ಮಡಿಕೇರಿ, ಫೆ. ೧೮: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಹಿಂದ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಗಣತಿ ಕಾರ್ಯ ನಡೆಸಿ ತಯಾರು ಮಾಡಿರುವ ರಾಜ್ಯದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಸರಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಸ್ವೀಕರಿಸಿ ಅದನ್ನು ಬಿಡುಗಡೆಗೊಳಿಸಿ ಅನುಷ್ಠಾನ ಗೊಳಿಸಬೇಕು.ದೇಶದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಪೆಟ್ರೋಲ್ ದರ ಶೇ. ೨೩ ರಷ್ಟು ಮತ್ತು ಡೀಸೆಲ್ ದರ ಶೇ. ೨೫ ರಷ್ಟು ಏರಿಕೆಯಾಗಿದೆ. ಇದರಿಂದ ಅಗತ್ಯ ಸಾಮಗ್ರಿಗಳ ಬೆಲೆ ಗಗನಕ್ಕೆ ಏರುತ್ತಿದೆ. ಬಾಡಿಗೆ ವಾಹನಗಳ ದರ ಇಮ್ಮಡಿಗೊಳ್ಳುತ್ತಿದೆ. ಉದ್ಯಮಗಳು ನಷ್ಟಕ್ಕೆ ಒಳಗಾಗುತ್ತಿದೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕೂಡಲೇ ಇಳಿಸಬೇಕು.ಕೇಂದ್ರ ಸರಕಾರ ರೈತ ವಿರೋಧಿ ಮೂರು ಮಸೂದೆಗಳನ್ನು ಕೈ ಬಿಡಬೇಕು. ಕಳೆದ ಎರಡೂವರೆ ತಿಂಗಳಿನಿAದ ಈ ಕಾಯ್ದೆಯನ್ನು ವಿರೋಧಿಸಿ ಸಾವಿರಾರು ರೈತರು, ಮಹಿಳೆಯರು ಮತ್ತು ಮಕ್ಕಳು ದೆಹಲಿಯ ಬಳಿ ನಿರಂತರ ಧರಣಿ ನಡೆಸುತ್ತಿದ್ದಾರೆ. ರೈತರು ದೇಶದ ಜನರ ಹಸಿವನ್ನು ನೀಗಿಸುವ ಅನ್ನದಾತರು. ಅವರ ಬಗ್ಗೆ ಕಾಳಜಿಯಿಟ್ಟು ಕೇಂದ್ರ ಸರಕಾರ ಮೂರು ಕಾಯ್ದೆಗಳನ್ನು ಹಿಂಪಡೆಯಬೇಕು.(ಮೊದಲ ಪುಟದಿಂದ) ಕೊಡಗಿನಲ್ಲಿ ೨೦೧೮-೧೯, ೨೦೧೯-೨೦ನೇ ಸಾಲಿನ ಮಳೆಯ ಅಬ್ಬರದಿಂದ ಬೆಟ್ಟಗುಡ್ಡಗಳು ಕುಸಿದು ಜಲಪ್ರಳಯ ಉಂಟಾಗಿ ಜಿಲ್ಲೆಯ ಕಾಫಿ ತೋಟಗಳು, ಭತ್ತದ ಗದ್ದೆಗಳೂ ಮಣ್ಣು ಪಾಲಾದವು. ಸಂಕಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಧನ ಕೆಲವರಿಗೆ ಸಿಕ್ಕಿದೆ. ಕೆಲವರಿಗೆ ಇನ್ನೂ ಸಿಗಲಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳು ವಿಶೇಷ ಗಮನ ಹರಿಸಬೇಕು. ೨೦೨೦-೨೧ನೇ ಸಾಲಿನ ಜನವರಿ ತಿಂಗಳಲ್ಲಿ ಸುರಿದ ಮಳೆ, ಗಾಳಿಗೆ ಬೆಳೆದು ನಿಂತಿದ್ದ ಕಾಫಿ ಹಣ್ಣು ಹಾಗೂ ಭತ್ತದ ಕೃಷಿ ಉತ್ಪನ್ನ ಮಣ್ಣು ಪಾಲಾದವು. ಇದರಿಂದ ರೈತರು ಆರ್ಥಿಕವಾಗಿ ತೀರಾ ನಷ್ಟಕ್ಕೆಒಳಗಾಗಿದ್ದಾರೆ. ರಾಜ್ಯ ಸರಕಾರ ತನ್ನ ಮುಂಗಡ ಪತ್ರದಲ್ಲಿ ಈ ಬೆಳೆಗಳ ನಷ್ಟಕ್ಕೆ ಸೂಕ್ತ ಪರಿಹಾರ ಧನ ಘೋಷಣೆ ಮಾಡಬೇಕು. ೨೦೧೮, ೨೦೧೯, ೨೦೨೦ನೇ ಸಾಲಿನ ಮಳೆಯಿಂದಾಗಿ ಬೆಟ್ಟ ಕುಸಿದು, ಹೊಳೆ ನೀರು ಹರಿದು ಸಾವಿರಾರು ಮನೆಗಳು ಕುಸಿದು ಜನತೆ ನಷ್ಟಕ್ಕೆ ಒಳಗಾಗಿದ್ದಾರೆ. ನೆಲ್ಲಿಹುದಿಕೇರಿ, ಕರಡಿಗೋಡು, ಗುಹ್ಯ, ಕೊಂಡAಗೇರಿ ಹೊಳೆ ಬದಿಯ ನಿವಾಸಿಗಳಿಗೆ ಮನೆ ತೆರವುಗೊಳಿಸಲು ತಿಳಿಸಿ ಅವರೆಲ್ಲರೂ ಹೊಳೆ ಬದಿಯಿಂದ ಹೊರಬಂದು ಇಂದು ನಿರಾಶ್ರಿತರಾಗಿ ಬದುಕು ಸಾಗಿಸುತ್ತಿದ್ದಾರೆ. ಅವರೆಲ್ಲರಿಗೂ ಸರಕಾರ ನಿವೇಶನ ದೊರಕಿಸಿ ಮನೆ ನಿರ್ಮಿಸಿಕೊಡುವುದಾಗಿ ಹೇಳಿ ತಿಂಗಳು ೯ ಕಳೆದರೂ ಅನೇಕರಿಗೆ ವಸತಿ ಸೌಲಭ್ಯ ದೊರಕಲಿಲ್ಲ. ಸರಕಾರ ಗುರುತು ಮಾಡಿರುವ ಫಲಾನುಭವಿಗಳಿಗೆ ಆದಷ್ಟು ಬೇಗ ಮನೆ ನಿರ್ಮಿಸಿಕೊಡಬೇಕು ಎಂಬ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ರೂಪಾ ಅವರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಒಕ್ಕೂಟದ ಸ್ಥಾಪಕಾಧ್ಯಕ್ಷ ಟಿ.ಪಿ. ರಮೇಶ್, ಅಧ್ಯಕ್ಷ ಟಿ.ಎಂ. ಮುದ್ದಯ್ಯ, ಕಾರ್ಯಾಧ್ಯಕ್ಷ ಬೇಬಿ ಮ್ಯಾಥ್ಯು, ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ವಿವಿಧ ಸಂಘಟನೆಗಳ ಪ್ರಮುಖರಾದ ಕುಡಿಯರ ಮುತ್ತಪ್ಪ, ದಿವಾಕರ್, ಪೀಟರ್, ಕೆ.ಎಂ. ಗಣೇಶ್ ಮತ್ತಿತರರು ಪಾಲ್ಗೊಂಡಿದ್ದರು.