*ಗೋಣಿಕೊಪ್ಪಲು, ಫೆ. ೧೯: ಮಾಯಮುಡಿ ಯೂತ್ ಕ್ಲಬ್ ಹಾಗೂ ಬೆಮ್ಮತ್ತಿ ಕ್ಲಬ್ ಆಯೋಜಿಸಿದ ಮಾಯಮುಡಿ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟಕ್ಕೆ ಮಾಯಮುಡಿ ಗ್ರಾ.ಪಂ. ಸದಸ್ಯ ಆಪಟ್ಟೀರ ಟಾಟು ಮೊಣ್ಣಪ್ಪ ಚಾಲನೆ ನೀಡಿದರು. ಮಾಯಮುಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೂರು ದಿನಗಳು ೯ ತಂಡಗಳ ನಡುವಿನ ಪಂದ್ಯಾಟ ನಡೆಯಲಿದೆ. ನಂತರ ಮಾತನಾಡಿದ ಅವರು, ಗ್ರಾಮೀಣ ಮಟ್ಟದಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸುವುದರಿಂದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಿದೆ. ಪಟ್ಟಣಗಳಲ್ಲಿ ಸಿಗುವಂತೆ ಹಳ್ಳಿಗಳಲ್ಲಿಯೂ ಕ್ರೀಡೆಗೆ ಉತ್ತೇಜನ ಸಿಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯುವ ಪ್ರತಿಭೆಗಳಿಗೆ ಸರಿಯಾದ ಉತ್ತೇಜನ ಸಿಕ್ಕಿದರೆ ದೇಶ ಮತ್ತು ರಣಜಿ ಕ್ರಿಕೆಟ್ ಪಂದ್ಯಾಟಗಳನ್ನು ಪ್ರತಿನಿಧಿಸುವ ಕ್ರೀಡಾಪಟುಗಳನ್ನು ಜಿಲ್ಲೆಯಲ್ಲಿ ಗುರುತಿಸಬಹುದು ಎಂದರು. ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು, ರೈತ ಸಂಘದ ಪ್ರಮುಖ ಪುಚ್ಚಿಮಾಡ ರಾಯ್ ಮಾದಪ್ಪ, ದೈಹಿಕ ಶಿಕ್ಷಕ ಸತ್ಯ, ಪ್ರೌಢಶಾಲಾ ಶಿಕ್ಷಕಿ ರೀನಾ, ಸೇರಿದಂತೆ ಎಂ.ಬಿ.ಪಿ.ಎಲ್. ಪ್ರೀಮಿಯರ್ ಲೀಗ್, ಬಿ.ವೈ.ಸಿ. ಹಾಗೂ ಎಂ.ವೈ.ಸಿ. ಫ್ರೆಂಡ್ಸ್ ಇದರ ಪದಾಧಿಕಾರಿಗಳು ಹಾಗೂ ತಂಡದ ಮಾಲೀಕರು ಹಾಜರಿದ್ದರು.