ಗೋಣಿಕೊಪ್ಪ ವರದಿ, ಫೆ. ೧೭: ಕರ್ನಾಟಕ ವಿದ್ಯುತ್ ನಿಗಮದ ಮಹಾಪ್ರಬಂಧಕ ಇಂಜಿನಿಯರ್ ಹಾಗೂ ಇಲಾಖೆಯ ಪದನಿಮಿತ್ತ ಹೆಚ್ಚುವರಿ ಕಾರ್ಯದರ್ಶಿಯಾಗಿರುವ ಹುದಿಕೇರಿ ಗ್ರಾಮದ ತೀತಿರ ರೋಶನ್ ಅಪ್ಪಚ್ಚು ಅವರನ್ನು ಪೊನ್ನಂಪೇಟೆ ನಾಗರಿಕ ವೇದಿಕೆ ವತಿಯಿಂದ ವೇದಿಯ ಕಚೇರಿಯಲ್ಲಿ ಭಾನುವಾರ ಸನ್ಮಾನಿಸಲಾಯಿತು.

ಈ ಸಂದರ್ಭ ಮಾತನಾಡಿದ ತೀತಿರ ರೋಶನ್ ಅಪ್ಪಚ್ಚು, ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು ಆಗಿಂದಾಗ್ಗೆ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ವೀರಾಜಪೇಟೆ, ಪೊನ್ನಂಪೇಟೆ ಬಾಗದಲ್ಲಿ ೬೬ ಕೆವಿ ವಿದ್ಯುತ್ ಮಾರ್ಗವಿದ್ದು, ಇದರೊಂದಿಗೆ ಶ್ರೀಮಂಗಲ ಭಾಗದ ೩೩ ಕೆ.ವಿ ವಿದ್ಯುತ್ ಮಾರ್ಗವನ್ನು ೬೬ ಕೆವಿ ಮಾರ್ಗಕ್ಕೆ ಮೇಲ್ದರ್ಜೆಗೇರಿಸುವ ಕಾರ್ಯ ಚಾಲನೆಯಲ್ಲಿದೆ. ಮುಂದಿನ ದಿನಗಳಲ್ಲಿ ದಕ್ಷಿಣ ಕೊಡಗಿನ ಭಾಗದ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.

ನಾಗರೀಕ ವೇದಿಕೆಯ ಉಪಾಧ್ಯಕ್ಷ ಚೆಪ್ಪುಡೀರ ಕೆ. ಸೋಮಯ್ಯ ಅವರು ಮಾತನಾಡಿ, ಪೊನ್ನಂಪೇಟೆ ನಗರ ವ್ಯಾಪ್ತಿಗೆ ಪ್ರತ್ಯೇಕ ವಿದ್ಯುತ್ ಮಾರ್ಗವಿತ್ತು. ಇದೀಗ ಗ್ರಾಮೀಣ ಭಾಗಕ್ಕೂ ಕೂಡ ಇದೇ ಮಾರ್ಗದಿಂದ ಸರಬರಾಜು ಆಗುತ್ತಿರುವುದರಿಂದ ಹೆಚ್ಚು ಸಮಸ್ಯೆಯಾಗಿದೆ. ದೂರವಾಣಿ ಇಲಾಖೆ, ನೋಂದಣಿ ಕಚೇರಿ, ಖಜಾನೆ ಕಚೇರಿ, ಬ್ಯಾಂಕ್‌ಗಳು, ಅಕ್ಕಿ ಗಿರಣಿ ವಿದ್ಯುತ್ ಸಮಸ್ಯೆ ಎದುರಿಸುತ್ತಿದೆ. ಈ ಬಗ್ಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ನಾಗರಿಕ ವೇದಿಕೆಯ ಕಾನೂನು ಸಲಹೆಗಾರ ಮತ್ರಂಡ ಪಿ ಅಪ್ಪಚ್ಚು, ಕಾರ್ಯದರ್ಶಿ ಚೆಲ್ವರಾಜ್ ಸದಸ್ಯರಾದ ನೆಲ್ಲಿರ ನೆಹರು, ಆಲಿರ ಎರ್ಮು ಹಾಜಿ, ಕಳ್ಳೇಂಗಡ ಗಣಪತಿ ಹಾಗೂ ಐನಂಡ ಬೋಪಣ್ಣ ಇತರರಿದ್ದರು.