ಶ್ರೀಮಂಗಲ, ಫೆ. ೧೯: ಜಿಲ್ಲಾ ಕೇಂದ್ರದಿAದ ೮೦ ಕಿ.ಮೀ. ದೂರದಲ್ಲಿರುವ ಶ್ರೀಮಂಗಲ ಭಾಗದ ಜನರ ಅಹವಾಲು ಆಲಿಸಿ ಪರಿಹರಿಸುವ ಸಲುವಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಶ್ರೀಮಂಗಲ ಪಟ್ಟಣದಲ್ಲಿ ಗ್ರಾಮ ವಾಸ್ತವ್ಯ ಸಭೆಯ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುತ್ತಿದ್ದು, ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಿಕೊಳ್ಳುವ ಭರವಸೆಯನ್ನು ಹೊಂದಿದ್ದಾರೆ. ತಾ. ೧೯ರಂದು ಸಂಜೆ ಶ್ರೀಮಂಗಲಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆಗಮಿಸಿ ತಾ. ೨೦ರಂದು (ಇಂದು) ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದುವರೆಗೆ ಜನ ಸಂಪರ್ಕ ಸಭೆಗಳಿಗೆ ಮಾತ್ರ ಜಿಲ್ಲಾಧಿಕಾರಿ ಹಾಜರಾಗಿ ಕೆಲವು ಗಂಟೆಗಳು ಮಾತ್ರ ಸಾರ್ವಜನಿಕರ ಅಹವಾಲುಗಳನ್ನು ಆಲಿಸುತ್ತಿದ್ದರು. ಆದರೆ, ಈ ಬಾರಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಭೇಟಿಯು ಜನರಲ್ಲಿ ಹೊಸ ಭರವಸೆ ಮೂಡಿಸಿದಂತಿದ್ದು ತಮ್ಮ ಸಮಸ್ಯೆಗಳನ್ನು ಮುಂದಿಡಲು ಕಾಯುತ್ತಿದ್ದಾರೆ.

ಈಗಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ರವರು ಈ ಹಿಂದೆ ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ತೆರಳಿ ಮತ್ತು ಗ್ರಾ.ಪಂ.ಗಳಿಗೆ ಭೇಟಿ ನೀಡಿ ಗಮನ ಸೆಳೆದಿದ್ದರು. ಇದಲ್ಲದೆ, ತಮ್ಮ ಕಾರ್ಯವೈಖರಿಯಿಂದ ಸಾರ್ವಜನಿಕವಾಗಿಯೂ ಮೆಚ್ಚುಗೆ ಪಡೆದಿದ್ದರು. ಆ ಸಂದರ್ಭ ಕೊಡಗು ಜಿಲ್ಲೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುವ ಇವರಿಗೆ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಿದೆ. ಬೇರೆ ಜಿಲ್ಲೆಗಳಿಗಿಂತ ವಿಭಿನ್ನವಾದ ಭೌಗೋಳಿಕ ಹಿನ್ನೆಲೆ, ಅತಿವೃಷ್ಟಿ ವನ್ಯಪ್ರಾಣಿಗಳ ಹಾವಳಿ ಇತ್ಯಾದಿ ಸಮಸ್ಯೆಗಳಿರುವ ಕೊಡಗು ಜಿಲ್ಲೆಯ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಹೆಚ್ಚಿನ ಮಾಹಿತಿ ಇರುವುದರಿಂದ ಸಮಸ್ಯೆ ಪರಿಹಾರಕ್ಕೆ ಸುಲಭವಾಗಲಿದೆ.

ಸಮಸ್ಯೆಗಳ ಪಟ್ಟಿ :

ಶ್ರೀಮಂಗಲದಿAದ ನಾಲ್ಕೇರಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ಲಕ್ಷö್ಮಣ ತೀರ್ಥ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯು ಶಿಥಿಲಾವಸ್ಥೆಯಲ್ಲಿದ್ದು ನೂತನ ಸೇತುವೆ ನಿರ್ಮಾಣಕ್ಕೆ ಕಳೆದ ೧೫ ವರ್ಷಗಳಿಂದ ಬೇಡಿಕೆ ಇಟ್ಟಿದ್ದರೂ ಕಾರ್ಯಗತವಾಗಿರುವುದಿಲ್ಲ. ಈ ಸೇತುವೆಯ ಕೆಳಭಾಗದಲ್ಲಿ ಎರಡು ದ್ವಾರಗಳಿದ್ದು ಒಂದು ದ್ವಾರದಲ್ಲಿ ಹೂಳು ತುಂಬಿಕೊAಡಿದ್ದು ಕೇವಲ ಒಂದೇ ದ್ವಾರದಲ್ಲಿ ನೀರು ಹರಿಯುವುದರಿಂದ ಮಳೆಗಾಲದಲ್ಲಿ ತುಂಬಿ ಹರಿಯುವ ಲಕ್ಷö್ಮಣ ತೀರ್ಥ ನದಿಯ ನೀರು ಸರಾಗವಾಗಿ ಹರಿಯದೆ ತಡೆಯಾಗುವುದರಿಂದ ಸಮಸ್ಯೆ ಉಂಟಾಗಿದೆ.

ಟಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಬಿರುನಾಣಿ ಮುಖ್ಯ ರಸ್ತೆಯಿಂದ ನೆಮ್ಮಲೆ ಗ್ರಾಮಕ್ಕೆ ಪ್ರವೇಶಿಸುವ ರಸ್ತೆಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಕೆಲವು ವರ್ಷಗಳ ಹಿಂದೆ ತಾತ್ಕಾಲಿಕ ತೂಗು ಸೇತುವೆಯೊಂದನ್ನು ನಿರ್ಮಿಸಿದ್ದು ಜನತೆ ಕಾಲ್ನಡಿಗೆಯಲ್ಲಿ ಮಾತ್ರ ಸಂಚರಿಸಲು ಸಾಧ್ಯವಾಗುತ್ತಿದೆ. ವಾಹನ ಸಂಚಾರಕ್ಕೆ ಅವಕಾಶವಿಲ್ಲದೆ ಇಲ್ಲಿನ ನೂರಕ್ಕೂ ಹೆಚ್ಚು ಕುಟುಂಬದ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಶ್ರೀಮಂಗಲ ಮುಖ್ಯ ರಸ್ತೆಯಿಂದ ನೆಮ್ಮಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಹರಿಯುತ್ತಿರುವ ನಳ್ಳಂದಿ ತೋಡ್‌ಗೆ ಸೇತುವೆ ನಿರ್ಮಿಸುವ ಕಾಮಗಾರಿಯು ನೆನೆಗುದಿಗೆ ಬಿದ್ದಿದೆ. ಸೇತುವೆ ನಿರ್ಮಾಣಕ್ಕೆ ಮೂರು ಪಿಲ್ಲರ್‌ಗಳನ್ನು ನಿರ್ಮಿಸಿ ೫ ವರ್ಷ ಕಳೆದರೂ ಅನುದಾನ ಕೊರತೆಯಿಂದ ಕಾಮಗಾರಿ ಪೂರ್ಣಗೊಳ್ಳದೆ ಈ ಭಾಗದ ಜನರು ಮಳೆಗಾಲದಲ್ಲಿ ತಾತ್ಕಾಲಿಕ ಮರದ ಪಾಲದ ಮೂಲಕ ನೀರು ತುಂಬಿದ ತೋಡನ್ನು ದಾಟುವ ಅಪಾಯದ ದುಸ್ಥಿತಿ ಎದುರಿಸುತ್ತಿದ್ದಾರೆ. ಇವೆಲ್ಲ ಸಮಸ್ಯೆಗೆ ಜಿಲ್ಲಾಧಿಕಾರಿ ಆಗಮನದಿಂದ ಸರಿಯಾಗುವ ನಿರೀಕ್ಷೆ ಜನರಲ್ಲಿದೆ.