ಶ್ರೀಮಂಗಲ, ಫೆ. ೨೦: ಸಾರ್ವಜನಿಕರನ್ನು ಅಲೆದಾಡಿಸದೆ ತಕ್ಷಣ ಕೆಲಸ ಮಾಡಿಕೊಡಬೇಕು. ಭ್ರಷ್ಟಾಚಾರ ಮತ್ತು ದಲ್ಲಾಳಿಗಳ ಮೂಲಕ ಕೆಲಸಕ್ಕೆ ಆಸ್ಪದ ಮಾಡಿಕೊಡಬಾರದೆಂದು ಕಂದಾಯ ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ, ಹಾಗೆಂದು ಭ್ರಷ್ಟಾಚಾರ ಕಂಡುಬAದರೆ ಅಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ಬಗ್ಗೆ ನೇರವಾಗಿ ನನಗೆ ದೂರು ನೀಡಿದರೆ ತಕ್ಷಣ ಶಿಸ್ತು ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೇಳಿದರು. ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ನಡೆದ ಗ್ರಾಮ ವಾಸ್ತವ್ಯದ ಸಾರ್ವಜನಿಕ ಸಭೆಯಲ್ಲಿ ಅವರು ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿದರು. ಜಿಲ್ಲಾ ಹಾಗೂ ತಾಲೂಕು ಕೇಂದ್ರದಲ್ಲಿ ಸಂತೆ ದಿವಸ ಎಲ್ಲಾ ಅಧಿಕಾರಿಗಳು ಕಚೇರಿಯಲ್ಲಿ ಹಾಜರಿದ್ದು ಸಾರ್ವಜನಿಕರಿಗೆ ಲಭ್ಯವಾಗಬೇಕು. ಅನಿವಾರ್ಯ ಸಂದರ್ಭದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಕೇರಳದಲ್ಲಿ ಕೋವಿಡ್ ೧೯ ಹೆಚ್ಚುತ್ತಿರುವ ಬಗ್ಗೆ ಮಾಹಿತಿ ಇದ್ದು, ಕೇರಳದಿಂದ ಕೊಡಗಿಗೆ ಬಂದಿರುವ ಯಾರಿಗೂ ರೋಗ ಪತ್ತೆಯಾಗಿರುವುದಿಲ್ಲ. ಆದರೂ, ಕೊಡಗಿಗೆ ವ್ಯಾಪಿಸದಂತೆ ತಡೆಯಲು ಕೇರಳದಿಂದ ಬರುವವರನ್ನು ಗಡಿ ಭಾಗದಲ್ಲಿ ಪರೀಕ್ಷಿಸಿ ಕಳುಹಿಸುವ ಬಗ್ಗೆ ಹಾಗೂ ಕೇರಳ-ಕೊಡಗು ಗಡಿ ಪ್ರದೇಶದ ಗ್ರಾಮಸ್ಥರನೆಲ್ಲಾ ಮತ್ತೊಮ್ಮೆ ಪೂರ್ಣ ಪ್ರಮಾಣದಲ್ಲಿ ತಪಾಸಣೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ನಮ್ಮ ಮಿತಿಗಿಂತ ಹೆಚ್ಚುವರಿಯಾಗಿ ೬೦೦ ಜನರನ್ನು ಪರೀಕ್ಷೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸರ್ವೆ ಮತ್ತು ಕಂದಾಯ ಇಲಾಖೆಯಲ್ಲಿ ಹಲವು ವರ್ಷದಿಂದ ವಿಲೇವಾರಿಯಾಗದೆ ಉಳಿದು ಕೊಂಡಿರುವ ಸಾರ್ವಜನಿಕರ ಕಡತವನ್ನು ಕೂಡಲೇ ವಿಲೇವಾರಿ ಮಾಡಬೇಕು. ಸರ್ವೆ ಇಲಾಖೆಯಲ್ಲಿ ಹಲವಾರು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಕಡತಗಳ ಸಂಪೂರ್ಣ ವಿವರ ಹಾಗೂ ವಿಳಂಬವಾಗಲು ಸೂಕ್ತ ಕಾರಣವನ್ನು ಖುದ್ದಾಗಿ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿ ತಮಗೆ ವರದಿ ನೀಡುವಂತೆ ವೀರಾಜಪೇಟೆ ಎಡಿಎಲ್‌ಆರ್ ಶ್ರೀನಿವಾಸ್‌ರವರಿಗೆ ಜಿಲ್ಲಾಧಿಕಾರಿ ಯವರು ಸೂಚಿಸಿದರು. ಇದಲ್ಲದೆ ಅನಾವಶ್ಯಕವಾಗಿ ವಿಳಂಬ ಮಾಡಿರುವ ಪ್ರಕರಣ ಕಂಡುಬAದರೆ ಅಂತಹ ಸಿಬ್ಬಂದಿ ಹಾಗೂ ಅಧಿಕಾರಿಗೆ ಶೋಕಸ್ ನೋಟಿಸ್ ಕಳುಹಿಸುವಂತೆ ಸೂಚನೆ ನೀಡಿದರು.

(ಮೊದಲ ಪುಟದಿಂದ) ತಹಶೀಲ್ದಾರ್ ಯೋಗಾನಂದ ಮಾತನಾಡಿ ತಮ್ಮ ಇಲಾಖೆಯ ಯಾವುದೇ ಅಧಿಕಾರಿ ಜನರ ಕೆಲಸ ಮಾಡಿಕೊಡದಿದ್ದರೆ ನೇರವಾಗಿ ತನಗೆ ಪುಕಾರು ನೀಡಿ ಅವರಿಂದ ಕೆಲಸ ಮಾಡಿಸುವುದು ತನ್ನ ಜವಾಬ್ದಾರಿ. ಬಾಕಿ ಇರುವ ಪೌತಿಖಾತೆಯ ಕಡತಗಳ ವಿಲೇವಾರಿಯನ್ನು ಮಾರ್ಚ್ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸುತ್ತೇನೆ ಎಂದರು. ತಾಲೂಕು ಕಚೇರಿಯ ಆವರಣದಲ್ಲಿ ದಲ್ಲಾಳಿಗಳು ಕಂಡುಬAದರೆ ಅಂತವರ ಮೇಲೆ ಎಫ್‌ಐಆರ್ ದಾಖಲಿಸುವಂತೆ ಪೊಲೀಸ್ ಇಲಾಖೆಯವರಿಗೆ ನಿರ್ದೇಶನ ನೀಡಿರುತ್ತೇನೆ ಎಂದರು.

ಶ್ರೀಮಂಗಲ ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಮಚ್ಚಮಾಡ ಕಾರ್ಯಪ್ಪರವರು ಶ್ರೀಮಂಗಲ ಪಟ್ಟಣದಲ್ಲಿರುವ ವಾಜಪೇಯಿ ಕ್ರೀಡಾಂಗಣ ಅಭಿವೃದ್ಧಿ, ಆರೋಗ್ಯ ಕೇಂದ್ರದಲ್ಲಿ ಶವಗಾರ ಹಾಗೂ ಮರಣೋತ್ತರ ಪರೀಕ್ಷಾ ಕೊಠಡಿ ನಿರ್ಮಾಣ, ಪಟ್ಟಣಕ್ಕೆ ಕುಡಿಯುವ ನೀರು ಸೌಲಭ್ಯ ಒದಗಿಸುವುದು, ನಳ್ಳಂದಿ ತೋಡ್ ಸೇತುವೆ, ನಾಲ್ಕೇರಿ ಸೇತುವೆ, ನೆಮ್ಮಲೆ ಸೇತುವೆ ಸೇರಿದಂತೆ ಶ್ರೀಮಂಗಲ ಪಟ್ಟಣದಲ್ಲಿ ಆಗಬೇಕಾಗಿರುವ ಹಲವು ಕಾರ್ಯಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕಟ್ಟಿಮಂದಯ್ಯ ಮಾತನಾಡಿ ಪೌತಿಖಾತೆ ಅರ್ಜಿ ವಿಲೇವಾರಿ ತಕ್ಷಣ ಆಗಬೇಕು, ಅತಿವೃಷ್ಠಿಗೆ ಕುಸಿದಿರುವ ಶ್ರೀಮಂಗಲ ಗಿರಿಜನ ಕಾಲೋನಿಗೆ ತಡೆಗೋಡೆ ನಿರ್ಮಾಣವಾಗಬೇಕು, ಕಂದಾಯ ಹಾಗೂ ಸರ್ವೆ ಇಲಾಖೆಯಲ್ಲಿ ದಲ್ಲಾಳಿ ಹಾವಳಿ ಹಾಗೂ ಭ್ರಷ್ಟಾಚಾರ ಮಿತಿ ಮೀರಿದ್ದು ಇದನ್ನು ಸಂಪೂರ್ಣ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.

ಟಿ.ಶೆಟ್ಟಿಗೇರಿ ಗ್ರಾ.ಪಂ ಸದಸ್ಯ ಮಚ್ಚಮಾಡ ಸುಮಂತ್ ಮಾತನಾಡಿ ೧೯೭೨ ರಲ್ಲಿ ನಿರ್ಮಾಣವಾಗಿರುವ ಶ್ರೀಮಂಗಲ ವಿದ್ಯುತ್ ಸರಬರಾಜು ಕೇಂದ್ರವನ್ನು ೩೩ ಕೆವಿಯಿಂದ ೬೬ಕೆವಿಗೆ ಮೇಲ್ದರ್ಜೆಗೆ ಏರಿಸಬೇಕು ಎಂದು ಮನವಿ ಮಾಡಿದರು. ರೈತ ಸಂಘದ ಮುಖಂಡ ಅಪ್ಪಚಂಗಡ ಮೋಟಯ್ಯ ಮಾತನಾಡಿ ೨೦೨೦ರ ಪಾವತಿಗೆ ಬಾಕಿ ಇರುವ ಅತಿವೃಷ್ಠಿ ಬೆಳೆ ನಷ್ಟ ಪರಿಹಾರ ತಕ್ಷಣ ಪಾವತಿಸುವಂತಾಗಬೇಕೆAದರು.

ಶ್ರೀಮAಗಲ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ ಅವರು ಅರಣ್ಯ ಇಲಾಖೆಯ ಸಮೀಪವಿರುವ ಕಂದಾಯ ಭೂಮಿಯನ್ನು ಸಣ್ಣ ರೈತರು ಸಾಗುವಳಿ ಮಾಡಲು ಅರಣ್ಯ ಇಲಾಖೆಯವರು ಬಿಡುತ್ತಿಲ್ಲ. ಈ ಬಗ್ಗೆ ಕ್ರಮಕೈಗೊಂಡು ಬಡ ರೈತರಿಗೆ ಜಾಗ ಮಂಜೂರು ಮಾಡಬೇಕೆಂದರು.

ರೈತ ಸಂಘದ ಮುಖಂಡ ಅಜ್ಜಮಾಡ ಚಂಗಪ್ಪ ಅವರು ಕೇಂದ್ರ ಸರಕಾರವು ರೈತರೊಬ್ಬರಿಗೆ ತಿಂಗಳಿಗೆ ಕೇವಲ ೫೦ ಚೀಲ ಮಾತ್ರ ರಸ ಗೊಬ್ಬರ ಖರೀದಿಸಲು ಮಿತಿ ಹೇರಿರುವ ಸುತ್ತೋಲೆಯನ್ನು ಹಿಂಪಡೆದು ಒಂದೇ ಬಾರಿಗೆ ಖರೀದಿಸಲು ಅವಕಾಶ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ನೀಡಬೇಕೆಂದರು.

ಪೆಮ್ಮಣಮಾಡ ರಮೇಶ್ ಅವರು ಕೆ.ಬಾಡಗ ಗ್ರಾ.ಪಂ ಕಟ್ಟಡ ನಿರ್ಮಾಣಕ್ಕೆ ೨೦ ಸೆಂಟ್ ಸ್ಥಳ ಗುರುತಿಸಿ ಕೊಡಬೇಕು, ಭತ್ತ ಬೆಳೆದ ರೈತರು ಬೆಂಬಲ ಬೆಲೆ ಯೋಜನೆಯಡಿ ಎಪಿಎಂಸಿಗೆ ಭತ್ತ ಮಾರಾಟ ಮಾಡಿ ಎರಡು ತಿಂಗಳು ಕಳೆದರೂ ಸರಕಾರದಿಂದ ಹಣ ಪಾವತಿಯಾಗಿರುವುದಿಲ್ಲ. ತಕ್ಷಣ ಹಣ ಪಾವತಿಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಟಿ.ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್‌ರವರು ತಮ್ಮ ಸಂಘಕ್ಕೆ ನಿವೇಶನ ಮಂಜೂರಾತಿಗೆ ೭ ವರ್ಷಗಳಿಂದ ಅಲೆದಾಡುತ್ತಿದ್ದರೂ ಮಂಜೂರಾತಿ ನೀಡಿಲ್ಲ. ತಕ್ಷಣ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದರು.

ಚೊಟ್ಟೆಯAಡಮಾಡ ವಿಶ್ವನಾಥ್‌ರವರು ಕೂರ್ಗ್ ಬೈರೇಸ್ ಮಾನದಂಡದಡಿ ಕೋವಿ ವಿನಾಯಿತಿ ಪತ್ರ ನೀಡಲು ವಿಳಂಬ ಮಾಡುತ್ತಿದ್ದು ತಕ್ಷಣ ನೀಡುವಂತಾಗಬೇಕು, ಸ್ವಂತ ಬಳಕೆಗೆ ಮರಳು ತೆಗೆಯಲು ಹಾಗೂ ಮರ ಕಡಿಯಲು ಅನುಮತಿ ನೀಡಬೇಕೆಂದು ಮನವಿ ಮಾಡಿದರು.

ಗುಡಿಯಂಗಡ ನಾಚಪ್ಪರವರು ಕಂದಾಯ ಇಲಾಖೆಯಲ್ಲಿ ೩೫ ವರ್ಷ ಸೇವೆ ಸಲ್ಲಿಸಿ ನಿವೃತ್ತವಾಗಿರುವ ತನ್ನ ಪೋಡಿ ಅರ್ಜಿಯನ್ನೇ ೨೦೧೨ ರಿಂದ ವಿಲೇವಾರಿ ಮಾಡದೆ ಅಲೆದಾಡಿಸುತ್ತಿದ್ದಾರೆ. ಹೀಗಿರುವಾಗ ಕಂದಾಯ ಇಲಾಖೆಯಲ್ಲಿ ಜನ ಸಾಮಾನ್ಯರ ಕೆಲಸ ಕಾರ್ಯ ಹೇಗೆ ಆಗಲು ಸಾಧ್ಯ ಎಂದು ಅಳಲು ತೋಡಿಕೊಂಡರು. ಗುಡಿಯಂಗಡ ಪೂವಪ್ಪರವರು ಕುಟ್ಟ ಕಾನೂರು ರಸ್ತೆಯ ದುಸ್ಥಿತಿ ಬಗ್ಗೆ ಗಮನ ಸೆಳೆದರು.

ಶ್ರೀಮಂಗಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಉಪಾಧ್ಯಕ್ಷೆ ಬೊಜ್ಜಂಗಡ ಶೈಲಾ ಸುಬ್ರಮಣಿ ತಮ್ಮ ಸಂಘಕ್ಕೆ ಕಟ್ಟಡ ನಿರ್ಮಾಣಕ್ಕೆ ನಿವೇಶನ ಒದಗಿಸಿಕೊಡಬೇಕು ಹಾಗೂ ಮಹಿಳಾ ಸಮಾಜ ಕಟ್ಟಡ ಅಭಿವೃದ್ಧಿಪಡಿಸಿಕೊಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ವೇದಿಕೆಯಲ್ಲಿ ಉಪ ವಿಭಾಗಾಧಿಕಾರಿ ಈಶ್ವರ್, ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಉಪಸ್ಥಿತರಿದ್ದರು. ವೀರಾಜಪೇಟೆ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ತಾಲೂಕು ನೋಡಲ್ ಅಧಿಕಾರಿ ಡಾ.ಯತಿರಾಜ್, ಜಿ.ಪಂ ಎಇಇ ಮಹದೇವ್, ಆರ್‌ಟಿಓ ಅಧಿಕಾರಿ ವಿನಯ್, ಗ್ರಾ.ಪಂ ಅಧ್ಯಕ್ಷ ಅಜ್ಜಮಾಡ ಜಯ, ಲೋಕೋಪಯೋಗಿ ಎಇ ಸುರೇಶ್‌ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಕಲ್ಯಾಣಾಧಿಕಾರಿ ಕೆ.ಬಿ.ನಾಗರಾಜಪ್ಪ, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಎಸ್.ಟಿ. ಮಲ್ಲಿಕಾರ್ಜುನ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬನ, ಶ್ರೀಮಂಗಲ ಕಂದಾಯ ಪರಿವೀಕ್ಷಕ ಸುದೀಂದ್ರ ಕುಮಾರ್, ಹುದಿಕೇರಿ ಕಂದಾಯ ಪರಿವೀಕ್ಷಕ ನಿಶಾನ್, ಚೆಸ್ಕಂ ಎಇಇ ನೀಲ್‌ಶೆಟ್ಟಿ ಮತ್ತಿತರರ ಅಧಿಕಾರಿಗಳು ಹಾಜರಿದ್ದರು.