ಮಡಿಕೇರಿ, ಫೆ. ೧೮: ಅಕ್ರಮವಾಗಿ ಜೂಜಾಡುತ್ತಿದ್ದ ನಾಲ್ವರು ಹಾಗೂ ಕೇರಳ ರಾಜ್ಯದ ಲಾಟರಿ ಡ್ರಾ ಫಲಿತಾಂಶ ಆಧಾರದಲ್ಲಿ ಮೊಬೈಲ್ ಫೋನ್ ಮೂಲಕ ಜೂಜಾಟ ನಡೆಸುತ್ತಿದ್ದ ಓರ್ವನನ್ನು ಜಿಲ್ಲಾ ಡಿ.ಸಿ.ಐ.ಬಿ. ಘಟಕ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪದ ೭ನೇ ಹೊಸಕೋಟೆ ಗ್ರಾಮದಲ್ಲಿ ಲಾಟರಿ ಡ್ರಾ ಫಲಿತಾಂಶದ ಆಧಾರದಲ್ಲಿ ಜೂಜಾಡುತ್ತಿದ್ದ ಹೆಚ್.ಇ. ದೇವಾರಜು ಎಂಬಾತನನ್ನು ಅಲ್ಲಿನ ಮೆಟ್ನಳ್ಳ ಜಂಕ್ಷನ್‌ನಲ್ಲಿ ಬಂಧಿಸಲಾಗಿದೆ. ಆರೋಪಿಯಿಂದ ಆಟೋ ರಿಕ್ಷಾ, ಮೊಬೈಲ್ ಫೋನ್, ರೂ. ೪೯೨೦ ನಗದು ವಶಪಡಿಸಿಕೊಳ್ಳಲಾಗಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯ ನಿಡ್ತ ಸಮೀಪದ ಮುಳ್ಳೂರು ಕಾಲೋನಿ ಬಳಿಯಲ್ಲಿ ಜೂಜಾಡುತ್ತಿದ್ದ ನಾಲ್ವರನ್ನು ಡಿ.ಸಿ.ಐ.ಬಿ. ಘಟಕ ಬಂಧಿಸಿದೆ. ಆರೋಪಿತರಿಂದ ರೂ. ೬೫೦೦ ನಗದು, ಜೂಜಾಟಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿ.ಸಿ.ಆರ್.ಬಿ. ಇನ್ಸ್ಪೆಕ್ಟರ್ ಕುಮಾರ್ ಆರಾಧ್ಯ, ಶನಿವಾರಸಂತೆ ಪಿಎಸ್‌ಐ, ದೇವರಾಜು, ಸುಂಟಿಕೊಪ್ಪ ಪಿ.ಎಸ್.ಐ. ಪುನೀತ್, ಡಿಸಿಐಬಿ ಸಿಬ್ಬಂದಿಗಳಾದ ನಿರಂಜನ್, ಶರತ್ ರೈ, ವೆಂಕಟೇಶ್, ಸುರೇಶ್, ಅನಿಲ್ ಕುಮಾರ್, ಮಹೇಶ್, ಎಂ.ಬಿ. ಸುಮತಿ, ಚಾಲಕ ಶಶಿಕುಮಾರ್ ಇದ್ದರು.