ಸೋಮವಾರಪೇಟೆ, ಫೆ. ೧೮: ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರÀ ೫ ಪರ್ಸೆಂಟ್ ಕಮಿಷನ್ ಸರಕಾರ ಎಂದು ಬಿಜೆಪಿ ಆರೋಪ ಮಾಡುತ್ತಿತ್ತು, ಆದರೆ ಇದೀಗ ಬಿಜೆಪಿ ೧೦ ಪರ್ಸೆಂಟ್ ಕಮಿಷನ್ ಸರಕಾರ ಎಂಬದು ಜನರಿಗೆ ಮನವರಿಕೆಯಾಗುತ್ತಿದ್ದು, ಈ ಕಾರಣದಿಂದಾಗಿ ಜಿಲ್ಲೆಯಾದ್ಯಂತ ನಡೆಯುತ್ತಿರುವ ಬಹುತೇಕ ಕಾಮಗಾರಿಗಳು ಕಳಪೆಯಾಗುತ್ತಿವೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಚಂಗಪ್ಪ ಅವರು, ಕಾಮಗಾರಿಗೆ ಹಣ ಬಿಡುಗಡೆಗೊಳಿಸಲು ಶೇ. ೧೦ ಕಮಿಷನ್, ಡಿವಿಷನ್, ಸಬ್ಡಿವಿಷನ್ ಸೇರಿ ಒಟ್ಟು ಶೇ. ೩೫ ಪರ್ಸೆಂಟ್ ಲಂಚಕೊಡಬೇಕಾಗಿದೆ. ನಂತರ ಜಿಎಸ್ಟಿ, ಸೆಸ್, ಇನ್ನಿತರ ತೆರಿಗೆ ಸೇರಿ ಒಟ್ಟು ಶೇ. ೫೦ ರಷ್ಟು ಹಣವನ್ನು ಕೊಟ್ಟು ಉಳಿದ ಶೇ. ೫೦ರಲ್ಲಿ ಕಾಮಗಾರಿ ಮಾಡಬೇಕಾಗಿದೆ. ಈ ಕಾರಣದಿಂದ ಗುಣಮಟ್ಟದ ಕಾಮಗಾರಿ ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಜಿಲ್ಲೆಯ ಶಾಸಕರುಗಳು ಸದನದಲ್ಲಿ ಚರ್ಚಿಸಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕಮಿಷನ್ ದಂಧೆಗೆ ಕಡಿವಾಣ ಹಾಕಲು ಪ್ರಯತ್ನಿಸಬೇಕು. ತಪ್ಪಿದಲ್ಲಿ ಜಿಲ್ಲೆಯಲ್ಲಿ ಗುಣಮಟ್ಟದ ಕಾಮಗಾರಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಜಿಲ್ಲೆಯ ಬಹುತೇಕ ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರದ ಹಾವಳಿ ಮಿತಿಮೀರಿದ್ದು, ಬಡಜನರು, ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ದಂಧೆಯನ್ನು ತಡೆಯಬೇಕಾದ ಜಿಲ್ಲೆಯ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವುದನ್ನು ಗಮನಿಸಿದರೆ ಅವರ ಮೇಲೆಯೂ ಸಂಶಯ ಮೂಡುತ್ತಿದೆ ಎಂದರು.
ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರಿAಗ್ ವಿಭಾಗದಲ್ಲಿ ದೊಡ್ಡ ಮಟ್ಟದ ಕಮಿಷನ್ ದಂಧೆ ನಡೆಯುತ್ತಿದೆ. ಈ ಬಗ್ಗೆ ಎಸಿಬಿ ಹಾಗೂ ರಾಜ್ಯಪಾಲರಿಗೆ ದೂರು ನೀಡಲಾಗುವುದು. ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಸಂಪೂರ್ಣ ಕಳೆಪೆಯಾಗಿವೆ. ಜನಪ್ರತಿನಿಧಿಗಳು ಭೂಮಿಪೂಜೆ ಸಂದರ್ಭದಲ್ಲಿ ಕಳಪೆ ಕಾಮಗಾರಿ ಮಾಡಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎನ್ನುತ್ತಾರೆ. ಆದರೆ ಪ್ರತಿಯೊಂದು ಕಾಮಗಾರಿಗಳು ಕಳಪೆಯಾಗಿವೆ. ಆದರೆ ಇದುವರೆÀಗೂ ತಪ್ಪಿತಸ್ಥರ ಮೇಲೆ ಕ್ರಮಕೈಗೊಂಡ ನಿದರ್ಶನಗಳಿಲ್ಲ ಎಂದು ಕುಟುಕಿದರು.
ಕಳೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ ೧೦೦೦ ಅಭ್ಯರ್ಥಿಗಳಿಗೆ ತಲಾ ೨೫ ಸಾವಿರ ರೂ.ಗಳನ್ನು ನೀಡಿದ್ದಾರೆ. ಇಷ್ಟೊಂದು ಹಣ ಎಲ್ಲಿಂದ ಬಂತು? ಎಂದು ಗೋಷ್ಠಿಯಲ್ಲಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಬಿ.ಸತೀಶ್ ಪ್ರಶ್ನಿಸಿದರು.
ಲೋಕೋಪಯೋಗಿ ಇಲಾಖೆ, ಜಿಲ್ಲಾಪಂಚಾಯಿತಿ ಇಂಜಿನಿಯರಿAಗ್ ವಿಭಾಗಕ್ಕೆ ಕೆಲ ಅಧಿಕಾರಿಗಳು ೫೦ಲಕ್ಷ ಲಂಚ ನೀಡಿ ಬಂದಿರುತ್ತಾರೆ. ಅದನ್ನು ‘ದುಡಿಯುವ’ ಪ್ರಯತ್ನ ಮುಂದುವರಿಸಿದ್ದಾರೆ. ಮಡಿಕೇರಿ ಜಿಲ್ಲಾಪಂಚಾಯಿತಿಯ ಎಇಇ ವರ್ಗಾವಣೆಯಾದರೂ ಅಧಿಕಾರ ಹಸ್ತಾಂತರ ಮಾಡುತ್ತಿಲ್ಲ. ಜನಪ್ರತಿನಿಧಿಗಳು ಪ್ರಶ್ನೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಬಡವರಿಗಾಗಿಯೇ ಇರುವ ಬಿಪಿಲ್ ಕಾರ್ಡ್ ರದ್ದುಪಡಿಸಿದರೆ ಕಾಂಗ್ರೆಸ್ ಪಕ್ಷದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಕೆಪಿಸಿಸಿಯ ಪರಿಶಿಷ್ಟ ಜಾತಿ ಮತ್ತು ಪಂಗಡ ಇಲಾಖೆಯ ರಾಜ್ಯಸಂಚಾಲಕ ಬಿ.ಇ. ಜಯೇಂದ್ರ ಎಚ್ಚರಿಸಿದರು.
ಗೋಷ್ಠಿಯಲ್ಲಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ಡಿಸೋಜ, ಕಿಸಾನ್ಘಟಕದ ಅಧ್ಯಕ್ಷ ಬಿ.ಎನ್. ಬಸವರಾಜ್ ಇದ್ದರು.