ಮಡಿಕೇರಿ, ಫೆ. ೧೬; ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಜಾರಿಗೆ ತರಲಾಗಿದ್ದು, ಅಕ್ರಮ ಗೋ ಸಾಗಾಟ ಹಾಗೂ ಗೋಹತ್ಯೆಗೆ ಕಠಿಣ ಕ್ರಮ ಜರುಗಿಸಲಾಗುವದು. ಗೋಹತ್ಯೆಗೆ ರೂ. ೫೦ ಸಾವಿರದಿಂದ ೧೦ ಲಕ್ಷದವರೆಗೆ ದಂಡ ವಿಧಿಸಲಾಗುವದು. ಅಲ್ಲದೆ ಮೂರು ವರ್ಷದಿಂದ ೭ ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವದು. ಗೋವುಗಳು ಕಸಾಯಿಖಾನೆಗೆ ಹೋಗದಂತೆ ಸಂರಕ್ಷಿಸುವದು ಸರಕಾರದ ನಿಲುವಾಗಿದೆ ಎಂದು ರಾಜ್ಯ ಪಶು ಸಂಗೋಪನೆ ಇಲಾಖೆ ಸಚಿವ ಪ್ರಭು ಚೌಹಾಣ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಗೋಹತ್ಯೆ ನಿಷೇಧ ಕಾಯ್ದೆ ಸಂವಿಧಾನದ ೪೮ನೇ ಪರಿಚ್ಛೇದದಡಿ ೧೯೬೪ರಲ್ಲಿಯೇ ಜಾರಿಯಾಗಿತ್ತು. ಆದರೆ ಅದರಲ್ಲಿ ಶಿಕ್ಷೆ ಹಾಗೂ ದಂಡದ ಪ್ರಮಾಣ ಕಡಿಮೆಯಿತ್ತು. ಇದೀಗ ತಿದ್ದುಪಡಿ ಮಾಡಿ ದಂಡ ಹಾಗೂ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ೧೯೬೪ರ ಕಾಯ್ದೆಯಲ್ಲಿ ರೂ.೧೦೦೦ ದಂಡ ಹಾಗೂ ಆರು ತಿಂಗಳ ಕಾಲ ಶಿಕ್ಷೆ ಇತ್ತು. ಇದೀಗ ಮಾರ್ಪಾಡು ಮಾಡಲಾಗಿದ್ದು, ದಂಡವನ್ನು ರೂ. ೫೦ ಸಾವಿರದಿಂದ ೫ ಲಕ್ಷದವರೆಗೆ ಮತ್ತ್ತು ಮುಂದುವರಿಸಿದರೆ ೧೦ ಲಕ್ಷದವರೆಗೆ ದಂಡ ವಿಧಿಸಲಾಗುವದು. ಜೈಲು ಶಿಕ್ಷೆಯ ಅವಧಿಯನ್ನು ಆರು ತಿಂಗಳಿನಿAದ ಮೂರು ವರ್ಷದವರೆಗೆ, ಮತ್ತೂ ಮುಂದುವರಿಸಿದರೆ ೭ ವರ್ಷದವರೆಗೆ ವಿಸ್ತರಣೆ ಮಾಡಲಾಗಿದೆ. ಇದಕ್ಕೆ ರಾಜ್ಯಪಾಲರು ಕೂಡ ಅಂಕಿತ ಹಾಕಿದ್ದಾರೆ ಎಂದು ತಿಳಿಸಿದರು.

ಗೋಹತ್ಯೆ ನಿಷೇಧ ಕಾಯ್ದೆಯಡಿ ವಿಶೇಷ ನ್ಯಾಯಾಲಯ ಹಾಗೂ ವಿಶೇಷ ಕಾರಾಗೃಹಗಳನ್ನು ತೆರೆÀಯಲಾಗಿದೆ. ಗೋವುಗಳಿಗೆ ರಾಷ್ಟçದಲ್ಲಿ ಸ್ಥಾನಮಾನವಿದೆ, ಗೋಮಾತೆಯೆಂದು ಪೂಜಿಸುತ್ತೇವೆ, ಯಾವದೇ ಕಾರಣಕ್ಕೂ ಗೋವುಗಳು ಕಸಾಯಿಖಾನೆಗೆ ಹೋಗದಂತೆ ರಕ್ಷಣೆ ಮಾಡುವದು ಸರಕಾರದ ಹೊಣೆಯಾಗಿದೆ ಎಂದ ಸಚಿವರು, ರಾಜ್ಯದಲ್ಲಿ ೩ಕೋಟಿ ಜಾನುವಾರುಗಳು, ೬ ಕೋಟಿ ಕೋಳಿಗಳಿವೆ, ೪೦೨೦೦ ಪಶುವೈದ್ಯಕೀಯ ಆಸ್ಪತ್ರೆಗಳಿವೆ, ರಾಜ್ಯದ ೧೫ ಜಿಲ್ಲೆಗಳಿಗೆ ಪಶು ಸಂಜೀವಿನಿ ಆಂಬ್ಯುಲೆನ್ಸ್ಗಳನ್ನು ವಿತರಣೆ ಮಾಡಲಾಗಿದೆ. ಕೊಡಗು ಸೇರಿದಂತೆ ಉಳಿದ ೧೫ ಜಿಲ್ಲೆಗಳಿಗೆ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುವದೆಂದು ಎಂದು ಮಾಹಿತಿ ನೀಡಿದರು.

ಗೋಮಾಳ ರಕ್ಷಣೆ

ಗೋಮಾಳ ಸಂರಕ್ಷಣೆಗಾಗಿ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅತಿಕ್ರಮಣಗೊಂಡಿರುವ ಗೋಮಾಳವನ್ನು ರಕ್ಷಿಸಿ ಅಲ್ಲಿ ಪಶುಗಳಿಗೆ ಮೇವು ಬೆಳೆಸಲು ಸೂಚಿಸಲಾಗಿದೆ, ಪಶು ಸಂಗೋಪನಾ ಇಲಾಖೆಯ ಸಮಗ್ರ ಮಾಹಿತಿಗಳನ್ನು ಜನತೆಗೆ ಒದಗಿಸುವ ಸಲುವಾಗಿ ಮಾಹಿತಿ ಕೇಂದ್ರ ತೆರೆಯಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

(ಮೊದಲ ಪುಟದಿಂದ)

ಗೋಶಾಲೆಗೆ ನೆರವು

ರಾಜ್ಯದಲ್ಲಿ ಪ್ರಸ್ತುತ ೧೮೮ ಖಾಸಗಿ ಗೋಶಾಲೆಗಳಿವೆ. ರೈತರು ಸಾಕಿದ ಹಸುಗಳ, ಕರುಗಳನ್ನು ಮೂರು ವರ್ಷ ಸಲಹಿದ ಬಳಿಕ ಗೋಶಾಲೆಗೆ ಬಿಡಬಹುದಾಗಿದೆ. ಗೋಶಾಲೆ ನಡೆಸುವವರು ನೆರವಿಗಾಗಿ ಸರಕಾರಕ್ಕೆ ಮನವಿ ಸಲ್ಲಿಸಿದರೆ ಇಲಾಖೆಯಿಂದ ನೆರವು ನೀಡಲಾಗುವದು. ಅಗತ್ಯವಿದ್ದರೆ ಗೋಮಾಳದ ಜಾಗವನ್ನು ಗೋಶಾಲೆ ನಡೆಸಲು ಭೋಗ್ಯಕ್ಕೆ ನೀಡಲಾಗುವದು. ಸದ್ಯಕ್ಕೆ ಸರಕಾರದ ವತಿಯಿಂದ ಗೋಶಾಲೆ ನಡೆಸುವ ಬಗ್ಗೆ ಯಾವದೇ ಚರ್ಚೆ, ತೀರ್ಮಾನವಾಗಿಲ್ಲ, ಈ ಬಗ್ಗೆ ಮುಂದೆ ನೋಡುತ್ತೇವೆ ಎಂದು ಹೇಳಿದರು. ಕೊಡಗಿನ ಚೆಟ್ಟಿಮಾನಿಯಲ್ಲಿರುವ ಗೋಶಾಲೆ ನೋಂದಾಯಿತವಾಗಿದ್ದರೆ, ನೆರವಿಗಾಗಿ ಮನವಿ ಸಲ್ಲಿಸಿದರೆ ನೆರವು ನೀಡುವದಾಗಿ ಭರವಸೆಯಿತ್ತರು. ಪ್ರಸ್ತುತ ಉತ್ತರ ಪ್ರದೇಶದಲ್ಲಿ ೧ ಸಾವಿರ ಗೋಶಾಲೆಗಳಿವೆ, ನಮ್ಮ ರಾಜ್ಯದಲ್ಲೂ ಮಾಡಬೇಕೆಂಬ ಕನಸು ಇದೆ, ಮುಖ್ಯಮಂತ್ರಿಗಳೂ ಈ ನಿಟ್ಟಿನಲ್ಲಿ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.

ಹುದ್ದೆ ಭರ್ತಿಗೆ ಕ್ರಮ

ರಾಜ್ಯದಾದ್ಯಂತ ಇಲಾಖೆಯಲ್ಲಿ ಶೇ.೫೦ರಷ್ಟು ವಿವಿಧ ಹುದ್ದೆಗಳು ಖಾಲಿ ಇವೆ, ಇವುಗಳ ಭರ್ತಿಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವದು ಎಂದು ಸಚಿವರು ತಿಳಿಸಿದರು. ಗೋರಕ್ಷಣೆ ಕಾಯ್ದೆ ಬಂದ ಮೇಲೆ ಮುಜರಾಯಿ, ಕಂದಾಯ, ಅರಣ್ಯ ಇಲಾಖೆ, ಜಿಲ್ಲಾ ಪಂಚಾಯ್ತಿಗಳು ನಮ್ಮ ಇಲಾಖೆಯೊಂದಿಗೆ ಸಹಕರಿಸಬೇಕಿವೆ. ಗಡಿ ಪ್ರದೇಶಗಳಲ್ಲಿನ ಚೆಕ್ ಪೋಸ್ಟ್ ಗಳಲ್ಲಿ ಈ ಎಲ್ಲ ಇಲಾಖೆಯವರಿದ್ದು, ತಪಾಸಣೆ ಮಾಡಬೇಕಿದೆ. ಪ್ರತಿ ವಾಹನಗಳನ್ನು ತಪಾಸಣೆ ಮಾಡಿ ವಿವರ ದಾಖಲಿಸಿಕೊಳ್ಳಬೇಕಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವದೆಂದರು. ಗೋ ಸಂರಕ್ಷಣೆ ಮಾಡುವಲ್ಲಿ ಕೊಡಗಿನ ಜನರ ಕಾರ್ಯದ ಬಗ್ಗೆ ಸಚಿವರು ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಅಪರ ಜಿಲ್ಲಾಧಿಕಾರಿ ರೂಪ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಹಾಗೂ ಅಧಿಕಾರಿಗಳು ಇದ್ದರು.