂದ ಮಕರ ರಾಶಿಯವರೆಗಿರುವುದು ವಿಷ್ಣು ಪರಮ ಪಾದ ಅಥವಾ ಸೂರ್ಯ ಸ್ಥಾನ (ಊighesಣ ಠಿoiಟಿಣ) ಭೂಮಿಯ ಪುತ್ರ ಕುಜ, ನಕ್ಷತ್ರವಾದ ಚಿತ್ತಾ ನಕ್ಷತ್ರವು ಭೂಮಿಯು ಚಲಿಸುವ ಮಾರ್ಗದಲ್ಲಿನ ೭+೭=೧೪ನೇ ನಕ್ಷತ್ರವಾಗಿರುತ್ತದೆ. ವಾಯು ನಕ್ಷತ್ರ ಇದರ ಪಕ್ಕದಲ್ಲೇ ಇರುವುದರಿಂದ ತೇಜಸ್ಸಿನಿಂದ ಕೂಡಿದ ಅಗ್ನಿ ಸ್ವರೂಪನಾದ ಸೂರ್ಯದೇವನು ವಾಯು ತತ್ವ ರಾಶಿಯಲ್ಲಿ ವಾಯು ನಕ್ಷತ್ರದೊಡನೆ ಸಂಯೋಗವಾಗುವಾಗ ಸಮುದ್ರದಲ್ಲಾಗುವ ಬದಲಾವಣೆಯೇ ತಲಕಾವೇರಿಯಲ್ಲಿ ಇಂದಿಗೂ ಉಕ್ಕುವ ನೀರಿಗೆ ಆಧಾರವಾಗಿದೆ. ತುಲಾ ಸಂಕ್ರಮಣ ಕಾಲದಲ್ಲಿ ೨x೨ ಅಡಿ ಅಗಲದ ಬ್ರಹ್ಮಕುಂಡಿಕೆಯಿAದ ಗೆಲನ್‌ಗಟ್ಟಲೆ ನೀರನ್ನು ಬಗೆದರೂ ನೀರು ಅಕ್ಷಯವಾಗುವುದು. ಅದು ಇಂದಿಗೂ ನಮ್ಮ ಕಣ್ಣಿನ ಮುಂದಿರುವ ಸತ್ಯ. ತುಲಾಸಂಕ್ರಮಣದ ಒಂದು ತಿಂಗಳ ಕಾಲ ಸಮಸ್ತ ತೀರ್ಥಗಳು ಕಾವೇರಿಯಲ್ಲಿರುತ್ತದೆ ಎಂಬ ಕೊಡವರ ನಂಬಿಕೆಗೆ ಇದು ಜೋತಿಷ್ಯ ಆಧಾರ ಮಾತ್ರವಲ್ಲದೆ, ವೈಜ್ಞಾನಿಕವಾದ ಹಿನ್ನೆಲೆಯಿಂದ ಕೂಡಿದೆ ಎಂದು ನಾವಿಲ್ಲಿ ತಿಳಿಯಬಹುದು. ವಿಜ್ಞಾನವೆಂದೇ ಹೇಳಬೇಕಾದ ನಮ್ಮ ವೇದವು, ತುಲಾಸಂಕ್ರಮಣ ಕಾಲವನ್ನು ಭೂಮಿಯಲ್ಲಿ ಸೂರ್ಯನಿರುವ ಕಾಲವೆಂದು ತುಲಾಸಂಕ್ರಮಣ ಕಾಲದ ಪಾವಿತ್ರö್ಯತೆಯನ್ನು ಬಣ್ಣಿಸುತ್ತದೆ. ಭೂಮಿಯಲ್ಲಿ ಸೂರ್ಯನಿರುವ ಕಾಲದಲ್ಲಿ ಪಂಚ ಮಹಾಭೂತಗಳನ್ನು ತನ್ನಲ್ಲಡಗಿಸಿಕೊಂಡಿ ರುವ ತೆಂಗಿನಕಾಯಿಯನ್ನು ದೇವರಿಗೆ ನೈವೇದ್ಯ ಮಾಡುವುದರಿಂದ ಕರ್ಮಗಳು ಕಳೆಯುತ್ತದೆ ಎಂಬ ವೇದೋಕ್ತಿಯಂತೆ ಕೊಡವರ ಆಚರಣೆಯೂ ಇಂದಿಗೂ ಪ್ರಸ್ತುತಿಯಲ್ಲಿದೆ. ಅಂದರೆ ಖಗೋಳ ಗಣಿತದ ಅರಿವು ಮತ್ತು ವೇದ ಜ್ಞಾನ ವೇದಕಾಲದ ಕ್ಷತ್ರಿಯರಾದ ಕೊಡವ ಹಿರಿಯರಲ್ಲಿತ್ತು ಎಂದು ನಾವು ಖಂಡಿತ ಇಲ್ಲಿ ತಿಳಿಯಬಹುದು.

ಕೊಡವರಿಗೆ ಕುಲದೇವತೆಯಾದ ಕಾವೇರಿಯೇ ಸ್ವಾಹಾ ದೇವಿಯೂ-ಸ್ವಧಾದೇವಿಯೂ ಆಗಿರುತ್ತಾಳೆ. ಮದುವೆಯಂತಹ ಯಾವುದೇ ಶುಭ ಕಾರ್ಯಗಳಲ್ಲಾಗಲಿ, ಮಕ್ಕಳನ್ನು ಹೆತ್ತ ಸಮಯದಲ್ಲಾಗಲಿ, ಸತ್ತ ತಿಥಿ ಕರ್ಮಾಂತರಗಳಲ್ಲಾಗಲಿ, ಬ್ರಾಹ್ಮಣರನ್ನು ಕರೆಸಿಕೊಳ್ಳದೆ ಹಿರಿಯರ ಆಜ್ಞೆಯಂತೆ, ಹಿರಿಯರನ್ನೇ ಮುಂದೆ ನಿಲ್ಲಿಸಿಕೊಂಡು ಹಿರಿಯರನ್ನು-ಗುರುಗಳನ್ನು ನೆನೆದು ಎಲ್ಲಾ ಶುಭ-ಅಶುಭ ಕಾರ್ಯವನ್ನು ಮಾಡುವ ಕೊಡವ ಹಿರಿಯರು ಪೂರ್ವದಲ್ಲಿ ಕಾವೇರಿಗೆ ಹೋಗಿ ಪಿಂಡ ಪ್ರದಾನ ಮಾಡುತ್ತಿರಲಿಲ್ಲ. ಬದಲಾಗಿ ಕಾವೇರಿಯಲ್ಲಿ ಮುಳುಗಿ “ಸ್ವಧಾ” ಎಂದು ತಮ್ಮ ಪಿತೃಗಳನ್ನು ನೆನೆದುಕೊಂಡು ಅಂಗೈಯಲ್ಲಿ ನೀರನ್ನು ಬಿಟ್ಟು ಬರುತ್ತಿದ್ದರು. ಇದು ಕೊಡವರಿಗೆ ಕಾವೇರಿ ಕೊಟ್ಟ ವರವೆಂದು ಕೊಡವರು ನಂಬುತ್ತಾರೆ. ಇದು ಪಂಚ ಮಹಾ ಯಜ್ಞಗಳಲ್ಲಿ ಒಂದಾದ ಪಿತೃಯಜ್ಞಕ್ಕೆ ಸಂಬAಧಪಟ್ಟದ್ದಾಗಿರುತ್ತದೆ. ಪಿತೃ ಯಜ್ಞ ಇಷ್ಟರಲ್ಲೇ ಸಮಾಪ್ತಿಯಾಗುವ ದೆಂದು ಋಗ್ವೇದವು ಹೇಳುತ್ತದೆ. ಕೊಡವರ ಈ ಪಿತೃ ಯಜ್ಞದಲ್ಲಿ ಪವಿತ್ರವಾದ ಜಲವನ್ನು ಅಥವಾ ತೀರ್ಥರೂಪಿಣಿಯಾದ ಕಾವೇರಿಯನ್ನು ಯಾವುದೇ ಕಾರಣಕ್ಕೂ ಹಾಳು ಮಾಡದೆ ಕಾವೇರಿಯನ್ನು ಜಲಮಾಲಿನ್ಯದಿಂದ ರಕ್ಷಣೆ ಮಾಡುವ ವೈಜ್ಞಾನಿಕತೆ ಅಡಗಿದೆಯೆಂದು ಇಲ್ಲಿ ನಾವು ಖಂಡಿತ ಹೇಳಬಹುದು, ಎಷ್ಟೊಂದು ಅರ್ಥಗರ್ಭಿತವಾಗಿದೆ. ನಮ್ಮ ವೇದದಲ್ಲಿ ಅಡಗಿರುವ ಸಂಸ್ಕಾರ-ಸAಸ್ಕೃತಿಗಳು, ಆಚಾರ-ವಿಚಾರಗಳು ನಾವು ಮಾತ್ರ ಬದುಕಿದರೆ ಸಾಲದು, ನಮ್ಮ ಮುಂದಿನ ಪೀಳಿಗೆಗೂ ಈ ಭೂಮಿಯಲ್ಲಿ ಎಲ್ಲಾ ಸೌಕರ್ಯ ಗಳು ಇರಬೇಕು. ಈ ಭೂಮಿ ಉಳಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಬದುಕಲು ಸಾಧ್ಯವೆಂಬ ಜ್ಞಾನ, ನಮ್ಮ ಹಿರಿಯರಲ್ಲಿದ್ದ ತ್ಯಾಗದ ಕುರುಹು, ನಮ್ಮಲ್ಲಿ ಎಲ್ಲಿದೆ ? ಅದನ್ನೆಲ್ಲಾ ನಾವೆಲ್ಲಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿ ದ್ದೇವೆ, ನಾವು! ತುಲಾ ಸಂಕ್ರಮಣ ವನ್ನು ಕೊಡವರು “ತೊಲ್ಯಾರ್ ಚಂಗ್ರಾAದಿ” ಎನ್ನುತ್ತಾರೆ. ತುಲಾ ಸಂಕ್ರಮಣದ ಪುಣ್ಯಕಾಲದ ಹಿಂದಿನ ದಿನ ಅಂದರೆ ಕಾವೇರಿ ತೀರ್ಥೋದ್ಭವದ ಹಿಂದಿನ ದಿನ ಕೊಡವರು ತಮ್ಮ ಗದ್ದೆ, ಮನೆ, ಬಾವಿ, ತೋಟ, ತೆಂಗಿನಮರ, ರುದ್ರಭೂಮಿ ಹೀಗೆ ಎಲ್ಲಾ ಕಡೆ ಬಿದಿರು ಅಥವಾ ಪೊಂಗ ಮರದ ನಾಟೆಯ ತುದಿಯನ್ನು ಕತ್ತರಿಯಂತೆ ಮಾಡಿಕೊಂಡು ಒಂದು ಜಾಗದಲ್ಲಿ ಎರಡು-ಎರಡರಂತೆ ನಾಟೆಗಳನ್ನು ಭೂಮಿಯಲ್ಲಿ ನೆಟ್ಟು ಕತ್ತರಿಯಂತಿರುವಲ್ಲಿಗೆ ಕಾಡಿನಲ್ಲಿ ಸಿಗುವ ಒಂದು ಜಾತಿಯ ಕೈ ಬಳ ಬಳ್ಳಿ ಅಥವಾ ಬೊತ್ತ್ ಬಳ್ಳಿಯನ್ನು ಮೂರು ಸುತ್ತು ಚಕ್ರಾಕಾರವಾಗಿ ಸುತ್ತುತ್ತಾರೆ. ಮನೆ, ಬಾವಿ, ಬಿತ್ತನೆ ಮಾಡುವ ಗದ್ದೆಗಳಲ್ಲಿ ಮೂರು ನಾಟೆಗಳನ್ನು ಚುಚ್ಚಿ, ಮೂರು ನಾಟೆಗಳನ್ನು ಸೇರಿಸಿ ಕೈಬಳ ಬಳ್ಳಿಯನ್ನು ಚಕ್ರಾಕಾರವಾಗಿ ಸುತ್ತುತ್ತಾರೆ. ಈ ತರಹದ ನಾಟೆ ಚುಚ್ಚುವುದನ್ನು ಕೊಡವರು “ಬೊತ್ತ್ ಕುತ್ತುವೋ” ಎನ್ನುತ್ತಾರೆ. ಈ ತರಹದ (ಬೊತ್ತನ್ನು) ನಿಶಾನೆ, ಚುಚ್ಚಿಯಾದ ಮೇಲೆ ಮೊದಲಿಗೆ “ಬೊತ್ತುಲೆ” ಎನ್ನುತ್ತಾರೆ. “ಬೊತ್ತುಲೆ” ಎಂದರೆ ಹೆದರುವುದಿಲ್ಲ ಎಂದರ್ಥ. ಬೊತ್ತುಲೆ ಎಂದಾದ ಮೇಲೆ ಪಾಂಡವ, ಕೌರವ ಬೊತ್ತೋ ನೆಲ್ಲ್ ಕಂಡೋ......... ಎಂದು ಹೇಳಿ ಕ್ಞೂ-ಕ್ಞೂ-ಕ್ಞೂ ಎಂದು ಮೂರು ಸಾರಿ ಕೂಗು ಹಾಕುತ್ತಾರೆ. ಸೃಷ್ಟಿ, ಸ್ಥಿತಿ, ಲಯಕಾರನಾದ ಸೂರ್ಯದೇವನು ಮೂರು ಹೊತ್ತು, ಮೂರು ರೂಪದಲ್ಲಿ ಈ ಭುವಿಯನ್ನು, ಇಲ್ಲಿಯ ಜೀವಿಗಳನ್ನು ಸಂರಕ್ಷಿಸುವAತೆ ಜಲರೂಪಿಣಿಯಾದ ಕಾವೇರಿ ನಮ್ಮನ್ನು ಕಾಪಾಡಬೇಕೆಂದು ಬೇಡಿಕೊಳ್ಳುತ್ತಾರೆ. ಮೂರು ನಾಟೆಗಳನ್ನು ಚುಚ್ಚಿದ ಸ್ಥಳಗಳಲ್ಲಿ ನೀರಿನ ಚಿಹ್ನೆಯಾಗಿರುವ ಹಾಲು ಬರುವ ಬಳ್ಳಿಯನ್ನೂ (ಪಾಬಳ್ಳಿ) ಕೈ ಬಳ ಬಳ್ಳಿಯೊಡನೆ ಸೇರಿಸಿ ಚಕ್ರಾಕಾರವಾಗಿ ಸುತ್ತುತ್ತಾರೆ. “ಬೊತ್ತ್ ಕುತ್ತುವೋ” ಪದ್ಧತಿಯಲ್ಲಿ ಪಾಂಡವ -ಕೌರವ ಬೊತ್ತೂ...... ಎನ್ನುವುದಕ್ಕೆ ಒಂದು ಕಥೆಯಿದೆ. ಸತ್ಯ ವ್ರತಾಚರಣೆ ಉಳ್ಳವರೂ, ಧರ್ಮಾತ್ಮರೂ ಆದ ಪಾಂಡವರ ಸಂತತಿ ತಾವು ಎಂದು ಕೊಡವರು ನಂಬಿದ್ದಾರೆ. ಕೊಡಗಿನ ಜಾನಪದ ಸಾಹಿತ್ಯವೊಂದರ ಪ್ರಕಾರ ಕೊಡವರು ಪಾಂಡವ ವಂಶಸ್ಥರೆAದು ತಜ್ಞರು ಅಭಿಪ್ರಾಯಪಡುತ್ತಾರೆ.

ಸತ್ಯವಂತರೂ, ಧರ್ಮಾಚರಣೆ ಉಳ್ಳವರೂ ಆದ ಪಾಂಡವರ -ಕೊಡವರ ಆಸ್ತಿಯನ್ನು ಕೌರವರು ಮಾತ್ಸರ್ಯದಿಂದ ತುಲಾ ಸಂಕ್ರಮಣ ಕಾಲದ ಕಾವೇರಿ ದರ್ಶನದ ಕಾಲದಲ್ಲಿ ತಮಗೆ ಬೇಕು ಎಂದು ಕಾವೇರಿಯಲ್ಲಿ ಕೇಳಿಕೊಂಡಾಗ ಕಾವೇರಿ ತಾಯಿ ಕೊಡವರಾದ ನನ್ನ ಮಕ್ಕಳು ತಮ್ಮ ಆಸ್ತಿಗೆ ಗುರುತು ಹಾಕಿದ್ದಾರೆ ಎಂದೂ ಆರು ತಿಂಗಳು ಕಳೆದು ಬನ್ನಿ ನೋಡುವ ಎನ್ನುತ್ತಾಳೆ. ಅದೇ ಪ್ರಕಾರವಾಗಿ ಸರಿಯಾಗಿ ಆರು ತಿಂಗಳು ಕಳೆದು ಕೌರವರು ಬಂದಾಗ ಕೊಡವರು ಸೌರಮಾನ ಯುಗಾದಿ ಆಚರಿಸುತ್ತಿರುತ್ತಾರೆ. ಆಗ ಕಾವೇರಿ ತಾಯಿ ತನ್ನ ಮಕ್ಕಳಾದ ಪಾಂಡವರು ತಮ್ಮ ಭೂಮಿಯನ್ನು ಉಳುಮೆ ಮಾಡಿದ್ದಾರೆ. ಮತ್ತೆ ಆರು ತಿಂಗಳು ಬಿಟ್ಟುಕೊಂಡು ಬನ್ನಿ ಎನ್ನುತ್ತಾಳೆ. ಮೇಷ ಸಂಕ್ರಮಣ ಮತ್ತು ತುಲಾ ಸಂಕ್ರಮಣ ಪುಣ್ಯ ಕಾಲಗಳು ಸೂರ್ಯನು ಭೂ ಮಧ್ಯೆ ರೇಖೆಯನ್ನು ದಾಟುವ ಸಮಯದಲ್ಲಾಗುತ್ತದೆ. ಹೀಗೆ ಕಾವೇರಿ ತಾಯಿ ಧರ್ಮಿಷ್ಠರೂ, ಸತ್ಯವಂತರೂ ಆದ ತನ್ನ ಮಕ್ಕಳಾದ ಪಾಂಡವ ಸಂತತಿಯನ್ನು ರಕ್ಷಿಸುತ್ತಾ ಬಂದಿದ್ದಾಳೆ ಎಂದು ಇಂದಿಗೂ ಕೊಡವರು ನಂಬಿದ್ದಾರೆ.

ಪಾಂಡವ-ಕೌರವ ಬೊತ್ತೋ ಎಂದರೆ ಧರ್ಮ-ಅಧರ್ಮಗಳ ಸಂಘರ್ಷದ ಬೊತ್ತ್ ಎಂದರ್ಥ. ಅಧರ್ಮದ ವಿರುದ್ಧವಾಗಿ ಹೋರಾಡಲು ಹೆದರುವವರಲ್ಲ ನಾವು ಎಂದರ್ಥ. ತುಲಾ ಸಂಕ್ರಮಣ ಅಥವಾ ಕಾವೇರಿ ಸಂಕ್ರಮಣದ ಕಾಲದಲ್ಲಿ ಕೊಡಗಿನಲ್ಲಿ ಭತ್ತದ ಗದ್ದೆಗಳಲ್ಲಿ ನೆಟ್ಟ ಬೆಳೆಗಳೆಲ್ಲಾ ಹಚ್ಚಹಸಿರಾಗಿ ಕಂಗೊಳಿಸುತ್ತಿರುತ್ತದೆ. ಎಲ್ಲೋ ಒಂದೊAದು ತೆನೆ ದಾಟಿರುತ್ತದೆ. “ನೆಲ್ಲ್ ಕಂಡೋ ಕದ್‌ರ್ ಕಾಂಡೋ” ಎನ್ನುತ್ತಾರೆ. ಭತ್ತವನ್ನು ಕಂಡೇವು ನಾವು, ನೆಟ್ಟ ಭತ್ತದ ಬೆಳೆಯ ಕದಿರು ಕಾಂಡದAತೆ (ಕಾಂಡ ಎನ್ನುವುದೊಂದು ಜಾತಿಯ ಹಾಲು ಬರುವ ಕಾಡು ಗಿಡ ಅದು ಬುಡದಲ್ಲಿ ಒಂದೇ ಒಂದು ರೆಂಬೆಯಿದ್ದರೂ ಮೇಲೆ ಹೋದಂತೆ ಗೊಂಚಲು ಗೊಂಚಲಾಗಿ ಕಣ್ಣಿಗೆ ತುಂಬಿಕೊAಡAತೆ ಕಾಣುತ್ತದೆ.) ಒತ್ತಾಗಿ ತುಂಬಿಕೊAಡಿದೆ. ಅಂದರೆ ನೆಟ್ಟ ನಾಟಿಯು ಹುಲುಸಾಗಿ ಬಂದು ನಮಗೆ ಭತ್ತವು ತುಂಬಾ ಸಿಗಲಿದೆ ಎಂದರ್ಥ. ಬೊತ್ತ್ ಕುತ್ತುವ ಪದ್ಧತಿಯನ್ನು ಕೊಡವರು ಕಾವೇರಿ ತೀರ್ಥ ಬರುವ ಹಿಂದಿನ ದಿನ ಬೆಳಗಿನ ಜಾವದಲ್ಲಿ ಕಾಗೆ-ಪಕ್ಷಿಗಳು ಏಳುವ ಮುನ್ನವೇ ಮಾಡಬೇಕೆಂಬ ನಿಯಮವಿದೆ. ಹಗಲು ಹೊತ್ತಿನಲ್ಲಿ ತೀರ್ಥ ಬರುವುದಾದರೆ ಅಂದಿನ ದಿನವೇ ಬೆಳಗ್ಗಿನ ಜಾವ “ಬೊತ್ತ್ ಕುತ್ತುವೋ” ಕಾರ್ಯವನ್ನು ಮಾಡುತ್ತಾರೆ. ಮತ್ತೊಂದು ವಿಶೇಷವೇನೆಂದರೆ ನೆÀಟ್ಟ ಭತ್ತದ ಬೆಳೆಯಲ್ಲಿ ಮೊದಲಿಗೆ ಕದಿರು ದಾಟುವುದು ಕಂಡರೆ, ಅದಕ್ಕೊಂದು ಗಂಟು ಹಾಕಿ, ಭತ್ತ ತುಂಬಿಡುವ ಕಣಜದ (ಉಡಿಚಿಟಿeಡಿಥಿ) ಹತ್ತಿರ ಬಂದು ಹೆದರಬೇಡ ಪತ್ತಾಯವೇ ನಾನಿಂದು ಕದಿರನ್ನು ಕಂಡೆನೆAದು ಹೇಳುತ್ತಾರೆ. ಹೀಗೆ ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ “ಬೊತ್ತನ್ನು” ನೆಟ್ಟು ಮೂರು ಕೂಗು ಹಾಕುತ್ತಾರೆ. ಕಾವೇರಿ ಮಾತೆಯನ್ನು ಪ್ರಾರ್ಥಿಸಿಕೊಳ್ಳುತ್ತಾರೆ.

“ಉದಯೋ ಬ್ರಹ್ಮ ಸ್ವರೂಪೋಯಾಮ್ ಮಧ್ಯಾನ್ಹೇತು ಮಹೇಶ್ವರ: ಅಸ್ತಮಾನೆ ಸ್ವಯಂ ವಿಷ್ಣುಂ” ಎಂಬ ವೇದೋಕ್ತಿಯಂತೆ ಈ ಭೂಮಿಯ, ಭೂಮಿಯಲ್ಲಿರುವ ಜೀವಗಳ ಆತ್ಮಕಾರಕನಾದ ಸೂರ್ಯದೇವ, ಸಾತ್ವಿಕ, ರಜಸ್, ತಾಮಸ ಮೂರು ಗುಣಗಳಿಂದ ಕೂಡಿದ ಏಕಮೂರ್ತಿ ಸೂರ್ಯ, ಹರಿ, ಹರ. ಬ್ರಹ್ಮರೊಂದಾಗಿ ತ್ರಿಗುಣಾತ್ಮಕನಾಗಿರುವ ಸೂರ್ಯದೇವನು ತುಲೆಗೆ ಕಾಲಿಡುವ ಸುಸಮಯ ಹತ್ತಿರವಾದಂತೆ ಸೂರ್ಯನನ್ನು ಕೃತಜ್ಞತಾ ಪೂರ್ವಕವಾಗಿ ಕ್ಞೂ-ಕ್ಞೂ-ಕ್ಞೂ ಎಂದು ಆದರದಿಂದ ಸ್ವಾಗತಿಸುತ್ತಾರೆ. ಅಗ್ನಿಕೊಂಡವಾದ ಸೂರ್ಯದೇವನು ವಾಯು ತತ್ವ ರಾಶಿಯಲ್ಲಿ ವಾಯು ನಕ್ಷತ್ರದ ಹತ್ತಿರ ಕಾಲಿಟ್ಟರಲ್ಲವೆ ಕಾವೇರಿ ಸಂಕ್ರಮಣ ನಡೆಯುವುದು! ಕಾವೇರಿಯಲ್ಲಿ ನೀರು ಉಕ್ಕಿ-ಉಕ್ಕಿ ಬರುವುದು! ತಮಗೆ ಮೂರು ಹೊತ್ತು ಅವಶ್ಯಕವಾದ ಊಟವನ್ನು ಕಾವೇರಿ ಮಣ್ಣಿನಲ್ಲಿ ಕಾವೇರಿ ತಾಯಿಯೇ ದಯಪಾಲಿಸಿದ್ದಾಳೆಂದು ಕೊಡವರು ನಂಬಿದ್ದಾರೆ. ಬೊತ್ತನ್ನು (ನಿಶಾನೆ) ನೆಟ್ಟು ಕಾವೇರಿ ತಾಯಿಗೆ ಕೌರವರಿಗೆ ಉತ್ತರ ಕೊಡಲು ಸಹಾಯ ಮಾಡುತ್ತಾರೆ. ಕೊಡವರು ತುಲಾ ಸಂಕ್ರಮಣದ ಪುಣ್ಯ ಕಾಲದಲ್ಲಿ ಕಾವೇರಿ ತಾಯಿಯ ಬ್ರಹ್ಮ ಕುಂಡಿಕೆಯಲ್ಲಿ ಮಾತ್ರವಲ್ಲ, ಇಡೀ ಕೊಡಗಿನ ಪ್ರತಿಯೊಂದು ಬಾವಿ, ಕೆರೆಗಳಲ್ಲೂ ಕಾವೇರಿಯು ದರ್ಶನ ಕೊಡುತ್ತಾಳೆ, ನೀರು ಉಕ್ಕಿ-ಉಕ್ಕಿ ಬರುತ್ತದೆ ಎಂದು ಕೊಡವರು ನಂಬುತ್ತಾರೆ. ತೀರ್ಥರೂಪಿಣಿಯಾದ ಕಾವೇರಿಯ ದರ್ಶನವಾದ ನಂತರ ಕೊಡವರಲ್ಲಿ “ಕಣಿ ಪೂಜುವೋ” ಎಂಬ ಆಚರಣೆ ಇದೆ. ಕಣಿ ಪೂಜುವ ದಿನದಂದು ಬೆಳಿಗ್ಗೆ ಬ್ರಾಹ್ಮೀ ಮುಹೂರ್ತಕ್ಕೆ ಮೊದಲೇ ಎದ್ದು ಮನೆಯ ಹೆಂಗಸರು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿ ಮನೆಯನ್ನೆಲ್ಲಾ ಗುಡಿಸಿ, ಒರೆಸಿ, ಸಗಣಿ ನೀರು ಅಥವಾ ಗೋಮೂತ್ರವನ್ನು ಮನೆಗೆ ಪ್ರೋಕ್ಷಿಸಿ ನೆಲ್ಲಕ್ಕಿ ಬೊಳ್‌ಚ ಅಂದರೆ ನಡುಮನೆಯಲ್ಲಿರುವ ದೀಪವನ್ನು ಹಚ್ಚಿ ಬೆಳ್ಳಿಯ ಅಥವಾ ಕಂಚಿನ ತಟ್ಟೆಯಲ್ಲಿ ಅಕ್ಕಿ ಹಾಕಿ ಅದರ ಮೇಲೆ ಸೌತೆಕಾಯಿ ಇಲ್ಲವೆಂದರೆ ತೆಂಗಿನಕಾಯಿಯನ್ನು ನೆಟ್ಟಗೆ ಇಟ್ಟು ಹೆಂಗಸಿನ ಮುಖದ ರೂಪ ಬರುವಂತೆ ಅದಕ್ಕೆ ಕೆಂಪು ರೇಶ್ಮೆಯ ಅರಿವೆಯನ್ನು ಸುತ್ತಿ ತಮ್ಮಲ್ಲಿರುವ ಸಾಂಪ್ರದಾಯಿಕ ಆಭರಣಗಳಿಂದ ಅದನ್ನು ಶೃಂಗರಿಸಲಾಗುತ್ತದೆ. ಅದರ ಪಕ್ಕದಲ್ಲಿ ಒಂದು ಬೆಳ್ಳಿಯ ಅಥವಾ ಕಂಚಿನ ತಟ್ಟ್ಟೆಯಲ್ಲಿ ಸಣ್ಣಕ್ಕಿ ಹಾಕಿ ಮೂರು ಎಲೆ, ಮೂರು ಅಡಿಕೆ ಇಟ್ಟು ಒಂದು ಸಣ್ಣ ದೀಪ ಉರಿಸುತ್ತಾರೆ. ಇಲ್ಲಿ ‘ಕಣಿ’ ಎಂದರೆ ಕಾವೇರಿ ತಾಯಿಯ ಪ್ರತಿರೂಪವೆಂದರ್ಥ. ತುಲಾ ಸಂಕ್ರಮಣ ಕಾಲದಲ್ಲಿ ಕಾವೇರಿ ತಾಯಿ ಬ್ರಹ್ಮ ಕುಂಡಿಕೆಯಲ್ಲಿ ಮಾತ್ರವಲ್ಲ ಪ್ರತಿಯೊಬ್ಬರ ಮನೆಗೂ ಬರುತ್ತಾಳೆ ಎಂದು ಕೊಡವರು ನಂಬುತ್ತಾರೆ. ಅವಳ ಪ್ರತಿರೂಪ ವನ್ನು ಪೂಜಿಸಿ ಅವಳಿಗೆ ಸ್ವಾಗತ ಬಯಸುತ್ತಾರೆ. (ಮುಂದುವರಿಯುವುದು)

?ಕರೋಟಿರ ಶಶಿ ಸುಬ್ರಮಣಿ,

ವೀರಾಜಪೇಟೆ.