ವೀರಾಜಪೇಟೆ, ಫೆ. ೧೩: ಯುವ ಜನತೆ ಪುಸ್ತಕ ಪ್ರೀತಿಯನ್ನು ಬೆಳಸಿಕೊಂಡು ಸದೃಡ ಸಮಾಜದ ನಿರ್ಮಾಣಕ್ಕೆ ಹಾಗೂ ಕನ್ನಡ ನಾಡು ನುಡಿಯ ರಕ್ಷಿಸುವುದರೊಂದಿಗೆ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸಹಕರಿಸುವಂತಾಗಬೇಕು ಎಂದು ಹುಣಸೂರಿನ ಹನಗೋಡು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೆ. ಬಸವರಾಜು ಹೇಳಿದರು

ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಜೋತಿ ಸಾಹಿತ್ಯ ಬಳಗದ ಉದ್ಘಾಟನೆಯ ಅಂಗವಾಗಿ 'ಸೃಜನ ಸಿರಿ' ಭಿತ್ತಿ ಪತ್ರಿಕೆ ಅನಾವರಣ ಮತ್ತು ಕನ್ನಡ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿದ ಬಸವರಾಜು ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಸುಪ್ತ ಪ್ರತಿಭೆಯನ್ನು ಹೊರಹಾಕಲು ಸೂಕ್ತ ವೇದಿಕೆಯಾಗಿ ಸೃಜನ ಶೀಲತೆಯನ್ನು ಹೆಚ್ಚಿಸುವಲ್ಲಿ ಭಿತ್ತಿ ಪತ್ರಿಕೆ ಪ್ರೋತ್ಸಾಹಿಸುತ್ತದೆ ಹಾಗೂ ನಿರಂತರ ಓದುಗಾರಿಗೆ ಹೊಸ ವಿಚಾರಗಳನ್ನು ಸೃಜಿಸುತ್ತದೆ. ಸಾಹಿತ್ಯವು ವ್ಯಕ್ತಿತ್ವ ವಿಕಸನದೊಂದಿಗೆ ಸಮಾಜದೊಂದಿಗಿನ ಪ್ರೀತಿ ಹೆಚ್ಚಿಸುವಂತೆ ಕರೆ ನೀಡಿದರು.

ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಚಿಕ್ಕ ಅಳುವಾರ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಕನ್ನಡ ಉಪನ್ಯಾಸಕ ಜಮೀರ್ ಅಹಮದ್ ಅವರು 'ಕನ್ನಡ ಭಾಷೆ ಮತ್ತು ಯುವಜನತೆ' ಎಂಬ ವಿಷಯದ ಬಗ್ಗೆ ತಮ್ಮ ಉಪನ್ಯಾಸದಲ್ಲಿ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯ ಕುರಿತು ಮಾತನಾಡಿದರು. ವಿಶ್ವ ಸಾಹಿತ್ಯಕ್ಕೆ ಕನ್ನಡ ಭಾಷೆ ಮಹತ್ತರವಾದ ಕೊಡುಗೆಯನ್ನು ನೀಡಿದೆ, ಇಂದಿನ ದಿನದಲ್ಲಿ ಹಲವು ಪ್ರಾದೇಶಿಕ ಭಾಷೆಗಳ ನಡುವೆಯೂ ಕನ್ನಡ ಭಾಷೆಯನ್ನು ಬಳಸುವ-ಬೆಳೆಸುವಂತೆ ಕರೆ ನೀಡಿದರು. ಭಾಷೆಯ ಕುರಿತು ನಿರ್ಲಕ್ಷ ಭಾವನೆ ಬೇಡ, ಭಾಷೆ ಎಂಬುದು ವ್ಯಕ್ತಿಯ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ ಎಂದು ಹೇಳಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಹೆಚ್ಚು ಬಳಕೆ ಮಾಡಬೇಕೆಂದು ತಿಳಿಸಿದರಲ್ಲದೆ ಕನ್ನಡ ನಾಡಿನ ಭಾಷಾ ವೈವಿಧ್ಯತೆ ಹಾಗೂ ಪ್ರಾಂತ್ಯದಿAದ ಪ್ರಾಂತ್ಯಕ್ಕೆ ಭಾಷೆಯ ಬದಲಾವಣೆ, ಇಂದಿನ ಯುಗದಲ್ಲಿ ಕನ್ನಡ ಭಾಷೆಯ ಕುರಿತು ಮಾತನಾಡಿದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ, ಡಿ.ಕೆ. ಉಷಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾಷೆ ಇಂದು ಹಲವು ಸವಾಲು ಗಳನ್ನು ಎದುರಿಸುತ್ತಿದೆ, ಕನ್ನಡ ನಾಡಿನಲ್ಲಿಯೇ ಕನ್ನಡ ಕಣ್ಮರೆ ಯಾಗುತ್ತಿದೆ. ಅದರಿಂದ ಭಾಷೆಯ ಕುರಿತಾಗಿ ಜಾಗೃತಿ ಮೂಡಿಸುವ ದಿಕ್ಕಿನಲ್ಲಿ ಇಂದಿನ ಉಪನ್ಯಾಸ ನೆರವಾಗಲಿದೆ ಎಂದರು.

೨೦೧೯-೨೦ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಕನ್ನಡ ಸಹಾಯಕ ಪ್ರಾಧ್ಯಾಪಕ ಆರ್. ರಘುರಾಜ್ ನಡೆಸಿಕೊಟ್ಟರು.

ಉಪನ್ಯಾಸಕ ಕೆ.ಶಿವಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಕಿರು ನಾಟಕವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಹರ್ಷಿತ ಸ್ವಾಗತಿಸಿದರೆ, ಜಯಶ್ರೀ ನಿರೂಪಿಸಿದರು.