ಗೋಣಿಕೊಪ್ಪಲು, ಫೆ. ೧೯: ತನ್ನ ಒಡ ಹುಟ್ಟಿದ ಸಹೋದರ ನೀಡಿದ ಮಾತನ್ನು ಉಳಿಸಿಕೊಳ್ಳುವ ಮೂಲಕ ಪ್ರಾಮಾಣಿಕತೆ ಮೆರೆದ ಅಪರೂಪದ ಪ್ರಸಂಗ ವರದಿಯಾಗಿದೆ.

೨೦೧೦ನೇ ಇಸವಿಯಲ್ಲಿ ಮೀನು ವ್ಯಾಪಾರಸ್ಥರಿಗೆ ಬ್ಯಾಂಕಿನ ಮೂಲಕ ಆಗಿನ ಅಧ್ಯಕ್ಷ ಮಲ್ಲಂಡ ಮಂಜಪ್ಪನವರು ೮೦ ಸಾವಿರ ಹಣವನ್ನು ಸಾಲದ ರೂಪದಲ್ಲಿ ಗೋಣಿಕೊಪ್ಪಲುವಿನ ಮರ್ಚೆಂಟ್ ಬ್ಯಾಂಕ್ ವತಿಯಿಂದ ನೀಡಿದರು. ನಂತರದಲ್ಲಿ ಸಾಲ ಪಡೆದ ಹಲವು ಮಂದಿ ಸಾಲ ಮರುಪಾವತಿಸದೆ ಸಾಲವು ಹಾಗೆಯೇ ಉಳಿದಿತ್ತು. ಆ ಸಂದರ್ಭದಲ್ಲಿ ಮೀನು ವ್ಯಾಪಾರಸ್ಥರ ಮುಖಂಡರಾದ ಪೋಕುಟ್ಟಿ ಹಾಜಿಯವರು ಇತರರು ಪಡೆದಿರುವ ಸಾಲದ ಅಸಲನ್ನು ಬ್ಯಾಂಕಿಗೆ ಮರು ಪಾವತಿಸಲು ಒಪ್ಪಿಗೆ ಸೂಚಿಸಿದ್ದರು. ಮಾತಿನಂತೆ ೨೦೧೫ನೇ ಇಸವಿಯಲ್ಲಿ ಪೋಕುಟ್ಟಿಯವರು ಬ್ಯಾಂಕಿಗೆ ೧೫ ಸಾವಿರ ಹಣವನ್ನು ಸಂದಾಯ ಮಾಡಿದ್ದರು. ನಂತರದ ದಿನದಲ್ಲಿ ಪೋಕುಟ್ಟಿಯವರು ನಿಧನ ಹೊಂದಿದ ಹಿನ್ನೆಲೆ ಸಾಲವು ಹಾಗೆಯೇ ಉಳಿದಿತ್ತು. ಈ ವಿಷಯವನ್ನು ಬ್ಯಾಂಕಿನ ಈಗಿನ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚರವರು ದಿ. ಪೋಕುಟ್ಟಿಯವರ ಸಹೋದರರಾದ ಮಾಹಿನ್‌ರವರಿಗೆ ತಿಳಿಸಿದ್ದರು. ಬ್ಯಾಂಕಿನಲ್ಲಿ ಸಾಲ ಪಡೆದ ವಿಚಾರದಲ್ಲಿ ಯಾವುದೇ ಸಂಬAಧವಿಲ್ಲದಿದ್ದರೂ ತನ್ನ ಸಹೋದರ ಪೋಕುಟ್ಟಿ ನೀಡಿದ ಮಾತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬ್ಯಾಂಕಿಗೆ ಸಂದಾಯವಾಗಬೇಕಾದ ೬೫ ಸಾವಿರ ಹಣವನ್ನು ಬ್ಯಾಂಕಿಗೆ ಪಾವತಿಸಿ ತನ್ನ ಸಹೋದರನ ಮಾತನ್ನು ಉಳಿಸಿಕೊಳ್ಳುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಇದನ್ನು ಮನಗಂಡ ಮರ್ಚೆಂಟ್ ಬ್ಯಾಂಕ್‌ನ ಆಡಳಿತ ಮಂಡಳಿಯು ಮಾಹಿನ್‌ರÀರು ಕೊಟ್ಟ ಮಾತಿಗೆ ತಪ್ಪದೆ ಇರುವುದನ್ನು ಮನಗಂಡು ಮಾಹಿನ್‌ರವರನ್ನು ಬ್ಯಾಂಕಿನ ಸಭಾಂಗಣದಲ್ಲಿ ಅಧ್ಯಕ್ಷರಾದ ಅರುಣ್ ಪೂಣಚ್ಚರವರು ಸನ್ಮಾನಿಸಿ ಗೌರವಿಸಿದ್ದಾರೆ. ಇವರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಈ ಸಂದರ್ಭ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಕಡೇಮಾಡ ಸುನೀಲ್ ಮಾದಪ್ಪ, ನಿರ್ದೇಶಕರಾದ ಬಿ.ಎನ್. ಪ್ರಕಾಶ್, ನಾಮೇರ ಕೆ. ದೇವಯ್ಯ, ಸಿ.ಡಿ. ಸುಬ್ಬಯ್ಯ, ಎ.ಜೆ. ಬಾಬು, ಎ.ಕೆ. ಉಮ್ಮರ್, ಹೆಚ್.ಎನ್. ಮುರುಗನ್, ಸಿ.ಎಸ್. ಸುಮಿಸುಬ್ಬಯ್ಯ, ಕೆ.ಬಿ. ಗಿರೀಶ್ ಗಣಪತಿ, ಸಿ.ಡಿ. ಮಾದಪ್ಪ, ಕುಲ್ಲೇಟಿರ ಪ್ರವಿಮೊಣ್ಣಪ್ಪ, ಪಿ.ಜಿ. ರಾಜಶೇಖರ್, ಕೆ.ಪಿ. ಪ್ರಶಾಂತ್ ಹಾಗೂ ಕೆ.ಬಿ. ಪ್ರತಾಪ್, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಬಿ.ಇ. ಕಿರಣ್, ಎ.ಎಂ. ಶಿಲ್ಪ ಮೊದಲಾದವರು ಉಪಸ್ಥಿತರಿದ್ದರು.

-ಹೆಚ್.ಕೆ.ಜಗದೀಶ್