ಮಡಿಕೇರಿ, ಫೆ. ೧೯: ಕೊರೊನಾ ಅದೆಷ್ಟೊಂದು ಸಂಕಷ್ಟ ತಂದೊಡ್ಡಿದೆಯೆAಬದು ಎಲ್ಲರಿಗೂ ಗೊತ್ತಿದೆ.., ಎಷ್ಟೋ ಮಂದಿಯ ಕೆಲಸ, ಬದುಕನ್ನು ಕಸಿದುಕೊಂಡಿದೆ. ಉದ್ಯೋಗವನ್ನೂ ಕಿತ್ತುಕೊಂಡಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೂ ಅಡ್ಡಿಯುಂಟು ಮಾಡಿದೆ,,. ಇವೆಲ್ಲದರ ನಡುವೆ ಒಂದಷ್ಟು ಮಂದಿಯನ್ನು ಸೋಮಾರಿಗಳಾಗಿ ಮಾಡಿದರೆ, ಇನ್ನೊಂದಿಷ್ಟು ಯುವ ಪೀಳಿಗೆಯನ್ನು ದಾರಿ ತಪ್ಪಿಸಿದೆ..!

ಅತ್ತ ಶಾಲೆಯೂ ಇಲ್ಲದೆ., ಇತ್ತ ಕೆಲಸವೂ ಇಲ್ಲದೆ ಮನೆಯಲ್ಲೇ ಕಾಲ ಕಳೆಯುವಂತಾದ ಯುವ ಪೀಳಿಗೆ ಕೈಯಲ್ಲಿ ಕಾಸಿಲ್ಲದಂತಾದಾಗ ಕಳ್ಳತನದಂತಹ ಹಾದಿ ಹಿಡಿದಿರುವದು ಅಲ್ಲಲ್ಲಿ ಕಂಡುಬರುತ್ತಲಿದೆ. ಶಾಲಾ ಮಕ್ಕಳು ಆನ್‌ಲೈನ್ ಕ್ಲಾಸ್ ನೆಪದಲ್ಲಿ ಮೊಬೈಲ್ ಹಿಡಿದು ದಾರಿ ತಪ್ಪಿದ್ದಾರೆ. ಇನ್ನೂ ಕೆಲ ಕುಚೇಷ್ಟೆಯ ಮಕ್ಕಳು ಅಂಗಡಿ ತೋಟಗಳಿಗೆ ಕನ್ನ ಹಾಕಿ ಕೈಗೆ ಸಿಕ್ಕಿದನ್ನು ಕದ್ದು ತಿನ್ನುವ ಪ್ರವೃತ್ತಿಗೆ ಇಳಿದಿದ್ದಾರೆ.

ಆದರಲ್ಲಿ ಒಂದು ಮಕ್ಕಳ ತಂಡ ಮನೆಯೊಂದರಲ್ಲಿ ಸಾಕಿದ್ದ ಕೋಳಿಯನ್ನು ಕದ್ದು, ಸುಟ್ಟು ತಿಂದು ಪೊಲೀಸ್ ಠಾಣಾ ಮೆಟ್ಟಿಲೇರುವಂತಾದ ಪ್ರಸಂಗ ನಡೆದಿದೆ.

ಗಾಳಿಬೀಡು ಗ್ರಾಮದ ಮನೆಯೊಂದರಲ್ಲಿ ಸಾಕಿದ್ದ ಅಂದಾಜು ೪ರಿಂದ ೫ ಕೆ.ಜಿ. ತೂಗುವ, ಅಂದಾಜು ರೂ. ೫೦೦ರಷ್ಟು ಬೆಲೆ ಬಾಳುವ ಕೋಳಿಯನ್ನು ಅದೇ ಗ್ರಾಮದ ೧೦ರಿಂದ ೧೨ ವಯೋಮಾನದ ನಾಲ್ವರು ಮಕ್ಕಳು ಸೇರಿ ಕದ್ದು, ಹೊಳೆಬದಿಗೆ ಕೊಂಡೊಯ್ದು ಬೆಂಕಿಯಲ್ಲಿ ಸುಟ್ಟು ತಿಂದಿದ್ದಾರೆ. ವಿಷಯ ತಿಳಿದು ಕೋಳಿಯ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಕೋಳಿ ಕದ್ದ ಮಕ್ಕಳನ್ನು ಪೊಲೀಸರು ಪತ್ತೆ ಹಚ್ಚಿ ಪೋಷಕರ ಸಹಿತ ಠಾಣೆಗೆ ಕರೆತಂದಿದ್ದಾರೆ. ನಂತರ ಮುಚ್ಚಳಿಕೆ ಬರೆಸಿಕೊಂಡು, ಕೋಳಿಯ ಮೊತ್ತವನ್ನು ಪೋಷಕರಿಂದ ಪಡೆದು ಕೋಳಿಯ ಮಾಲೀಕರಿಗೆ ನೀಡಿದ್ದಾರೆ.