ಗೋಣಿಕೊಪ್ಪ ವರದಿ, ಫೆ. ೧೯: ಕೃಷಿ ಕಾಯ್ದೆಯಲ್ಲಿನ ಧನಾತ್ಮಕ ವಿಚಾರಗಳನ್ನು ರೈತರು ಅರಿತು ಕೊಂಡು, ದರ ಪೈಪೋಟಿಯಿಂದ ರೈತರಿಗೆ ಅನುಕೂಲ ಕಲ್ಪಿಸುವ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಬೇಕಿದೆ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಯಿತು.

ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಪುತ್ತರಿ ರೈತ ಉತ್ಪಾದಕರ ಸಂಸ್ಥೆ ನಿಯಮಿತ ವತಿಯಿಂದ ಆಯೋಜಿಸಿದ್ದ ರೈತ ರೊಂದಿಗೆ ಕೃಷಿ ಕಾಯ್ದೆ ಸಂವಾದದಲ್ಲಿ ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಫ್ರೊ. ಡಾ. ವೆಂಕಟ್ ರೆಡ್ಡಿ ಹಾಗೂ ಹೈದರಾಬಾದ್ ಇಂಟರ್ ನ್ಯಾಷನಲ್ ಕ್ರಾಪ್ಸ್ ರಿಸರ್ಚ್ ಇನ್ಸಿಟಿಟ್ಯೂಟ್‌ನ ನಿವೃತ್ತ ವಿಜ್ಞಾನಿ ಡಾ. ಅರುಣ್ ಬಲ್ಲಮಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಕಾಯ್ದೆಯಲ್ಲಿರುವ ಇ. ಮಾರುಕಟ್ಟೆ ವ್ಯವಸ್ಥೆಯ ಪ್ರಯೋಜನ, ಎಪಿಎಂಸಿ ಇಲ್ಲದೆ ರೈತರಿಗೆ ಆಗುವ ಗಂಡಾAತರವನ್ನು ತಿಳಿಸಿಕೊಟ್ಟರು.

ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಪ್ರೊ. ಡಾ. ವೆಂಕಟ್ ರೆಡ್ಡಿ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ಬೆಳೆಗಳ ಖರೀದಿ, ಮಾರಾಟ ಮುಂದುವರಿದರೆ ಮಾತ್ರ ಬೆಲೆಯಲ್ಲಿ ಪೈಪೋಟಿ ಕಾಣಬಹುದಾಗಿದೆ. ಎಪಿಎಂಸಿ ಪ್ರಾಂಗಣದ ಒಳಗೂ ಮತ್ತು ಹೊರಗೂ ವ್ಯಾಪಾರ ಕ್ಷೇತ್ರ ಅಭಿವೃದ್ಧಿ ಯಿಂದ ದರ ಸಮರವೇರ್ಪಟ್ಟು, ರೈತನಿಗೆ ಅನುಕೂಲವಾಗಲಿದೆ. ಎಪಿಎಂಸಿ ಉಳಿಯದಿದ್ದರೆ ಕಾರ್ಪೊರೇಟ್ ಕಂಪೆನಿಗಳು ಹೇಳುವ ದರಕ್ಕೆ ಮಾತ್ರ ರೈತರು ಬೆಲೆಯನ್ನು ಮಾರಾಟ ಮಾಡುವ ಅನಿವಾರ್ಯತೆ ಎದುರಾಗಬಹುದು. ಆದ್ದರಿಂದಾಗಿ ಎಪಿಎಂಸಿ ಪ್ರಾಂಗಣದಲ್ಲಿ ಖರೀದಿ ಮತ್ತು ಮಾರಾಟಕ್ಕೂ ಅವಕಾಶ ನೀಡಬೇಕಿದೆ. ಎಪಿಎಂಸಿಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ರೈತರಿಗೆ ಇದೆ ಎಂದರು. ಎಪಿಎಂಸಿಯಲ್ಲಿ ಮಾರುಕಟ್ಟೆ ದರ ಮತ್ತು ಲೈಸೆನ್ಸ್ ವಿತರಣೆಯನ್ನು ತಡೆಹಿಡಿದು, ಚಾಲ್ತಿಗೆ ತರಬೇಕಿದೆ. ಈ ಬಗ್ಗೆ ಎಪಿಎಂಸಿ ಕಾಯ್ದೆಯಲ್ಲಿರುವ ಲೋಪವನ್ನು ರೈತರು ಹೋರಾಟ ನಡೆಸಿ ತಿದ್ದುಪಡಿಗೆ ಅವಕಾಶ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು. ತರಕಾರಿ, ಹಣ್ಣು ಸಂಸ್ಕರಣೆಯಲ್ಲಿ ಭಾರತೀಯರು ಎಡವಿದ್ದೇವೆ. ಈಗಿನ ಮಾರುಕಟ್ಟೆ ಪದ್ಧತಿಯಿಂದ ಹಂತ, ಹಂತವಾಗಿ ಸಾಗಣೆ ವೆಚ್ಚ ದುಬಾರಿ. ಒಂದು ರಾಜ್ಯದಿಂದ ಮತ್ತೊಂದು ಕಡೆಗೆ ಸಾಗಿಸುವಾಗ ವ್ಯಾಪಾರಿಗಳು ಆಹಾರ ಪದಾರ್ಥವನ್ನು ಇಳಿಸುವುದು, ಮಾರಾಟ ಮಾಡುವುದು, ಖರೀದಿಸಿದವರು ಮತ್ತೆ ಬೇರೆಡೆಗೆ ಸಾಗಣೆ ಮಾಡುತ್ತಿರುವುದರಿಂದ ಸಾಗಿಸುವ ಹಂತದಲ್ಲಿ ಸಾಕಷ್ಟು ಹಣ್ಣು, ತರಕಾರಿ ಕೊಳೆತು ಹೋಗುತ್ತಿವೆ. ಇದರಿಂದ ಆಹಾರ ನಷ್ಟವಾಗುತ್ತಿದೆ. ಆದರೆ, ಆನ್‌ಲೈನ್ ಮಾರುಕಟ್ಟೆ ಅವಕಾಶದಿಂದ ನೇರವಾಗಿ ರೈತರಿಂದ ವ್ಯಾಪಾರಿಗಳು ಖರೀದಿ ಮಾಡಲು ಅವಕಾಶವಿದೆ. ಆಹಾರ ನಷ್ಟಗೊಳ್ಳುವ ಆತಂಕವಿಲ್ಲ. ರೈಲ್ವೆ ಮೂಲಕ ಆಹಾರ ಪದಾರ್ಥ ಸಾಗಣೆ ಚಿಂತನೆ ಹೆಚ್ಚು ಲಾಭವಾಗಿದೆ. ಶೇ. ೭೦ ರಷ್ಟು ಸಾಗಣೆ ವೆಚ್ಚ ತಗ್ಗಲಿದೆ ಎಂದು ಸ್ಪಷ್ಠಪಡಿಸಿದರು.

ಮಾರುಕಟ್ಟೆ ಪದ್ಧತಿಯಲ್ಲಿ ಪ್ರತಿಯೊಂದು ಮಾರಾಟವಾಗುವ ವಸ್ತುವಿನ ಬೆಲೆ ದಾಖಲೆಯಾಗಬೇಕಿದೆ. ಇದರಿಂದ ದರ ಪೈಪೋಟಿಗೂ ಸಹಕಾರಿಯಾಗುತ್ತದೆ. ಆದರೆ, ಆಫ್‌ಲೈನ್ ಮಾರುಕಟ್ಟೆ ನಿಯಮದಿಂದ ರೈತ ಹಾಗೂ ವ್ಯಾಪಾರಿ ಪರಸ್ಪರ ಮಾತಾಡಿಕೊಂಡು ಕೃಷಿ ಕ್ಷೇತ್ರದಿಂದ ವ್ಯಾಪಾರ ನಡೆಸಲಾಗುತ್ತದೆ. ಇದರಿಂದ ವಸ್ತುವಿನ ನಿಖರ ಬೆಲೆ ಎಲ್ಲಿಯೂ ದಾಖಲಾಗುವುದಿಲ್ಲ. ಇದು ಬೆಲೆ ಪೈಪೋಟಿಗೆ ತೊಂದರೆಯಾಗುವುದ ರಿಂದ ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ ಹೆಚ್ಚು ಸಹಕಾರಿ. ದರ ದಾಖಲೀ ಕರಣಕ್ಕೂ ಅನುಕೂಲ ಎಂದು ತಿಳಿಸಿಕೊಟ್ಟರು. ವ್ಯಾಪಾರಿ ಬೇಕಾದಷ್ಟು ಪದಾರ್ಥವನ್ನು ಶೇಖರಿಸಲು ನೂತನ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಇದರಿಂದ ತರಕಾರಿ, ಹಣ್ಣು ಕೊಯ್ಲು ಸಂದರ್ಭ ವ್ಯಾಪಾರಿ ಎಷ್ಟು ಬೇಕಾದರೂ ಪದಾರ್ಥ ಖರೀದಿಸಿ ಶೇಖರಣೆ ಮಾಡಬಹುದಾಗಿದ್ದು, ದಾಸ್ತಾನು ಹೆಚ್ಚು ಎಂದು ಖರೀದಿಸುವವರು ಇಲ್ಲ ಎಂದು ಕೊರಗಿ ರೈತ ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗುವುದನ್ನು ಕೂಡ ತಡೆಯಬಹುದಾಗಿದೆ. ಯಾವುದೇ ವಸ್ತುವಿಗೆ ದರ ಹೆಚ್ಚಾಗುತ್ತಾ ಹೋದಾಗ ವ್ಯಾಪಾರ ಖರೀದಿ, ಶೇಖರಣೆ ಮಿತಿಗೂ ಕೂಡ ಕಡಿವಾಣ ಹಾಕಲು ಅವಕಾಶವಿದೆ. ಇದರಿಂದ ಅನಾವಶ್ಯಕವಾಗಿ ದರ ಹೆಚ್ಚಳವನ್ನು ಕೂಡ ತಡೆಯ ಬಹುದಾಗಿದೆ. ದಾಸ್ತಾನು ಹೆಚ್ಚು ಎಂದು ಇಲಾಖೆಗಳಿಗೆ ನೀಡುವ ಲಂಚ ಅವಕಾಶಕ್ಕೂ ಕಡಿವಾಣ ಹಾಕಿದಂತಾಗಿದೆ ಎಂದರು.

ಹೈದರಾಬಾದ್ ಇಂಟರ್ ನ್ಯಾಷನಲ್ ಕ್ರಾಪ್ಸ್ ರಿಸರ್ಚ್ ಇನ್ಸಿಟಿಟ್ಯೂಟ್‌ನ ನಿವೃತ್ತ ವಿಜ್ಞಾನಿ ಡಾ. ಅರುಣ್ ಬಲ್ಲಮಟಿ ಮಾತನಾಡಿ, ಆನ್‌ಲೈನ್ ಮೂಲಕ ಬಿತ್ತನೆ ಬೀಜ ಖರೀದಿಸುವಾಗ ಶೇ. ೬೬ ರಷ್ಟು ದರವನ್ನು ತಕ್ಷಣ ಪಾವತಿಸಬೇಕಿದೆ. ಉಳಿದ ಹಣವನ್ನು ಒಂದು ತಿಂಗಳ ಒಳಗೆ ಪಾವತಿಸಬೇಕಿದೆ. ಇ. ಮಾರುಕಟ್ಟೆಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಸಾಗಣೆ ಸಂದರ್ಭ ಹಲವು ಇಲಾಖೆಗಳಿಗೆ ನೀಡಬೇಕಿದ್ದ ಸಾಕಷ್ಟು ಲಂಚ ನಿಲ್ಲಲಿದೆ. ಇದು ನೇರವಾಗಿ ರೈತನ ಕೈಸೇರು ವಂತಾಗಲಿದೆ ಎಂದು ಪವರ್ ಪಾಯಿಂಟ್ ಮೂಲಕ ಹೆಚ್ಚಿನ ಮಾಹಿತಿ ನೀಡಲಾಯಿತು. ಈ ಸಂದರ್ಭ ಪುತ್ತರಿ ರೈತ ಉತ್ಪಾದಕರ ಸಂಸ್ಥೆ ನಿಯಮಿತ ಅಧ್ಯಕ್ಷ ಕಳ್ಳಂಗಡ ಸುಬ್ಬಯ್ಯ, ಉಪಾಧ್ಯಕ್ಷ ಮುಕ್ಕಾಟೀರ ಕಾರ್ಯಪ್ಪ, ಸಿಇಒ ಹೊಟ್ಟೇಂಗಡ ರಾಣಾ ಪೊನ್ನಣ್ಣ, ಕೆವಿಕೆ ಮುಖ್ಯಸ್ಥ ಡಾ. ಸಾಜು ಜಾರ್ಜ್, ವಿಷಯ ತಜ್ಞ ಡಾ. ಪ್ರಭಾಕರ್ ಉಪಸ್ಥಿತರಿದ್ದರು.