ಮಡಿಕೇರಿ, ಫೆ. ೧೩: ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ಬರೆದಿರುವ, ಕೊಡವ ಮಕ್ಕಡ ಕೂಟ ಪ್ರಕಟಿಸಿರುವ ‘ನಾಡಪೆದ ಆಶಾ’ ಕಾದಂಬರಿ ಚಲನಚಿತ್ರವಾಗುತ್ತಿದ್ದು, ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ದೇಶಿಸುತ್ತಿದ್ದಾರೆ. ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ನಾಯಕ ನಟನಾಗಿ ಹಾಗೂ ಪ್ರಮುಖ ಪಾತ್ರದಲ್ಲಿ ರಂಗ ಕಲಾವಿದೆ ಅಡ್ಡಂಡ ಅನಿತಾ ಕಾರ್ಯಪ್ಪ ಅವರು ಅಭಿನಯಿಸುತ್ತಿರುವ ಈ ಕೊಡವ ಚಲನಚಿತ್ರದ ಚಿತ್ರೀಕರಣಕ್ಕೆ ತಾ. ೧೫ ರಂದು ಚಾಲನೆ ನೀಡಲಾಗುತ್ತಿದೆ.

ಚಿತ್ರದ ಪೋಸ್ಟರ್‌ನ್ನು ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಅವರು ನಗರದ ಪತ್ರಿಕಾ ಭವನದಲ್ಲಿ ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು, ಇಂದು ಹೆಣ್ಣು ತನ್ನ ಕುಟುಂಬ ಮಾತ್ರವಲ್ಲದೆ ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರುತ್ತಿರುವುದು ಹೆಮ್ಮೆಯ ವಿಚಾರವೆಂದರು.

ಯಶಸ್ವಿ ಜೀವನಕ್ಕಾಗಿ ಮನೆಯ ಕಷ್ಟಗಳನ್ನು ಎದುರಿಸಿಕೊಂಡು ಹಲವು ಅಡೆತಡೆಗಳ ನಡುವೆ ಸಾಮಾಜಿಕ ಮತ್ತು ರಾಜಕೀಯವಾಗಿಯೂ ಮಹಿಳೆ ಬೆಳವಣಿಗೆಯನ್ನು ಕಾಣುತ್ತಿದ್ದಾಳೆ. ಮಹಿಳಾ ಪ್ರಧಾನ ಕಥಾವಸ್ತು ಇರುವ "ನಾಡಪೆದ ಆಶಾ" ಚಲನಚಿತ್ರಕ್ಕೆ ಎಲ್ಲರ ಪ್ರೋತ್ಸಾಹದ ಅಗತ್ಯವಿದೆ ಎಂದರು.

ಚಿತ್ರದ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮಾತನಾಡಿ, “ಕೊಡಗರ್ ಸಿಪಾಯಿ”ಯಂತೆ ಈ ಚಿತ್ರ ಕೂಡ ೧೦೦ ದಿನ ಪ್ರದರ್ಶನಗೊಳ್ಳುವ ವಿಶ್ವಾಸವಿದೆ. ವರ್ಷಕ್ಕೊಂದು ಕೊಡವ ಸಿನಿಮಾವನ್ನು ನಿರ್ದೇಶಿಸುವ ಮೂಲಕ ಭಾಷೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದಾಗಿ ಪ್ರಕಾಶ್ ಕಾರ್ಯಪ್ಪ ತಿಳಿಸಿದರು.

ತಾ. ೧೫ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಮೂರ್ನಾಡುವಿನ ಕೋಡಂಬೂರು ಗ್ರಾಮದ ಶ್ರೀ ಭದ್ರಕಾಳಿ ದೇವಾಲಯದ ಸಭಾಂಗಣದಲ್ಲಿ ನಡೆಯಲಿರುವ ಸಿನಿಮಾ ಮುಹೂರ್ತ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುನಿಲ್ ಸುಬ್ರಮಣಿ ಹಾಗೂ ರಂಗಾಯಣದ ನಿರ್ದೇಶಕ, ಕೊಡಗಿನ ಖ್ಯಾತ ರಂಗ ಕರ್ಮಿ, ಸಾಹಿತಿ, ಅಡ್ಡಂಡ ಕಾರ್ಯಪ್ಪ ಚಾಲನೆ ನೀಡಲಿದ್ದಾರೆ.

ಚಿತ್ರದ ನಾಯಕ ನಟ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ, ಯೋಧನ ಪಾತ್ರ ದೊರೆತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. "ನಾಡಪೆದ ಆಶಾ" ಚಿತ್ರ ಯಶಸ್ವಿ ಪ್ರದರ್ಶನ ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ವಾಂಚಿರ ವಿಠಲ್ ನಾಣಯ್ಯ, ತಾತಂಡ ಪ್ರಭಾ ನಾಣಯ್ಯ, ಚೆರುವಲಂಡ ಸುಜುಲ ನಾಣಯ್ಯ, ಬೊಳ್ಳಜಿರ ಬಿ.ಅಯ್ಯಪ್ಪ, ನೆಲ್ಲಚಂಡ ರಿಷಿ ಪೂವಮ್ಮ, ಅಜ್ಜಿಕುಟ್ಟಿರ ಸುಬ್ಬಯ್ಯ, ತೇಲಪಂಡ ಪವನ್ ತಮ್ಮಯ್ಯ, ಕೊಟ್ಟುಕತ್ತಿರ ಆರ್ಯ ದೇವಯ್ಯ, ಬೊಳ್ಳಜಿರ ಯಮುನಾ ಅಯ್ಯಪ್ಪ, ಈರಮಂಡ ಕೇಸರಿ ಬೋಜಮ್ಮ, ವಿಜಯ್, ಹರಿಣಿ, ಕುಶಿ ಕಾವೇರಮ್ಮ ನಟಿಸುತ್ತಿದ್ದಾರೆ. ಸುಮಾರು ೫೦ಕ್ಕೂ ಹೆಚ್ಚು ನಟರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಹೊಸ ಪ್ರತಿಭೆಗಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಚಿತ್ರ ತಂಡ ತಿಳಿಸಿದೆ.