ಮಡಿಕೇರಿ, ಫೆ. ೧೯: ಮಡಿಕೇರಿ ನಿವಾಸಿ ನೀತಾ ಕೆ.ಎಲ್. (೩೦) ಅವರು ನಾಪತ್ತೆಯಾಗಿರುವುದಾಗಿ, ನೀತಾ ಅವರ ಪತಿ ಸುರೇಶ್ ಎಂ.ಕೆ. ಅವರು ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಜನವರಿ ೨೨ ರಂದು ನೀತಾಳಿಗೆ ಆರೋಗ್ಯದ ಸಮಸ್ಯೆ ಎದುರಾದ ಕಾರಣ ಆಕೆಗೆ ಸ್ವಲ್ಪ ಹಣ ನೀಡಿ ಸುರೇಶ್ ಅವರು ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದಾರೆ. ಈ ಸಂದರ್ಭ ಸುರೇಶ್ ಅವರ ಅಕ್ಕನ ಮಗ ಕಡಂಗದ ನಿವಾಸಿ ಅಶ್ವಿತ್ ಅವರು ಸುರೇಶ್ ಅವರ ಮನೆಗೆ ಬಂದಾಗ, ಮನೆಯ ಬೀಗ ಹಾಕಲಾಗಿದ್ದನ್ನು ಗಮನಿಸಿದ ಅಶ್ವಿತ್, ಸುರೇಶ್ ಅವರಿಗೆ ವಿಷಯ ತಿಳಿಸಿದ್ದಾನೆ. ವಿಷಯ ತಿಳಿದೊಡನೆ ಸಂಜೆ ಮನೆಗೆ ಬಂದ ಸುರೇಶ್ ಅವರು ಪತ್ನಿಯನ್ನು ಹುಡುಕಾಡಿದ್ದಾರೆ. ಪತ್ನಿಯ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ನೀತಾ ಅವರ ಬಗ್ಗೆ ಮಾಹಿತಿ ದೊರೆತಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ, ದೂ: ೦೮೨೭೨-೨೨೮೭೭೭ ಅನ್ನು ಸಂಪರ್ಕಿಸಲು ಕೋರಿದೆ.

* ಹೆಬ್ಬಾಲೆಯ ನಿವಾಸಿ ಪ್ರಕಾಶ್ ಹೆಚ್.ಎಂ. (೬೦) ಅವರು ಕಾಣೆಯಾಗಿರುವ ಕುರಿತು ಅವರ ಪುತ್ರಿ ಅಶ್ವಿನಿ ಅವರು ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಅಶ್ವಿನಿ ಅವರು ಮೈಸೂರಿನಲ್ಲಿ ನೆಲೆಸಿದ್ದು, ೨೦೨೦ ರ ಡಿ. ೨೩ ರಂದು ತಮ್ಮ ತವರು ಮನೆ ಹೆಬ್ಬಾಲೆಗೆ ಆಗಮಿಸಿದ್ದಾರೆ. ಮನೆಯಲ್ಲಿ ತಂದೆ, ಪ್ರಕಾಶ್ ಅವರು ಇಲ್ಲದಿದ್ದ ಕಾರಣ, ಅಕ್ಕಪಕ್ಕದಲ್ಲಿ ವಿಚಾರಿಸಿದ್ದಾರೆ. ಆದರೂ ಪ್ರಯೋಜನವಾಗದ ಕಾರಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕಾಶ್ ಅವರಿಗೆ ಮದ್ಯಪಾನ ಮಾಡುವ ಅಭ್ಯಾಸವಿದ್ದು, ಕೆಲವೊಮ್ಮೆ ೧೫ ದಿನಗಳ ಕಾಲ ಮನೆಗೆ ಬಾರದೆ ಇದ್ದಂತಹ ಪ್ರಸಂಗಗಳೂ ನಡೆದಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಕುಶಾಲನಗರ ಗ್ರಾಮಾಂತರ ಠಾಣೆ, ದೂ: ೦೮೨೭೬-೨೭೮೪೩೩ ಅನ್ನು ಸಂಪರ್ಕಿಸಲು ಕೋರಿದೆ.

* ನಾಪೋಕ್ಲು ನಿವಾಸಿ ರಾಧಾಕೃಷ್ಣ (೪೦) ಅವರು ಕಾಣೆಯಾಗಿರುವ ಸಂಬAಧ, ಅವರ ಅಣ್ಣ ಮದನ್ ಅವರು ನಾಪೋಕ್ಲು ಠಾಣೆಗೆ ದೂರು ನೀಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರಾಧಾಕೃಷ್ಣ ಅವರನ್ನು ಜನವರಿ ೨೮ರಂದು ನಾಪೋಕ್ಲು ಮಾರುಕಟ್ಟೆಗೆ, ಅಣ್ಣ ಮದನ್ ಅವರು ಕರೆದುಕೊಂಡು ಹೋಗಿದ್ದರು. ಅವರನ್ನು ಮಾರುಕಟ್ಟೆಯಲ್ಲೆ ಕೂರಿಸಿ ಪಟ್ಟಣಕ್ಕೆ ತೆರಳಿದ ಮದನ್ ಅವರು ಮಾರುಕಟ್ಟೆಗೆ ಹಿಂತಿರುಗಿದಾಗ ರಾಧಾಕೃಷ್ಣ ಅವರು ಅಲ್ಲಿ ಇರಲಿಲ್ಲವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವ್ಯಕ್ತಿಯ ಕುರಿತು ಮಾಹಿತಿ ದೊರೆತಲ್ಲಿ ನಾಪೋಕ್ಲು ಠಾಣೆ, ದೂ: ೦೮೨೭೨-೨೩೭೨೪೦ ಅನ್ನು ಸಂಪರ್ಕಿಸಲು ಕೋರಿದೆ.

* ೧ನೇ ಮೊಣ್ಣಂಗೇರಿ ನಿವಾಸಿ ದೇವಕ್ಕಿ (೩೫) ಅವರು ಕಾಣೆಯಾಗಿರುವ ಕುರಿತು, ಅಣ್ಣ ಬಾಬು ಅವರು ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ದೇವಕ್ಕಿ ಅವರು ೧ನೇ ಮೊಣ್ಣಂಗೇರಿಯ ಮೊಜೇ ಪ್ಲಾಂಟೇಶನ್‌ಗೆ ತಾ. ೪ ರಂದು ಕೆಲಸಕ್ಕೆ ತೆರಳಿದ್ದು, ಅಲ್ಲಿಂದ ಮಧ್ಯಾಹ್ನ ೩ ಗಂಟೆಗೆ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ. ಕೃಷ್ಣ ಎಂಬಾತನೊAದಿಗೆ ಒಂದೂವರೆ ವರ್ಷದಿಂದ ಸಂಪರ್ಕದಲ್ಲಿದ್ದ ಈಕೆ ಅವರ ಮೇಲೆಯೆ ಅನುಮಾನವಿರುದಾಗಿ ಬಾಬು ಅವರು ನೀಡಿದ ಪುಕಾರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯ ಬಗ್ಗೆ ಮಾಹಿತಿ ದೊರೆತಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ, ದೂ. ೦೮೨೭೨-೨೨೮೭೭೭ ಅನ್ನು ಸಂಪರ್ಕಿಸಲು ಕೋರಿದೆ.

* ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಅಬ್ದುಲ್ ನಾಸರ್ ಟಿ.ಎಸ್. (೪೪) ಅವರು ಕಾಣೆಯಾಗಿರುವುದಾಗಿ ಅವರ ಪತ್ನಿ ಪಿ.ಎ. ನುಸೈಬ ಅವರು ತಾ. ೯ ರಂದು ಸಿದ್ದಾಪುರ ಠಾಣೆಗೆ ದೂರು ನೀಡಿದ್ದಾರೆ. ೨೦೨೦ ರ ನವೆಂಬರ್ ೧೫ ರಂದು ಬೆಂಗಳೂರಿಗೆ ಕೆಲಸಕ್ಕೆಂದು ತೆರಳುವುದಾಗಿ ಹೊರಟಿದ್ದು, ವಾಪಸ್ಸು ಮನೆಗೆ ಹಿಂತಿರುಗಲಿಲ್ಲ ಎಂದು ಪತ್ನಿ ದೂರು ನೀಡಿದ್ದಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಸಿದ್ದಾಪುರ ಠಾಣೆ ದೂ: ೦೮೨೭೪-೨೫೮೩೩೩ ಅನ್ನು ಸಂಪರ್ಕಿಸಲು ಕೋರಿದೆ.