ಮಡಿಕೇರಿ, ಫೆ. ೧೧: ತಾಯಿ ಕಾವೇರಿ ಕೊಡಗಿನ ಆರಾಧ್ಯ ದೇವತೆಯಾದರೂ, ಕುಲಮಾತೆ ಅಲ್ಲ. ಆದರೆ ಕೊಡವರು ಅನಾದಿ ಕಾಲದಿಂದಲೂ ಕಾವೇರಿ ಮಾತೆಯನ್ನು ತಮ್ಮ ಕುಲದೇವಿಯೆಂದು ಪೂಜಿಸುತ್ತಾ ಬರುತ್ತಿದ್ದಾರೆ ಎಂದು ಅಖಿಲ ಕೊಡವ ಸಮಾಜ, ಪೊಮ್ಮಕ್ಕಡ ಪರಿಷತ್ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ವಿವರಿಸಿದೆ. ತಾ. ೭ ರ ‘ಶಕ್ತಿ’ಯಲ್ಲಿ ಪ್ರಕಟಗೊಂಡ ಇವರುಗಳ ಹೇಳಿಕೆಯನ್ನು ವಿಸ್ತರಿಸಿ, ಸಮಜಾಯಿಷಿಕೆ ನೀಡಿರುವ ಇವರುಗಳು, ಕೊಡವರೆಂದರೆ ಈ ನಾಡಿನ ಪೂರ್ವಿಕರು, ಇತ್ತೀಚಿನ ದಿನಗಳಲ್ಲಿ ಕೊಡವರನ್ನು ಕಡೆಗಣಿಸುವ ಕೆಲಸ ನಡೆಯುತ್ತಿದೆ ಎಂಬ ಬಗ್ಗೆ ಇತ್ತೀಚೆಗೆ ನಡೆದ ಸಭೆಯಲ್ಲಿ ಪ್ರಸ್ತಾವನೆಯಾದುದನ್ನು ಉಲ್ಲೇಖಿಸಿದ್ದಾರೆ. ಕಾವೇರಿ ಕೊಡವರ ಕುಲದೇವಿ ಎನ್ನುವುದನ್ನು ಅವರುಗಳು ಪುನರುಚ್ಚರಿಸಿದ್ದಾರೆ
ಇಲ್ಲಿನ ಮೂಲ ತಕ್ಕಮುಖ್ಯಸ್ಥರಾದ ಮಂಡೀರ, ಮಣವಟ್ಟೀರ ಹಾಗೂ ಪಟ್ಟಮಾಡ ಕೊಡವ ಕುಟುಂಬಗಳು ತಕ್ಕ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲು ಅರ್ಹರಾಗಿದ್ದರು ಕೂಡ ಈಗಿನ ತಕ್ಕ ಮುಖ್ಯಸ್ಥರಿಗೆ ಸಹಕಾರ ನೀಡಲಾಗುತ್ತಿದೆ. ಈಗಾಗಲೇ ತಕ್ಕಾಮೆಯನ್ನು ಪುನರ್ ಪರಿಶೀಲಿಸಿ ಮೂಲ ತಕ್ಕಾಮೆಗೆ ಅವಕಾಶ ಮಾಡಿಕೊಡಬೇಕು ಎಂಬ ಕೂಗು ಹಲವಾರು ವರ್ಷದಿಂದ ಕೇಳಿಬರುತ್ತಿದೆಯಾದರು, ಇದೀಗ ಮತ್ತೆ ಅರೆಭಾಷಿಕ ಕುಟುಂಬದ ವ್ಯಕ್ತಿಯೊಬ್ಬರಿಗೆ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಕೂಡ ನೀಡಲು ಎಲ್ಲಿಲ್ಲದ ಕಸರತ್ತು ನಡೆಯುತ್ತಿದೆ. ಇದು ಸರಿಯಲ್ಲ ಈಗಾಗಲೇ ತಕ್ಕಾಮೆ ಅರೆಭಾಷಿಕ ಜನಾಂಗದ ಕೈಯಲ್ಲಿದ್ದು ಮತ್ತೆ ಅಧ್ಯಕ್ಷ ಸ್ಥಾನ ಕೂಡ ಇವರಿಗೆ ನೀಡಿದರೆ ಮತ್ತೆ ಜಿಲ್ಲೆಯಲ್ಲಿ ಅಶಾಂತಿ ತಲೆದೂರಲಿದೆ. ಕಾವೇರಿ ಮಾತೆಯನ್ನು ಕುಲದೇವಿಯೆಂದು ಪೂಜಿಸುತ್ತಿರುವ ಕೊಡವ ಜನಾಂಗದಲ್ಲಿ ಅರ್ಹರೊಬ್ಬರಿಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸ್ಥಾನ ನೀಡಬೇಕು. ಜೊತೆಗೆ ಸ್ಥಳಿಯ ಮೂಲನಿವಾಸಿಗಳಿಗೆ ಸದಸ್ಯ ಸ್ಥಾನ ನೀಡಬೇಕು, ಮೂಲ ನಿವಾಸಿಗಳಲ್ಲದೆ ಹೊರಗಿನವರಿಗೆ ನೀಡಬಾರದು ಎಂದು ಅಖಿಲ ಕೊಡವ ಸಮಾಜ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯಿಸಿವೆ.
ಈ ಕುರಿತು ವೀರಾಜಪೇಟೆಯ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮೂರು ಸಂಸ್ಥೆಗಳ ಪ್ರಮುಖರು ಈ ತೀರ್ಮಾನ ಕೈಗೊಂಡು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ತಲಕಾವೇರಿಯ ತಕ್ಕಾಮೆ ಕೊಡವರ ಕೈತಪ್ಪಿದ್ದು, ಅಧ್ಯಕ್ಷ ಸ್ಥಾನದಿಂದ ಕೂಡ ಕೊಡವರನ್ನು ದೂರವಿಡಲು ಎಲ್ಲಿಲ್ಲದ ಕಸರತ್ತು ನಡೆಯುತ್ತಿದೆ. ಇದು ಯಾವುದೇ ಕಾರಣಕ್ಕೂ ಫಲಕಾರಿಯಾಗುವುದಿಲ್ಲ. ಕಾವೇರಿ ಮಾತೆ ಕೊಡವರ ಕುಲದೇವಿಯಾಗಿದ್ದು ಆ ತಾಯಿಯ ಸೇವೆ ಮಾಡಲು ಕೊಡವರಿಗೆ ಅವಕಾಶ ಮಾಡಿಕೊಡಬೇಕಾಗಿದೆ, ಹಾಗೆ ಸಮಿತಿ ಸದಸ್ಯರ ನೇಮಕಾತಿಯಲ್ಲಿ ಕೂಡ ಕೊಡಗಿನ ಮೂಲನಿವಾಸಿಗಳನ್ನು ನೇಮಕ ಮಾಡಬೇಕಿದೆ ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಆಗ್ರಹಿಸಿದ್ದಾರೆ.