ಕುಶಾಲನಗರ, ಫೆ. ೧೮: ಶಾಲೆಯೊಂದರಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಪ್ರಶ್ನೆ ಮಾಡಿದ ಪೋಷಕರ ಮೇಲಿನ ದ್ವೇಷಕ್ಕೆ ವಿದ್ಯಾರ್ಥಿಯೊಬ್ಬನಿಗೆ ಶಾಲಾ ಪ್ರವೇಶ ಕಲ್ಪಿಸಲು ನಿರಾಕರಿಸಿರುವುದನ್ನು ದಲಿತ ಪರ ಸಂಘಟನೆಗಳ ಹೋರಾಟ ಸಮಿತಿ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಆಕ್ರೋಶ ವ್ಯಕ್ತಪಡಿಸಿದೆ.

ಕೊಪ್ಪ ಸಮೀಪದ ಮಿಳಿಂದ ವಿದ್ಯಾಸಂಸ್ಥೆಯಲ್ಲಿ ಈ ಪ್ರಕರಣ ನಡೆದಿದ್ದು ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘಟನೆ ಮುಖಂಡರಾದ ರಾಮು ಐಲಾಪುರ, ತಕ್ಷಣ ಶಾಲೆಯ ಆಡಳಿತ ಮಂಡಳಿಯನ್ನು ವಜಾ ಮಾಡಬೇಕು. ಅಲ್ಲದೆ ಸರಕಾರ ಶಾಲೆಯನ್ನು ವಶಪಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಈಗಾಗಲೆ ೬ ದಿನಗಳಿಂದ ಶಾಲಾ ಆವರಣದಲ್ಲಿ ಪ್ರತಿಭಟನೆ ಧರಣಿ ನಡೆಯುತ್ತಿದ್ದು, ಜಿಲ್ಲಾಧಿಕಾರಿಗಳ ಆದೇಶಕ್ಕೂ ಮನ್ನಣೆ ನೀಡದೆ ದಲಿತ ವಿದ್ಯಾರ್ಥಿಯೊಬ್ಬನ ಭವಿಷ್ಯದೊಂದಿಗೆ ಚೆಲ್ಲಾಟ ವಾಡುತ್ತಿರುವ ಶಾಲಾ ಆಡಳಿತ ಮಂಡಳಿ ಮೇಲೆ ಕಾನೂನು ಕ್ರಮಕೈಗೊಳ್ಳುವಂತಾಗಬೇಕು ಎಂದು ರಾಮು ಅವರು ಆಗ್ರಹಿಸಿದ್ದಾರೆ.

ಮೈಸೂರು ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗೆ ೮ನೇ ತರಗತಿ ಪ್ರವೇಶವನ್ನು ತಕ್ಷಣದಿಂದಲೇ ಮಾಡುವಂತೆ ಆದೇಶ ಹೊರಡಿಸಿದರೂ ಇದುವರೆಗೆ ಆದೇಶ ಪಾಲಿಸದಿರುವ ಶಾಲೆ ಬಗ್ಗೆ ಕೂಡಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಇದೇ ಸಂದರ್ಭ ಮಾತನಾಡಿದ ಕೊಪ್ಪ ಗ್ರಾ.ಪಂ. ಅಧ್ಯಕ್ಷ ರೇಣುಕಾಸ್ವಾಮಿ, ಸ್ಥಳೀಯ ಆಡಳಿತ, ಕ್ಷೇತ್ರ ಶಾಸಕರ ಮಾತಿಗೂ ಮನ್ನಣೆ ಕೊಡದೆ ಅಧಿಕಾರಿಗಳ ಆದೇಶವನ್ನೂ ಪಾಲಿಸದಿರುವ ಬಗ್ಗೆ ಸರಕಾರಕ್ಕೆ ಪಂಚಾಯಿತಿ ಮೂಲಕ ಮನವಿ ಸಲ್ಲಿಸಿ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.

ಶಾಲಾ ಪ್ರವೇಶ ವಂಚಿತ ವಿದ್ಯಾರ್ಥಿಯ ಪೋಷಕ ಚಿಕ್ಕಹೊಸೂರು ಗ್ರಾಮದ ಮಲ್ಲಿಕ್ ಅವರು ಮಾತನಾಡಿ, ಕಳೆದ ೪೭ ದಿನಗಳಿಂದ ತನ್ನ ಮಗನಿಗೆ ಪ್ರವೇಶ ನೀಡಲು ಶಾಲಾ ಮುಖ್ಯೋಪಾಧ್ಯಾಯ ರು ಅವಕಾಶ ನೀಡಿಲ್ಲ ಎಂದರು. ಇದರಿಂದ ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಶಾಲಾ ಆಡಳಿತ ಮಂಡಳಿಯಿAದ ತನಗೆ ಮತ್ತು ತನ್ನ ಮಗನಿಗೆ ಮಾನಸಿಕ ಕಿರುಕುಳ ಉಂಟಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭ ಸ್ಥಳೀಯ ಗ್ರಾಮಪಂಚಾಯ್ತಿ ಸದಸ್ಯರಾದ ನಾರಾಯಣ, ಚಂದ್ರು, ತಾಪಂ ಸದಸ್ಯರಾದ ಮುತ್ತಣ್ಣ, ಮಾಜಿ ಸದಸ್ಯರಾದ ಶಿವಪ್ರಕಾಶ್, ಸಣ್ಣಯ್ಯ, ಸಣ್ಣಪ್ಪ, ಶಿವರಾಜು, ಚನ್ನಯ್ಯ ಮತ್ತಿತರ ಸಂಘಟನೆಗಳ ಪ್ರಮುಖರು ಇದ್ದರು.