ಸಿದ್ದಾಪುರ, ಫೆ. ೧೭: ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ವಿವಿಧ ಯೋಜನೆ ಯಡಿಯಲ್ಲಿ ನಿರ್ಮಾಣ ಮಾಡಿದ ವಿವಿಧ ರಸ್ತೆಗಳನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ೨೦೧೯-೨೦ನೇ ಸಾಲಿನಲ್ಲಿ ವಿವಿಧ ಯೋಜನೆಯಡಿಯಲ್ಲಿ ಮಂಜೂರಾದ ರೂ. ೯೦ ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ಗ್ರಾ.ಪಂ. ವ್ಯಾಪ್ತಿಯ ವಿವಿಧ ರಸ್ತೆಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆಂದು ಮಾಹಿತಿ ನೀಡಿದರು.
ಚೆನ್ನಯ್ಯನಕೋಟೆ ಗ್ರಾ.ಪಂ. ಸದಸ್ಯ ಜೆ.ಕೆ. ಅಪ್ಪಾಜಿ ಮಾತನಾಡಿ, ಶಾಸಕ ಕೆ.ಜಿ. ಬೋಪಯ್ಯ ಅವರ ಅವಿರತ ಶ್ರಮದಿಂದಾಗಿ ಮಾಲ್ದಾರೆ -ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹಾಡಿಗಳಲ್ಲಿ ವಿದ್ಯುತ್ಚ್ಛಕ್ತಿಯಿಂದಾಗಿ ಹಾಡಿಗಳಲ್ಲಿ ಬೆಳಕು ಕಂಡಿದೆ ಎಂದರು. ಅಲ್ಲದೇ ಗ್ರಾಮೀಣ ರಸ್ತೆಗಳು ಅಭಿವೃದ್ಧಿ ಆಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಾಲ್ದಾರೆ - ಚೆನ್ನಯ್ಯನಕೋಟೆ ಗ್ರಾಮಗಳ ಸಮಸ್ಯೆಗಳಿಗೆ ಶಾಸಕರು ಸಕಾಲಕ್ಕೆ ಸ್ಪಂದಿಸುತ್ತಾ ಮೂಲ ಸೌಕರ್ಯ ಒದಗಿಸಿಕೊಡುತ್ತಿದ್ದಾರೆಂದರು. ಕಾರ್ಯಕ್ರಮದಲ್ಲಿ ಚೆನ್ನಯ್ಯನಕೋಟೆ ಗ್ರಾ.ಪಂ. ಗೀತಾ, ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷ ಸಮೀರ್, ಗ್ರಾ.ಪಂ. ಸದಸ್ಯ ಮೆಕೇರಿರ ಅರುಣ್, ಬಿಜೆಪಿ ಪಕ್ಷದ ಪ್ರಮುಖರಾದ ರಘು ಕರುಂಬಯ್ಯ, ಚುಪ್ಪಣ್ಣ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧುದೇವಯ್ಯ, ನರಸಿಂಹ, ಬಿ.ಕೆ. ಅನಿಲ್ಶೆಟ್ಟಿ ಹಾಗೂ ಐಟಿಡಿಪಿ ಇಲಾಖೆಯ ಅಧಿಕಾರಿ ಗುರುಶಾಂತಪ್ಪ ಇನ್ನಿತರರು ಹಾಜರಿದ್ದರು.