ಶ್ರೀಮಂಗಲ, ಫೆ. ೧೦: ಯುನೈಟೆಡ್ ಕೊಡವ ಆರ್ಗನೈಸೇಷನ್ ಟ್ರಸ್ಟ್ ಆಶ್ರಯದಲ್ಲಿ ೨ನೇ ವರ್ಷದ ಬೇದ ಚಂಗ್ರಾAದಿ ಆಚರಣೆಯನ್ನು ಇದೇ ತಾ. ೧೨ ರಂದು ಪೇರೂರು ಗ್ರಾಮದ ತಾಪಂಡ ಕುಟುಂಬದ ಐನ್‌ಮನೆಯಲ್ಲಿ ಆಚರಿಸಲಾಗುವುದೆಂದು ಯುಕೊ ಟ್ರಸ್ಟ್ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ.

ಪೇರೂರಿನ ತಾಪಂಡ ಕುಟುಂಬದ ಐನ್‌ಮನೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೊಡವ ಮಾಸದ ಮಾಲ್ಯಾರ್ ತಿಂಗಳ ಕೊನೆಯಲ್ಲಿ ಬರುವ ಬೇದ ಚಂಗ್ರಾAದಿ ಎಂಬ ವಿಶಿಷ್ಟ ಆಚರಣೆಯು ಕೊಡವ ಹಾಗೂ ಭೂಮಿಯ ನಡುವಿನ ಒಂದು ಭಾವನಾತ್ಮಕ ಬೆಸುಗೆಯ ಸಂಕೇತವಾಗಿದೆ. ಆದರೆ, ಈ ಆಚರಣೆಯು ಕೇವಲ ಗುರುಕಾರೋಣರಿಗೆ ಮೀದಿ ಸಮರ್ಪಿಸಲು ಅತ್ಯಂತ ಪವಿತ್ರ ದಿನವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಇದು ತನ್ನ ಮಹತ್ವವನ್ನು ಕಳೆದುಕೊಂಡು ಮುಂದಿನ ಪೀಳಿಗೆಗೆ ಈ ಹಬ್ಬದ ಅರಿವೆ ಇಲ್ಲದಂತಾಗಿದೆ ಎಂದು ಅವರು ಹೇಳಿದರು.

ಕೃಷಿಯನ್ನೇ ನಂಬಿ ಭೂಮಿಯೊಂದಿಗೆ ಒಡನಾಟವನ್ನು ಹೊಂದುತ್ತ ಬದುಕನ್ನೇ ಮಣ್ಣಿನೊಂದಿಗೆ ಬೆಸೆದುಕೊಂಡು ಬದುಕುವ ಕೊಡವ ಸಂಸ್ಕೃತಿಯ ಅತ್ಯಂತ ಮಹತ್ವದ ಹಬ್ಬವಾದ ಈ ಬೇದ ಚಂಗ್ರಾAದಿಯನ್ನು ಕಳೆದ ೨ ವರ್ಷಗಳಿಂದ ಆಚರಿಸುತ್ತಿದ್ದು, ಇದರ ಕುರಿತಂತೆ ಜನಾಂಗದಲ್ಲಿ ಅರಿವು ಮೂಡಿಸಲಾಗುತ್ತಿದೆ, ಆ ಮೂಲಕ ಕೊಡವರ ಅಸ್ಥಿತ್ವ ಕೊಡವಾಮೆಯನ್ನು ಬೇರು ಮಟ್ಟದಿಂದ ಸುಭದ್ರಗೊಳಿಸುವ ಪ್ರಕ್ರಿಯೆಗೆ ಯುಕೊ ಸಂಘಟನೆಯು ಚಾಲನೆ ನೀಡಿದ್ದು, ಇದಕ್ಕೆ ಉತ್ತಮವಾದ ಸ್ಪಂದನ ದೊರಕುತ್ತಿದೆ ಎಂದು ಅವರು ತಿಳಿಸಿದರು.

ಆ ದಿನ ತಾಪಂಡ ಐನ್‌ಮನೆಯ ನೆಲ್ಲಕ್ಕಿ ನಡುಬಾಡೆಯಲ್ಲಿ ಪ್ರಾರ್ಥಿಸಿ ಆ ನಂತರ ತಾಪಂಡ ಕುಟುಂಬದ ‘ಆಕತೆವಂಕ್ಕೆ’ ತೆರಳಿ ‘ನಡು ಬೇದ’ ಆಚರಣೆಯ ಪ್ರಕ್ರಿಯೆಗಳು ನಡೆಯಲಿದ್ದು, ಆ ನಂತರ ಸಭಾ ಕಾರ್ಯಕ್ರಮದಲ್ಲಿ ಬೇದ ಚಂಗ್ರಾAದಿಯ ಕುರಿತಂತೆ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.