ಕುಶಾಲನಗರ, ಫೆ. ೧೫: ಕುಶಾಲನಗರ ಪಟ್ಟಣ ಪಂಚಾಯ್ತಿ ವತಿಯಿಂದ ಕೈಗೊಂಡಿರುವ ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮ ತಾ.೧೬ ರಂದು (ಇಂದು) ನಡೆಯಲಿದೆ ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಬಿ.ಜೈವರ್ಧನ್ ತಿಳಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾಹಿತಿ ನೀಡಿದ ಅವರು, ಪಟ್ಟಣ ಪಂಚಾಯ್ತಿ ವತಿಯಿಂದ ರೂ ೭೫ ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಖಾಸಗಿ ಬಸ್ ನಿಲಾಣವನ್ನು ಶಾಸಕ ಅಪ್ಪಚ್ಚುರಂಜನ್ ಲೋಕಾರ್ಪಣೆಗೊಳಿಸಲಿದ್ದಾರೆ. ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಇದರೊಂದಿಗೆ ಕುಶಾಲನಗರದ ದಂಡಿನಪೇಟೆ ಮತ್ತು ಬಿಎಂ ರಸ್ತೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ನ್ಯಾಯಾಲಯ ಬಳಿಯ ವಾಣಿಜ್ಯ ಮಳಿಗೆಗಳ ಉದ್ಘಾಟನೆ, ಪಟ್ಟಣದ ಜಿಎಂಪಿ ಶಾಲೆಯಲ್ಲಿ ಬೋರ್ವೆಲ್ಗೆ ಪಂಪ್ ಅಳವಡಿಸುವುದು ಹಾಗೂ ಪಂಚಾಯ್ತಿ ವ್ಯಾಪ್ತಿಯ ವಿವಿಧೆಡೆ ಪೈಪ್ಲೈನ್ ಅಳವಡಿಸುವ ಕಾರ್ಯಕ್ಕೆ ಶಾಸಕರು ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ.ಸುರೇಶ್, ಸದಸ್ಯ ವಿ.ಎಸ್.ಆನಂದಕುಮಾರ್ ಮಾತನಾಡಿ ಕಾಮಗಾರಿಗಳ ವಿವರ ನೀಡಿದರು.