ಮಡಿಕೇರಿ, ಫೆ. ೧೨: ಕಳೆದ ಮೂರು ವರ್ಷಗಳಿಂದ ಆಡಳಿತ ಮಂಡಳಿ ಇಲ್ಲದಂತೆ ನಡೆಯುತ್ತಿರುವ ನಗರಸಭೆ ಇನ್ನಷ್ಟು ಸಮಯ ಚುನಾವಣೆಯನ್ನು ಕಾಣದಂತೆ ಈಗಿರುವ ಸ್ಥಿತಿಯಲ್ಲಿಯೇ ಮುಂದುವರಿಯುವ ಸಾಧ್ಯತೆ ಕಂಡು ಬಂದಿದೆ.
ರಾಜ್ಯದಲ್ಲಿ ಅಧಿಕಾರ ಮುಗಿದ ಹಲವಷ್ಟು ನಗರಸಭೆಗಳಲ್ಲಿ ಚುನಾವಣೆಗೆ ಎದುರಾಗಿದ್ದ ತೊಡಕುಗಳ ನಿವಾರಣೆಯಾಗಿ ಇವುಗಳಿಗೆ ಚುನಾವಣೆ ನಡೆದಿದೆ. ಆದರೆ ಮಡಿಕೇರಿ ನಗರಸಭೆಗೆ ಚುನಾವಣೆ ಮಾತ್ರ ಯಾಕೆ ಘೋಷಣೆಯಾಗುತ್ತಿಲ್ಲ ಎಂಬ ಯಕ್ಷ ಪ್ರಶ್ನೆಗೆ ನಗರದ ನಾಗರಿಕರಿಗೆ ಸಮರ್ಪಕವಾದ ಉತ್ತರವೇ ಸಿಗುತ್ತಿಲ್ಲ. ೧೪-೩-೨೦೧೯ರಲ್ಲಿ ನಗರಸಭೆಯ ಈ ಹಿಂದಿನ ಆಡಳಿತ ಮಂಡಳಿಯ ಚುನಾಯಿತ ಸದಸ್ಯರ ಅಧಿಕಾರಾವಧಿ ಮುಗಿದಿದೆ. ಈ ಸಂದರ್ಭದಲ್ಲಿ ಮುಂದಿನ ಚುನಾವಣೆಗಾಗಿ ಸಿದ್ದಪಡಿಸಲಾಗಿದ್ದ ವಾರ್ಡ್ವಾರು ಮೀಸಲಾತಿಯ ಕುರಿತಾಗಿ ಹಲವರು ನ್ಯಾಯಾಲಯದಲ್ಲಿ ಪ್ರಶ್ನಸಿದ್ದ ಕಾರಣದಿಂದಾಗಿ ಕಾನೂನು ತೊಡಕಿನಿಂದಾಗಿ ಚುನಾವಣೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ನಗರದ ನಿವಾಸಿಗಳಾದ ಎ.ಸಿ. ಚುಮ್ಮಿದೇವಯ್ಯ, ಅಶ್ರಫ್, ಎಸ್.ಸಿ. ಸತೀಶ್ ಹಾಗೂ ಶ್ರೀಮತಿ ಬಂಗೇರ ಅವರುಗಳು ಈ ಸಂದರ್ಭ ಅರ್ಜಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಆ ಸಂದರ್ಭದಲ್ಲಿ ಮುಂದಿನ ೧೪ ದಿನಗಳಲ್ಲಿ ವಿವರ ಸಲ್ಲಿಸುವಂತೆ ಸೂಚಿಸಿದೆ ಎನ್ನಲಾಗಿದೆ. ಇದಾದ ಬಳಿಕ ಈ ಪ್ರಕ್ರಿಯೆ ಯಾವ ರೀತಿ ಮುಂದುವರಿದಿದೆ ಎಂಬ ಬಗ್ಗೆ ಯಾರಿಗೂ ಸಮರ್ಪಕವಾದ ಮಾಹಿತಿಯೇ ಇಲ್ಲ. ನಗರಸಭೆಯ ಆಯುಕ್ತರಿಗಾಗಲಿ, ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳಿಗಾಗಲಿ ಚುನಾವಣೆ ಮುಂದುವರಿಕೆಯ ಪ್ರಯತ್ನದ ಮುಂದಿನ ಭಾಗವೇನು ಎಂಬ ಅಂಶ ತಿಳಿದು ಬಂದಿರಲಿಲ.್ಲ ಇದು ಒಂದು ರೀತಿಯಲ್ಲಿ ಎಲ್ಲರಲ್ಲಿಯೂ ನಿಗೂಢತೆ ಹಾಗೂ ಕೌತುಕವನ್ನು ಸೃಷ್ಟಿಸಿದ್ದೇ ಆಗಿದೆಯಲ್ಲದೆ ಯಾವದೇ ಫಲ ಕಂಡಿರಲಿಲ್ಲ.
ಪಕ್ಷಗಳ ಮನವಿ : ಚುನಾವಣೆ ನಡೆಯದ ಕುರಿತಾಗಿ ‘ಶಕ್ತಿ’ಯೂ ಸೇರಿದಂತೆ ಮಾಧ್ಯಮಗಳಲ್ಲಿ ಹಲವಾರು ವರದಿಗಳಲ್ಲಿ ಈ ಬಗ್ಗೆ ಪ್ರಕಟವಾಗಿವೆ. ಈ ನಡುವೆ ಕೆಲವು ಸಮಯದ ಹಿಂದೆ, ಕಾಂಗ್ರೆಸ್ ಪಕ್ಷ ಹಾಗೂ ಪಂಚಾಯತ್ರಾಜ್ ಸಂಘಟನೆ ಚುನಾವಣೆ ನಡೆಸುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು.