(ಕಾಯಪಂಡ ಶಶಿ ಸೋಮಯ್ಯ)

ಮಡಿಕೇರಿ, ಫೆ. ೧೯: ಮುಂದಿನ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ರಾಜ್ಯಾದ್ಯಂತ ಜೆಡಿಎಸ್ ಪಕ್ಷವನ್ನು ಪುನರ್ ಸಂಘಟನೆ ಮಾಡುವ ಪ್ರಯತ್ನಕ್ಕೆ ಪಕ್ಷ ಕೈ ಹಾಕಿದೆ. ಈ ನಿಟ್ಟಿನಲ್ಲಿ ಇದೀಗ ಇಡೀ ರಾಜ್ಯಾದ್ಯಾಂತ ಜೆಡಿಎಸ್‌ನ ಎಲ್ಲಾ ಜಿಲ್ಲಾ ಸಮಿತಿಗಳನ್ನು ಪಕ್ಷದ ಜಿಲ್ಲಾ ಅಧ್ಯಕ್ಷರನ್ನು ಹೊರತುಪಡಿಸಿದಂತೆ ವಿಸರ್ಜಿಸಲಾಗಿದೆ.

ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಅವರು ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಸದ್ಯದ ಮಟ್ಟಿಗೆ ಜಿಲ್ಲಾ ಅಧ್ಯಕ್ಷರು ಮಾತ್ರ ಅಧಿಕಾರದಲ್ಲಿ ಮುಂದುವರಿಯಲಿದ್ದು, ಅಡ್ ಹಾಕ್ ಸಮಿತಿ ರಚನೆಯೊಂದಿಗೆ ಪಕ್ಷದ ಮರು ಸಂಘಟನೆಗೆ ಚಿಂತನೆ ನಡೆದಿದೆ. ಇದೇ ವಿಚಾರವಾಗಿ ಇದಕ್ಕಾಗಿ ನಿಯೋಜನೆ ಮಾಡಲಾಗಿರುವ ಜೆಡಿಎಸ್ ಪ್ರಮುಖರ ತಂಡ ರಾಜ್ಯಾದ್ಯಂತ ಪ್ರವಾಸ ಮಾಡಿ ಈ ಪ್ರಯತ್ನ ನಡೆಸಲಿದೆ. ಇದರಂತೆ ಕೊಡಗು ಜಿಲ್ಲೆಯಲ್ಲಿ ತಾ. ೨೩ ರಂದು ಮಡಿಕೇರಿಯಲ್ಲಿ ರಾಜ್ಯದ ಪ್ರಮುಖರೊಂದಿಗೆ ಜೆಡಿಎಸ್‌ನ ಮಹತ್ವದ ಸಭೆಯೊಂದು ಆಯೋಜಿತವಾಗಿದೆ.

ಪಕ್ಷದ ಜಿಲ್ಲಾ ಅಧ್ಯಕ್ಷರಾಗಿ ಕಳೆದ ಎರಡು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಕೆ.ಎಂ. ಗಣೇಶ್ ಅವರು ಮಾತ್ರ ಇದೀಗ ಮುಂದುವರಿದಿದ್ದು, ತಾ. ೨೩ ರ ಸಭೆಯಲ್ಲಿ ಮುಂದಿನ ನಡೆಯ ಬಗ್ಗೆ ನಿರ್ಧಾರವಾಗಲಿದೆ.

ಚಿಕ್ಕಮಗಳೂರು, ಕೊಡಗು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಗೆ ನಿಯೋಜಿತವಾಗಿರುವ ಮಾಜಿ ಸಚಿವ ಬಿ.ಬಿ. ನಿಂಗಯ್ಯ ಸಂಚಾಲಕರಾಗಿರುವ ಹಾಗೂ ವೀಕ್ಷಕರು ಹಾಗೂ ಇತರ ಪ್ರಮುಖರಾಗಿರುವ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಶಾಸಕಿ ಶಾರದ ಸೂರ್ಯ ನಾರಾಯಣ್, ವೈ.ಎಸ್.ವಿ. ದತ್ತ ಮತ್ತಿತರರು ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬಹುಮತದೊಂದಿಗೆ ಆರಿಸುವದರೊಂದಿಗೆ ಹೆಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ಚಿಂತನೆಯೊAದಿಗೆ ಪಕ್ಷವನ್ನು ಈಗಿನಿಂದಲೇ ಸಂಘಟಿಸಲಾಗುತ್ತಿದೆ ಎಂದು ಕೆ.ಎಂ. ಗಣೇಶ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ ತಾವು ಯಾವದೇ ತ್ಯಾಗಕ್ಕೂ ಸಿದ್ಧವಿರುವದಾಗಿ ‘ಶಕ್ತಿ’ಯೊಂದಿಗೆ ಗಣೇಶ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ತಾವು ಮತ್ತೆ ಅಧ್ಯಕ್ಷರಾಗಿ ಮುಂದುವರಿಯಬೇಕಾದಲ್ಲಿ ಈ ಬಗ್ಗೆ ಯಾವದೇ ಅಸಮಾಧಾನಗಳು ಇರಬಾರದು, ಮುಕ್ತತೆಯಿಂದ ಕೆಲಸ ಮಾಡಲು ಅವಕಾಶಬೇಕು ಎಂದು ಅವರು ತಿಳಿಸಿದ್ದಾರೆ.

ಪ್ರಜ್ವಲ್ ರೇವಣ್ಣ ನಡೆ ಬಗ್ಗೆ ಅಸಮಾಧಾನ

ಈ ನಡುವೆ ಸೋಮವಾರಪೇಟೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರು ನಿನ್ನೆ ನಡೆಸಿದ ಸಭೆಯ ಬಗ್ಗೆ ಗಣೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧ್ಯಕ್ಷರಾಗಿರುವ ತಮ್ಮನ್ನು ಕತ್ತಲಲ್ಲಿಟ್ಟು ಈ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಇತ್ತೀಚೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿರುವ ಬಿ.ಎ. ಜೀವಿಜಯ ಅವರ ಬೆಂಬಲಿಗರು ಪಾಲ್ಗೊಂಡಿದ್ದಾರೆ. ಸಮಿತಿ ವಿಸರ್ಜನೆ ಬಳಿಕ ಅಲ್ಲಿನ ಕ್ಷೇತ್ರ ಸಮಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿರುವ ಕ್ರಮ ಸರಿಯಲ್ಲ. ಇದು ಹಲವರ ಅಸಮಾಧಾನಕ್ಕೆ ಕಾರಣವಾಗಲಿದ್ದು, ಸಂಘಟನೆಗೆ ಧಕ್ಕೆಯಾಗಲಿದೆ ಎಂಬದು ಗಣೇಶ್ ಅಭಿಪ್ರಾಯವಾಗಿದೆ.

ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶವಾಗಬಾರದು. ಕೆಲವರು ವೈಯಕ್ತಿಕವಾಗಿ ತಮ್ಮನ್ನು ಮುಗಿಸಲು ಯತ್ನಿಸಿದರೆ ಅದು ಬೇರೆ ವಿಚಾರ ಆದರೆ ಪಕ್ಷದಿಂದ ನಿರ್ಣಾಮ ಮಾಡಲು ಯತ್ನಿಸಿದರೆ ಇದಕ್ಕೆ ತಕ್ಕ ಪಾಠ ಕಲಿಸಲು ತಾವು ಸಿದ್ಧವಿರುವದಾಗಿ ಅವರು ಹೇಳಿದ್ದಾರೆ. ತಾ. ೨೩ರ ಸಭೆಯಲ್ಲಿ ಈ ಎಲ್ಲಾ ಅಂಶಗಳು ಚರ್ಚೆಗೆ ಬರುವ ಸಾಧ್ಯತೆಯಿದೆ.

ಕಳೆದ ಸಾಲಿನ ಗ್ರಾ.ಪಂ.ನಲ್ಲಿ ಜೆಡಿಎಸ್ ಕೇವಲ ೩೮ ಸ್ಥಾನ ಪಡೆದಿತ್ತು. ಆದರೆ ಈ ಬಾರಿ ೧೪೯ ರಷ್ಟು ಸ್ಥಾನದೊಂದಿಗೆ ಹಲವು ಪಂಚಾಯಿತಿಗಳಲ್ಲಿ ಬೆಂಬಲಿಗರು ಅಧ್ಯಕ್ಷ - ಉಪಾಧ್ಯಕ್ಷರಾಗಿಯೂ ನೇಮಕಗೊಂಡಿದ್ದಾರೆ. ಈ ಹಿಂದಿಗಿAತಲೂ ಸಂಘಟನೆ ಉತ್ತಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ನಡೆಯ ಬಗ್ಗೆ ತಾ. ೨೩ರ ಸಭೆಯಲ್ಲಿ ಪ್ರಮುಖರು ತೀರ್ಮಾನಿಸಲಿರುವದಾಗಿ ಅವರು ಹೇಳಿದರು.