ಸೋಮವಾರಪೇಟೆ,ಫೆ.೨೦: ಹಿಂದೆAದೂ ಕಾಣದಂತಹ ಆಲಿಕಲ್ಲು ಮಳೆಯಿಂದಾಗಿ ಉತ್ತರ ಕೊಡಗಿನ ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಸಾವಿರಾರು ಏಕರೆ ಹಸಿಮೆಣಸು, ಬಾಳೆ, ಅಡಿಕೆ, ತರಕಾರಿ, ಕಾಫಿ, ಶುಂಠಿ, ಸುವರ್ಣಗೆಡ್ಡೆ, ಜೋಳ ಮತ್ತು ಕಾಳುಮೆಣಸು ಕೃಷಿಗೆ ಅಪಾರ ನಷ್ಟವಾಗಿದೆ.
ಶನಿವಾರಸಂತೆ ಸಮೀಪದ ನಿಡ್ತ, ಮೆಣಸ, ಅಂಕನಹಳ್ಳಿ, ಗಂಗಾವರ, ಕೈಸರವಳ್ಳಿ, ನಾಗವಾರ ಸುತ್ತಮುತ್ತಲ ಏಳೆಂಟು ಕಿ.ಮೀ. ವ್ಯಾಪ್ತಿಯ ೧೦ ಗ್ರಾಮಗಳಲ್ಲಿ ನಿನ್ನೆ ಮಧ್ಯಾಹ್ನದ ಸಮಯದಲ್ಲಿ ಆಲಿಕಲ್ಲು ಮಳೆಯಾಗಿದ್ದು, ಉತ್ತರ ಭಾರತದ ಹಿಮಚ್ಛಾದ್ರಿತ ಪ್ರದೇಶದಂತಹ ವಾತಾವರಣ ನಿರ್ಮಾಣವಾಗಿ ಬೆಳೆಗಾರರು ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಈ ವ್ಯಾಪ್ತಿಯಲ್ಲಿ ಕಾಳುಮೆಣಸು ಮತ್ತು ಬಾಳೆ ಕೃಷಿಗೆ ಆಲಿಕಲ್ಲು ಮಳೆಅವಾಂತರ ಸೃಷ್ಟಿಸಿದೆ. ಗಿಡಗಳಲ್ಲಿದ್ದ ಹಸಿ ಮೆಣಸು ಕಾಯಿ ಹಾಗೂ ಎಲೆಗಳು ಉದುರಿದ್ದು, ಬೋಳಾದ ಗಿಡಗಳು ಗದ್ದೆಗಳಲ್ಲಿವೆ. ಆಲೀಕಲ್ಲು ಬಿದ್ದ ರಭಸಕ್ಕೆ ಬಾಳೆ ಗೊನೆಗಳು ನಷ್ಟಗೊಂಡಿವೆ.
ಕೊಯ್ಲು ಮಾಡದೇ ಉಳಿದಿದ್ದ ಅರೇಬಿಕಾ ಕಾಫಿ ಗಿಡಗಳಿಂದ ಸಂಪೂರ್ಣವಾಗಿ ಉದುರಿದ್ದು, ನೆಲದಲ್ಲಿ ಹರಡಿಕೊಂಡಿವೆ. ಅಂತೆಯೇ ಕೊಯ್ಲು ಮಾಡಿ ಒಣಗಿಸಲು ಕಣದಲ್ಲಿ ಹಾಕಿದ್ದ ಕಾಫಿ ಮಳೆ ನೀರಿನೊಂದಿಗೆ ಕೊಚ್ಚಿಹೋಗಿ ತೊರೆಗಳ ಪಾಲಾಗಿವೆ.
ಇದರೊಂದಿಗೆ ಬಳ್ಳಿಗಳಲ್ಲಿದ್ದ ಕರಿಮೆಣಸು ಫಸಲು ನೆಲಕ್ಕಚ್ಚಿದ್ದು, ಬೆಳೆಗಾರರಿಗೆ ಅಕಾಲಿಕ ಮಳೆ ಹೆಚ್ಚಿನ ಸಂಕಷ್ಟ ತಂದಿಟ್ಟಿದೆ. ಕೊಯ್ಲಿಗೆ ಇನ್ನೇನು ಕೆಲವೇ ಸಮಯ ಇರುವಂತೆ ಆಲಿಕಲ್ಲು ಮಳೆಯಾಗಿರುವದರಿಂದ ಈ ಭಾಗದ ಕೃಷಿಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಸರ್ಕಾರ ಕೃಷಿಕರ ನೆರವಿಗೆ ಧಾವಿಸಬೇಕೆಂದು ಈ ಭಾಗದ ಕೃಷಿಕರು ಒತ್ತಾಯಿಸಿದ್ದಾರೆ.
ಮಳೆಯೊಂದಿಗೆ ಭಾರೀ ಪ್ರಮಾಣದ ಆಲೀಕಲ್ಲು ಸುರಿದಿದ್ದರಿಂದ ಕಾಫಿ ಗಿಡಗಳಲ್ಲಿ ಎಲೆಗಳು ಉದುರಿವೆ. ಇದರಿಂದಾಗಿ ಮುಂದಿನ ವರ್ಷದಲ್ಲಿ ಕಾಫಿ ಫಸಲು ಇಳಿಮುಖವಾಗುವ ಸಂಭವವಿದ್ದು, ಈ ಭಾಗದ ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ.
ನಿನ್ನೆ ಆಲೀಕಲ್ಲು ಮಳೆಯಿಂದಾಗಿ ಅಪಾರ ಪ್ರಮಾಣದ ಕೃಷಿ ಹಾನಿಗೀಡಾದ ಪ್ರದೇಶಗಳಾದ ನಿಡ್ತ, ಅಮ್ಮಳ್ಳಿ, ಮೈಲಾಪುರ, ಬಡುಬನಹಳ್ಳಿ, ಮನೆಹಳ್ಳಿ, ನಾಗವಾರ, ಬೆಟ್ಟದಳ್ಳಿ, ಮೆಣಸ, ಸೀಗೆಮರೂರು, ಅಂಕನಹಳ್ಳಿ, ದೊಡ್ಡಳ್ಳಿ, ಮುಳ್ಳೂರು, ಕೈಸರವಳ್ಳಿ, ಸಿಡಿಗಳಲೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸಾವಿರಾರು ಏಕರೆ ವಿವಿಧ ಕೃಷಿ ಫಸಲು ನಷ್ಟವಾಗಿದೆ.
ಪ್ರಾಥಮಿಕ ಅಂದಾಜಿನ ಪ್ರಕಾರ ೧೪೫೦ ಎಕರೆಗೂ ಅಧಿಕ ಕಾಫಿ, ೪೦೦ ಎಕರೆಯಷ್ಟು ಕರಿಮೆಣಸು, ೧೩೦ ಏಕರೆಯಷ್ಟು ಹಸಿ ಮೆಣಸಿನಕಾಯಿ, ೨೦೦ ಎಕರೆಯಷ್ಟು ಅಡಿಕೆ, ೧೧೫ ಏಕರೆ ಗೆಣಸು, ೧೫೦ ಎಕರೆ ಶುಂಠಿ, ೧೦೦ ಏಕರೆ ಬಾಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಮೋಡ ಮುಸುಕಿದ ವಾತಾವರಣ ದಿಂದಾಗಿ ನಿನ್ನೆ ಸುರಿದಿದ್ದ ಆಲಿಕಲ್ಲು ಇಂದು ಬೆಳಗ್ಗಿನವರೆಗೂ ಕರಗದೇ ಹಾಗೆಯೇ ಉಳಿದಿದ್ದ ದೃಶ್ಯ ಹಾಗೂ ಬೋಳು ಬೋಳಾದ ಗಿಡಗಳು ಎಲ್ಲೆಡೆ ಕಂಡುಬರುತ್ತಿವೆ.
ಮಳೆಯಿAದಾಗಿ ಕೃಷಿ ಹಾನಿಗೀಡಾದ ಪ್ರದೇಶಗಳಿಗೆ ಇಂದು ಕಂದಾಯ ಇಲಾಖೆಯ ಬಿ.ಆರ್. ಮಂಜುನಾಥ್, ಕಾಫಿ ಮಂಡಳಿಯ ವಿಶ್ವನಾಥ್, ಕೃಷಿ ಇಲಾಖೆಯ ಮನಸ್ವಿ, ತೋಟಗಾರಿಕಾ ಇಲಾಖೆಯ ಸಿಂಧು, ಗ್ರಾಮ ಲೆಕ್ಕಾಧಿಕಾರಿ ವಿಶ್ವವಾಣಿ ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಕೃಷಿಕರು ಬೆಳೆಹಾನಿ ಪರಿಹಾರಕ್ಕೆ ಮನವಿ ಮಾಡಿದ್ದಾರೆ.