ಸಿದ್ದಾಪುರ, ಫೆ. ೧೯: ಜಿಲ್ಲೆಯಲ್ಲಿ ಅತಿದೊಡ್ಡ ಗ್ರಾಮ ಪಂಚಾಯಿತಿ ಆಗಿರುವ ಸಿದ್ದಾಪುರ ಗ್ರಾ.ಪಂ.ನಲ್ಲಿ ಈ ಬಾರಿ ಬಿಜೆಪಿ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿದ ಹಿನ್ನೆಲೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಗಣಪತಿ ಹೋಮ, ಪೂಜೆ ಮಾಡುವ ಮೂಲಕ ಅಧ್ಯಕ್ಷ-ಉಪಾಧ್ಯಕ್ಷರು ತಮ್ಮ ಆಸನವನ್ನು ಅಲಂಕರಿಸಿದರು.

ಸಿದ್ದಾಪುರದ ಗ್ರಾ.ಪಂ.ಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ೨೫ ಸ್ಥಾನಗಳ ಪೈಕಿ ಇತಿಹಾಸದಲ್ಲಿ ೧೫ ಸ್ಥಾನಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ವಿಜೇತರಾಗಿ ಗೆಲುವು ಸಾಧಿಸಿದ್ದಾರೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷೆಯಾಗಿ ತೀತಮಾಡ ರೀನಾ ತುಳಸಿ ಹಾಗೂ ಉಪಾಧ್ಯಕ್ಷರಾಗಿ ಮಹೇಶ್ ಕುಮಾರ್ ಆಯ್ಕೆಯಾದರು. ಸೋಮವಾರದಂದು ಪಂಚಾಯಿತಿ ಸಭಾಂಗಣದಲ್ಲಿ ಸದಸ್ಯರುಗಳ ಸಮ್ಮುಖದಲ್ಲಿ ಗಣಪತಿ ಹೋಮ ಪೂಜೆ ಮಾಡುವ ಮೂಲಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ತಮ್ಮ ಆಸನವನ್ನು ಅಲಂಕರಿ ಸಿದರು. ಕಚೇರಿಯಲ್ಲಿ ಕುಳಿತುಕೊಂಡು ಕೆಲ ಕಾಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿಕೇಂದ್ರ ಪ್ರಮುಖರಾದ ಪ್ರವೀಣ್, ಎಂ. ಗಿರೀಶ್, ಬಿಜೆಪಿ ಪಕ್ಷದ ಪ್ರಮುಖರಾದ ಬಿ.ಕೆ. ಅನಿಲ್ ಶೆಟ್ಟಿ, ವಿ.ವಿ ಮನೋಹರ, ಹರಿದಾಸ್, ಚುಮ್ಮಿ ಪೂವಯ್ಯ, ಎಂ.ಎ. ಆನಂದ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.