ಮಡಿಕೇರಿ, ಫೆ. ೧೯: ಯುವಕರ ತಂಡವೇ ಸೇರಿಕೊಂಡು ನಿರ್ಮಾಣ ಮಾಡಿರುವ ಮಡಿಕೆಬೀಡು ಎಂಬ ಕಿರುಚಿತ್ರ ಶೀಘ್ರದಲ್ಲಿ ಬಿಡುಗಡೆ ಯಾಗಲಿದೆ ಎಂದು ಚಿತ್ರದ ನಿರ್ದೇಶಕ ವಿನಯ್‌ಕುಮಾರ್ ಎಂ.ಎಸ್. ಮಾಹಿತಿ ನೀಡಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಚಿತ್ರದಲ್ಲಿ ಸಾಮಾಜಿಕ ಸಂದೇಶ ಸಾರುವ ಗುಬ್ಬಿ ಕ್ರಿಯೇಷನ್ಸ್ ತಂಡ ಈ ಬಾರಿ ಮಡಿಕೆಬೀಡು ಕಿರುಚಿತ್ರದಲ್ಲಿ ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ ಈ ವಿಷಯ ವನ್ನು ಮುಖ್ಯ ವಸ್ತುವನ್ನಾಗಿರಿಸಿ ಸಿನಿಮಾ ಮಾಡಲಾಗಿದೆ.

ಕಿರುಚಿತ್ರದ ಮುಖ್ಯ ಪಾತ್ರದಲ್ಲಿ ಕೊಡಗಿನ ರಂಗಭೂಮಿ ಕಲಾವಿದ ಮಾದೇಟಿರ ಬೆಳ್ಯಪ್ಪ, ಚಿತ್ರ ಸುಜನ್ ನಟಿಸಿದ್ದಾರೆ. ಮತ್ತಷ್ಟು ಕಲಾವಿದರು ನಟಿಸಿದ್ದು ತಾ.೧೬ ರಂದು ಟ್ರೇಲರ್ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಿರುಚಿತ್ರ ಸ್ಪರ್ಧೆ

ಗುಬ್ಬಿ ಕ್ರಿಯೇಷನ್ಸ್ನ ವತಿಯಿಂದ ಕಿರುಚಿತ್ರ ಸ್ಪರ್ಧೆ ಏರ್ಪಡಿಸಲಾಗಿದೆ. ೫ ಜನರ ಒಂದು ತಂಡ ಕಿರುಚಿತ್ರ ರಚಿಸಬಹುದು. ಮೇಕ್ ಇನ್ ಇಂಡಿಯಾ ವಿಷಯದ ಕುರಿತು ಕಿರುಚಿತ್ರ ಮಾಡಬೇಕು. ಕಿರುಚಿತ್ರ ೧೦ ನಿಮಿಷದ ಒಳಗಿರಬೇಕು. ಹೆಸರು ನೋಂದಾಯಿಸಲು ಕೊನೆ ದಿನ ತಾ. ೨೫ ಆಗಿದ್ದು ಹೆಸರು ನೋಂದಾಯಿಸಲು ೯೯೭೨೬೪೩೦೫೯ ಈ ನಂಬರ್‌ಗೆ ವಾಟ್ಸಾಪ್ ಮಾಡಿ ಎಂದರು.

ವಿಜೇತ ಕಿರುಚಿತ್ರಕ್ಕೆ ಪ್ರಥಮ ಬಹುಮಾನ ರೂ. ೫ ಸಾವಿರ ನಗದು, ದ್ವಿತೀಯ ಬಹುಮಾನ ರೂ. ೨೫೦೦ ನಗದು, ತೃತೀಯ ಬಹುಮಾನ ರೂ. ೧೫೦೦ ನಗದು ಪ್ರಶಸ್ತಿ ನೀಡಲಾಗುವುದು ಎಂದರು.

ಕಲಾವಿದರಾದ ಮಾದೇಟಿರ ಬೆಳ್ಯಪ್ಪ, ಚಿತ್ರಾ ಸುಜನ್, ಛಾಯಾಗ್ರಾಹಕ ಕೌಶಿಕ್, ಸಂಗೀತ ನಿರ್ದೇಶಕ ಪಾಪ್ ಜೆ.ಪ್ರಜೀತ್ ಇದ್ದರು.