*ಗೋಣಿಕೊಪ್ಪಲು, ಫೆ. ೯: ರೈತರಿಂದ ಮಾತ್ರ ದೇಶ ಸಮೃದ್ಧಿ ಹೊಂದಲು ಸಾಧ್ಯ. ಇಡೀ ಪ್ರಪಂಚದ ಹಸಿವನ್ನು ನೀಗಿಸುವ ಶಕ್ತಿ ರೈತನಿಗಿದೆ. ಹೀಗಾಗಿ ರೈತ ಪರಮಾತ್ಮನ ಸ್ವರೂಪ ಎಂದು ಶಾಸಕ ಕೆ.ಜಿ. ಬೋಪಯ್ಯ ಬಣ್ಣಿಸಿದರು. ಪೊನ್ನಂಪೇಟೆ ನಾಡು, ಎ.ಪಿ.ಸಿ.ಎಂ. ನೂತನ ಗೊಬ್ಬರ ಗೋದಾಮು ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಪೊನ್ನಂಪೇಟೆ ಎ.ಪಿ.ಸಿ.ಎಂ. ೨೭೦೪ ಸದಸ್ಯರನ್ನು ಹೊಂದಿದೆ. ಇವರ ಅನುಕೂಲಕ್ಕಾಗಿ ಆಡಳಿತ ಮಂಡಳಿ ೯೦ ಲಕ್ಷ ನ್ಯಾಷನಲ್ ಕೋಪರೇಟಿವ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ಅನುದಾನದಿಂದ ೧೦೦೦ ಮೆಟ್ರಿಕ್ ಟನ್ ನೀಗಿಸುವ ಗೊಬ್ಬರ ಗೋದಾಮನ್ನು ರೈತರ ಅನುಕೂಲಕ್ಕಾಗಿ ನಿರ್ಮಿಸುತ್ತಿದೆ ಎಂದು ಶಾಸಕರು ಮಾಹಿತಿ ನೀಡಿದರು.

ಪೊನ್ನಂಪೇಟೆ ಎ.ಪಿ.ಸಿ.ಎಂ. ರೈತರ ಅನುಕೂಲಕ್ಕಾಗಿ ಹಲವು ಕಾರ್ಯಗತ ಯೋಜನೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸುತ್ತದೆ ಹೀಗಾಗಿ ಹತ್ಯಾರು ವಿಭಾಗ, ಪೆಟ್ರೋಲ್ ಬಂಕ್, ಬ್ಯಾಂಕ್ ವಹಿವಾಟುಗಳು ಲಾಭದಾಯಕವಾಗಿ ನಡೆಯುತ್ತಿದೆ ಇದಕ್ಕೆ ಬ್ಯಾಂಕಿನ ಆಡಳಿತದಲ್ಲಿನ ಪಾರದರ್ಶಕತೆಯೇ ಮುಖ್ಯ ಕಾರಣ ಎಂದು ಶ್ಲಾಘಿಸಿದರು. ಎ.ಪಿ.ಸಿ.ಎಂ. ಅಧ್ಯಕ್ಷ ಮುದ್ದಿಯಡ ಡಿ. ಮಂಜುಗಣಪತಿ, ಉಪಾಧ್ಯಕ್ಷ ಪದಾರ್ಥಿ ಎಸ್. ಮಂಜುನಾಥ್, ನಿರ್ದೆಶಕರುಗಳಾದ ಚೋಡುಮಾಡ ಪಿ. ಶ್ಯಾಮ್, ಬೊಟ್ಟಂಗಡ ಎಸ್. ದಶಮಿ ದೇಚಮ್ಮ, ಐನಂಡ ಕೆ. ಬೋಪಣ್ಣ, ಮುದ್ದಿಯಡ ಎ. ಸೋಮಯ್ಯ, ಮಾಚಂಗಡ ಬಿ. ಮೊಣ್ಣಪ್ಪ, ಮೂಕಳೇರ ಪಿ. ಶಾರದ, ಬಿ.ಎಸ್. ರಾಜಚಂದ್ರಶೇಖರ್, ಪುತ್ತಾಮನೆ ದೇವದಾಸ್ ಜೀವನ್, ಹೆಚ್.ಹೆಚ್. ತಮ್ಮಯ್ಯ, ಎಂ. ಡಿಕ್ಕಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಟಿ. ಪೂನಂ, ಗುತ್ತಿಗೆದಾರರಾದ ಕೆ.ಎ. ಜಾನ್, ಫೆಸ್ಟಸ್ ಜಾನ್, ಎ.ಪಿ.ಸಿ.ಎಂ. ಸಿಬ್ಬಂದಿಗಳು ಇದ್ದರು.