ಮಡಿಕೇರಿ, ಫೆ. ೯: ಕೋವಿಡ್ ಲಸಿಕಾ ಎರಡನೇ ಹಂತದ ಅಭಿಯಾನವು ಕೊಡಗು ಜಿಲ್ಲೆಯ ೧೦ ಕಡೆಗಳಲ್ಲಿ ನಡೆಯಿತು. ೧೯೩೫ ಗುರಿಯಲ್ಲಿ ೩೦೯ ಮಂದಿ ಲಸಿಕೆ ಪಡೆದಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ತಿಳಿಸಿದ್ದಾರೆ.ಕಂದಾಯ ಇಲಾಖೆ, ಪಂಚಾಯತ್‌ರಾಜ್, ಪೊಲೀಸ್ ಇಲಾಖೆಯ ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ನಗರಸಭೆ ಮತ್ತು ಪಟ್ಟಣ ಪಂಚಾಯತ್ ಪೌರ ಕಾರ್ಮಿಕರಿಗೆ ಲಸಿಕೆ ನೀಡಲಾಯಿತು. ಕೋವಿಡ್ ಲಸಿಕೆಯನ್ನು ಎರಡು ಹಂತದಲ್ಲಿ ನೀಡಬೇಕಿದ್ದು, ಈಗಾಗಲೇ ಮೊದಲ ಹಂತದಲ್ಲಿ ಆರೋಗ್ಯ ಇಲಾಖೆಯ ಒಟ್ಟು ೬೫೬೦ ಫಲಾನುಭವಿಗಳಲ್ಲಿ ೪,೪೩೨ ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ. ಒಟ್ಟು ಶೇ. ೬೭.೫೬ ಗುರಿ ಸಾಧಿಸಿದ್ದು, ಜಿಲ್ಲೆಯು ರಾಜ್ಯದಲ್ಲಿ ನಾಲ್ಕನೆಯ ಸ್ಥಾನದಲ್ಲಿದೆ. ಇತರೆ ಇಲಾಖೆಯ ಎಲ್ಲಾ ನೌಕರರು ಈ ಲಸಿಕೆಯನ್ನು ತಮ್ಮ ದೂರವಾಣಿ ಸಂಖ್ಯೆಗೆ ಸಂದೇಶ ಬಂದ ನಂತರ ಸಂದೇಶದಲ್ಲಿ ತಿಳಿಸಲಾಗಿರುವ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದು ಕೊಳ್ಳಬಹುದಾಗಿದೆ ಎಂದು ಡಾ.ಮೋಹನ್ ತಿಳಿಸಿದ್ದಾರೆ.