ಸಿದ್ದಾಪುರ, ಫೆ. ೧೦: ಅಂಗಡಿಯ ಮುಂದೆ ಇಟ್ಟಿದ್ದ ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವ ಘಟನೆ ಸಿದ್ದಾಪುರ ಪಟ್ಟಣದಲ್ಲಿ ತಾ.೯ರ ರಾತ್ರಿ ನಡೆದಿದೆ. ಸಿದ್ದಾಪುರದ ವೀರಾಜಪೇಟೆ ರಸ್ತೆಯಲ್ಲಿರುವ ಫ್ಯಾಶನ್ ಜ್ಯುವೆಲ್ಲರಿಯ ಸಿಬ್ಬಂದಿ ಅಫ್ನಾಸ್ ರಾತ್ರಿ ಸಮಯದಲ್ಲಿ ಅಂಗಡಿ ಮುಚ್ಚಿ ಮನೆಗೆ ತೆರಳಲು ಅಂಗಡಿಯ ಎದುರಿನಲ್ಲಿ ಬೈಕನ್ನು ನಿಲ್ಲಿಸಿದ್ದರು.
ಅಂಗಡಿಯನ್ನು ಮುಚ್ಚಿ ಹೊರಗೆ ಬಂದು ನೋಡುವಷ್ಟರಲ್ಲಿ ಬೈಕ್ ಕಾಣೆಯಾಗಿತ್ತು. ಅಫ್ನಾಸ್ಗೆ ಸೇರಿದ ಕಪ್ಪು ಬಣ್ಣದ ಬೈಕ್ (ಕೆಎ ೫೫ಇ ೨೦೬೧) ಕಳ್ಳತನ ಮಾಡಿರುವುದಾಗಿ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೈಕ್ ಕಳ್ಳತನ ಮಾಡಿರುವ ದೃಶ್ಯವು ಅಂಗಡಿಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿರುತ್ತದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪಟ್ಟಣದಲ್ಲಿ ಬೈಕ್ ಕಳ್ಳತನ ನಡೆದಿರುವುದು ಬೈಕ್ ಸವಾರರಲ್ಲಿ ಆತಂಕ ಸೃಷ್ಟಿಸಿದೆ.